ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಕಳೆದ ವಾರ ಐಇಡಿ ಸ್ಫೋಟಿಸಲಾಗಿತ್ತು. ಜೈಶ್-ಎ-ಮೊಹಮ್ಮದ್ ಸಂಘಟನೆಯ 19ರ ಯುವಕ ಮುನ್ನಾ ಲಾಹೋರಿ ಎಂಬಾತನೇ ಐಇಡಿ ಬಾಂಬ್ ತಯಾರಿಸಿದ್ದು, ಇದೀಗ ಆತನ ಬಂಧನಕ್ಕಾಗಿ ಭದ್ರತಾ ಪಡೆ ಮತ್ತು ಪೊಲೀಸರು ಮುಂದಾಗಿದ್ದಾರೆ.
ಜೂನ್ 17ರಂದು ನಡೆದ ಸ್ಫೋಟದಲ್ಲಿ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದು, ಕೆಲವರು ಗಾಯಗೊಂಡಿದ್ದರು. ಸ್ಫೋಟ ತಯಾರಿಕೆಯ ತಜ್ಞನಾಗಿರುವ ನ ಮುನ್ನಾ ಲಾಹೋರಿ ಬಂಧನಕ್ಕಾಗಿ ಪುಲ್ವಾಮಾ ಮತ್ತು ಶೋಪಿಯಾನ್ ವ್ಯಾಪ್ತಿಯಲ್ಲಿ ಹುಡುಕಾಟ ನಡೆದಿದೆ. ಈ ಶೋಧ ಕಾರ್ಯಾಚರಣೆ ಪ್ರಮುಖವಾಗಿದ್ದು, ಮುನ್ನಾ ಕಳೆದ ವರ್ಷ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳೊಂದಿಗೆ ಗಡಿ ಪ್ರವೇಶಿಸಿದ್ದನು.
Advertisement
Advertisement
ಮುನ್ನಾ ಮತ್ತು ಆತನ ಸಹಚರರು ಪುಲ್ವಾಮಾ ಹಾಗೂ ಶೋಪಿಯಾನ್ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ವಾಸವಾಗಿದ್ದು, ಸ್ಥಳೀಯ ಕಾಶ್ಮೀರಿ ಯುವಕರನ್ನು ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಕಾಶ್ಮೀರಿ ಯುವಕರಿಗೆ ಶಸ್ತ್ರಾಸ್ತಗಳ ಚಲಾವಣೆ ಮತ್ತು ಸ್ಫೋಟ ತಯಾರಿಕೆಯ ತರಬೇತಿಯನ್ನು ನೀಡಲಾಗುತ್ತಿದೆ. ಪುಲ್ವಾಮಾ ಮಾದರಿಯಲ್ಲಿಯೇ ಹಲವು ಭಾಗಗಳಲ್ಲಿ ಸ್ಫೋಟದ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಖಾಸಗಿ ವಾಹಿನಿ ಜೊತೆ ಮಾತನಾಡಿರುವ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿ, ಉಗ್ರರ ಸ್ಫೋಟದ ಕಾರ್ಯಶೈಲಿಯಲ್ಲಿ ಹೆಚ್ಚು ಬದಲಾವಣೆಯಾಗಿದೆ. ತಂತ್ರಜ್ಞಾನ ಬಳಸಿಕೊಂಡು ತಮ್ಮ ಜೀವವನ್ನು ಉಳಿಸಿಕೊಂಡು ಐಇಡಿಯಂತಹ ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸಲು ಮುಂದಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ, ಶೋಪಿಯಾನ್, ಕುಲ್‍ಗಾಮ್ ಮತ್ತು ಅನಂತ್‍ನಾಗ್ ಜಿಲ್ಲೆಗಳು ಹೆಚ್ಚು ಉಗ್ರರ ದಾಳಿಗೆ ಒಳಗಾಗಿವೆ. ಪುಲ್ವಾಮಾದಲ್ಲಿಯೇ ಹೆಚ್ಚು ಬಾರಿ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರು ಐಇಡಿ ಸ್ಫೋಟಿಸುತ್ತಿವದರಿಂದ ಈ ಜಿಲ್ಲೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಘಾಟಿ ಭಾಗಗಳಲ್ಲಿಯೂ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದೆ. ಕಳೆದ ಆರು ತಿಂಗಳಲ್ಲಿ ಕಾಶ್ಮೀರದಲ್ಲಿ ಬರೋಬ್ಬರಿ 117 ಉಗ್ರರನ್ನು ಸದೆಬಡೆಯಲಾಗಿದೆ. 117ರಲ್ಲಿ 89 ಉಗ್ರರು ಸ್ಥಳೀಯ ನಿವಾಸಿಗಳಾಗಿದ್ದಾರೆ.