ಅಂಧತ್ವವನ್ನು ಮೆಟ್ಟಿನಿಂತು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಹಳ್ಳಿ ಪ್ರತಿಭೆ ಲೋಕೇಶ್

Public TV
3 Min Read
LOKESH

ಕೊಪ್ಪಳ: ಕ್ರೀಡೆಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಕ್ರಿಕೆಟ್ ಆಟದ ಅಂಧರ ವಿಭಾಗದಲ್ಲಿ ಭಾರತ ದೇಶದ ಬಿ3 ತಂಡಕ್ಕೆ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಯುವಕ ಆಯ್ಕೆಯಾಗಿದ್ದಾರೆ.

BLIND TEAM INDIA

ಚಿಕ್ಕಬೆಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿರುವ ಯಡಳ್ಳಿ ಗ್ರಾಮದ ಲೋಕೇಶ್ ಎನ್ನುವ ಯುವಕ ಸದ್ಯ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ಹಳ್ಳಿ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಹಾಗೇ ಮಾಡಿದ್ದಾರೆ. ಆಯ್ಕೆಯಾಗಿ ಐದಾರು ವರ್ಷಗಳು ಕಳೆದಿದ್ದು, ಇದೀಗ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ಯುವ ಪ್ರತಿಭೆ ಅಂಗವಿಕಲತೆಯನ್ನು ವರವನ್ನಾಗಿ ಮಾಡಿಕೊಂಡು ಮಿಂಚುಹರಿಸುತ್ತಿದ್ದಾರೆ. ಕಡು ಬಡತನವನ್ನು ಅನುಭವಿಸುತ್ತಿರುವ ರೇಣುಕಪ್ಪ, ಹುಲಿಗೇಮ್ಮ ದಂಪತಿಗಳ ನಾಲ್ಕನೇ ಮಗನಾದ ಲೋಕೇಶ್ ಕಣ್ಣು ಕಾಣದೆ ಹುಟ್ಟು ಅಂಧತ್ವವನ್ನು ಪಡೆದುಕೊಂಡಿದ್ದಾರೆ. ಅಂಧತ್ವವನ್ನು ವರವನ್ನಾಗಿ ಮಾಡಿಕೊಂಡಿರುವ ಲೋಕೇಶ್ ಕ್ರಿಕೆಟ್‍ನಲ್ಲಿ ಆಸಕ್ತಿಯನ್ನು ಹೊಂದಿದ್ದು, ಅದರಲ್ಲಿಯೇ ಮುಂದುವರಿದು ಸದ್ಯ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ಹೆಸರು ವಾಸಿಯಾಗಿದ್ದಾರೆ. ಇದನ್ನೂ ಓದಿ: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ

BLIND TEAM INDIA 1

ಗ್ರಾಮದಲ್ಲಿ ಕ್ರಿಕೆಟ್ ಆಡುವ ಮೂಲಕ ಆಸಕ್ತಿಯನ್ನು ರೂಡಿಸಿಕೊಂಡಿದ್ದ ಲೋಕೇಶ್ ಕಳೆದ 15 ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ, ಕೂಲಿ ಕೆಲಸವನ್ನು ಮಾಡುವ ಮೂಲಕ ಸಮರ್ಥ ಟ್ರಸ್ಟ್ ವತಿಯಿಂದ ಕ್ರಿಕೆಟ್ ಅಭ್ಯಾಸವನ್ನು ನಡೆಸಿದ್ದಾರೆ. ಬೆಂಗಳೂರಿನಲ್ಲಿ ರಣಜಿ ತಂಡಗಳಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಅದರ ಫಲವಾಗಿ ಭಾರತ ತಂಡದ ಅಂಧರ ವಿಭಾಗಕ್ಕೆ ಆಯ್ಕೆಯಾಗಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು

2016 ರಲ್ಲಿ ಟೀಂ ಇಂಡಿಯಾಗೆ ಆಯ್ಕೆ:
ರಣಜಿಯಲ್ಲಿ ಉತ್ತಮ ಪ್ರದರ್ಶನದಿಂದ ಭಾರತದ ಬಿ3 ವಿಭಾಗದ ಅಂಧರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಲೋಕೇಶ್, 2016 ರಲ್ಲಿ ಅಂಧರ ಏಷ್ಯಾ ಕಪ್ ಪಂದ್ಯಾವಳಿ ಆಡಿದ್ದಾರೆ. ಬಾಂಗ್ಲಾದೇಶದಲ್ಲಿ ಏಷ್ಯ ಕಪ್ ಪಂದ್ಯಗಳನ್ನು ಆಡುವ ಮೂಲಕ ಟೂರ್ನಿಯಲ್ಲಿ ಆಲ್‌ರೌಂಡರ್ ಪ್ರದರ್ಶನದ ಮೂಲಕ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ಟ್ರೋಪಿಯಲ್ಲಿ ಭಾಗವಹಿಸಿದ್ದಾರೆ. 2019ರಲ್ಲಿ ನೇಪಾಳನಲ್ಲಿ ಭಾರತ ಮತ್ತು ನೇಪಾಳ ಪಂದ್ಯಾವಳಿ ಉತ್ತಮ ಪ್ರದರ್ಶನ ವನ್ನು ತೊರಿಸಿದ್ದಾರೆ. 2021 ಡಿಸೆಂಬರ್‌ನಲ್ಲಿ ಮೂರು ದಿನಗಳ ಕಾಲ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮ್ಯಾನ್‌ ಆಗಿ ಆಡುವ ಮೂಲಕ ಅಬ್ಬರದ ಬ್ಯಾಟಿಂಗ್ ಮಾಡಿ, ಲೋಕೇಶ್ 142 ರನ್‍ಗಳನ್ನು ಕಲೆ ಹಾಕಿ ಮಿಂಚಿದ್ದಾರೆ. ಸರಣಿಯಲ್ಲಿ ಉತ್ತಮ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸರಣಿಯ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಲೋಕೇಶ್ ಅವರು ಪಡೆದುಕೊಂಡಿದ್ದರು.

LOKESH

ಬಡವತದಲ್ಲಿ ಕುಟುಂಬ:
ಲೋಕೇಶ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದರು ಸಹ ತಾಲೂಕಿನ ಯಡಳ್ಳಿ ಗ್ರಾಮದ ಪುಟ್ಟ ಮನೆಯಲ್ಲಿ ಇರುವ ಲೋಕೇಶ್ ಅವರ ತಂದೆ, ತಾಯಿ ಈಗಲೂ ಸಹ ಬಡತನದಲ್ಲೇ ಕಾಲ ಕಳೆಯುತ್ತಿದ್ದಾರೆ. ಇರುವ ಕೊಂಚ ಜಮೀನಿನಲ್ಲಿಯೇ ಕೃಷಿ ಮಾಡಿಕೊಂಡು, ಬೆಟ್ಟದಲ್ಲಿ ಸಿಗುವ ಕಟ್ಟಿಗೆಗಳಿಂದ ಮನೆ ಬಳಕೆ ವಸ್ತುಗಳನ್ನು ಸಿದ್ಧ ಪಡಿಸಿ, ಮಾರುಕಟ್ಟೆಯಲ್ಲಿ ಅವುಗಳನ್ನು ಮಾರಾಟ ಮಾಡಿ, ಬದುಕು ಸಾಗಿಸುತ್ತಿದ್ದಾರೆ. ಮಗ ಉತ್ತಮ ಪ್ರದರ್ಶನ ತೋರಿ ಭಾರತ ದೇಶದಲ್ಲಿಯೇ ಹೆಸರು ವಾಸಿಯಾದರೂ ಸಹ ಪಾಲಕರು ಮಾತ್ರ ಬಡತನದಲ್ಲಿ ಕೈತೊಳೆಯುತ್ತಿದ್ದಾರೆ. ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿ ನಾಲ್ಕೈದು ವರ್ಷಗಳು ಕಳೆದರೂ ಸಹ ರಾಜ್ಯ ಸರ್ಕಾರ ಗುರುತಿಸಿ ಗೌರವಿಸಲು ಮುಂದಾಗಿಲ್ಲ. ಪಂದ್ಯಗಳನ್ನು ಆಡಿದ ವೇಳೆಯಲ್ಲಿ ದೊರೆಯುವ ಕೊಂಚ ಆದಾಯದಲ್ಲಿಯೇ ಬದುಕು ಸಾಗಿಸಬೇಕಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಸಹಾಯ ಧನಗಳು ಸಹ ದೊರೆತಿಲ್ಲ ಎನ್ನುವುದು ಲೋಕೇಶ್ ಅವರ ಮಾತಾಗಿದ್ದು, 2022ರಲ್ಲಿ ನಡೆಯಲಿರುವ ಅಂಧರ ವಿಶ್ವಕಪ್ ಪಂದ್ಯಾವಳಿಯನ್ನು ಆಡುವ ಕನಸು ಕಟ್ಟಿಕೊಂಡು ಕ್ರಿಕೆಟ್ ಆಟದ ಮೂಲಕ ಜೀವನ ರೂಪಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *