ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ಜೀವ ಉಳಿಸಿದ ವಾಯು ಸೇನೆ- ವಿಡಿಯೋ ವೈರಲ್

Public TV
1 Min Read
air force 4

ಶ್ರೀನಗರ: ಜಮ್ಮುವಿನ ತಾವಿ ನದಿಗೆ ಏಕಾಏಕಿ ನೀರು ಹರಿಸಿದ ಪರಿಣಾಮ ಇಲ್ಲಿನ ಸೇತುವೆ ಬಳಿ ಕುಳಿತಿದ್ದ ನಾಲ್ಕು ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಈ ಬಗ್ಗೆ ಭಾರತೀಯ ವಾಯು ಸೇನೆಗೆ ಮಾಹಿತಿ ತಿಳಿದು ಸಂತ್ರಸ್ತರನ್ನು ಯೋಧರು ಕೂಡಲೇ ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಣೆ ಮಾಡಿದ್ದಾರೆ.

ವಾಯು ಸೇನೆಯ ಈ ಸಾಹಸದ ವಿಡಿಯೋ ಇದೀಗ ವೈರಲ್ ಆಗಿದ್ದು, ಯೋಧರ ಕಾರ್ಯವನ್ನು ಎಲ್ಲರು ಹಾಡಿ ಹೊಗಳಿದ್ದಾರೆ. ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಮ್ಮುವಿನ ತಾವಿ ನದಿಗೆ ಏಕಾಏಕಿ ನೀರು ಹರಿದು ಬಂದಿದೆ. ಈ ಹಿನ್ನೆಲೆ ತಾವಿ ನದಿಯ ಸೇತುವೆ ಬಳಿ ಕುಳಿತಿದ್ದ ಹಲವರು ಅಪಾಯಕ್ಕೆ ಸಿಲುಕಿದ್ದರು. ಆಗ ಅಲ್ಲಿ ಕರ್ತವ್ಯನಿರತರಾಗಿದ್ದ ಭಾರತೀಯ ಸೇನೆಯ ಯೋಧರು ಕೂಡಲೇ ವಿಚಾರವನ್ನು ನಿಯಂತ್ರಣ ಕೊಠಡಿಗೆ ತಿಳಿಸಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ವಾಯು ಸೇನೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೆಲಿಕಾಪ್ಟರ್ ರವಾನಿಸಿ ಸಂತ್ರಸ್ತರ ರಕ್ಷಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ತಂಡ ಹೆಲಿಕಾಪ್ಟರ್‍ನಲ್ಲಿದ್ದ ಹಗ್ಗದ ಮೂಲಕ ಓರ್ವ ಯೋಧ ಕೆಳಗಡೆ ಇಳಿದು ಅಪಾಯಕ್ಕೆ ಸಿಲುಕಿದ್ದವರಿಗೆ ಹಗ್ಗ ಕಟ್ಟಿ ಅದರ ಮೂಲಕ ಮೇಲಕ್ಕೆ ಕರೆದುಕೊಂಡಿದ್ದಾರೆ.

ಹೀಗೆ ಸೇತುವೆ ಬಳಿ ಇದ್ದ ಎಲ್ಲರನ್ನೂ ಏರ್ ಲಿಫ್ಟ್ ಮೂಲಕ ರಕ್ಷಣೆ ಮಾಡಲಾಗಿದೆ. ಈ ವೇಳೆ ಸೇನೆಯ ಸಾಹಸವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರನ್ನು ರಕ್ಷಿಸುವ ಸೇನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *