ಚಂದ್ರಯಾನ, ಮಂಗಳಯಾನ ಮಾಡಿ ಬಾಹ್ಯಾಕಾಶಕ್ಕೆ ಜಿಗಿದಿದ್ದ ಭಾರತ… ಈಗ ಪಾತಾಳದ ಖನಿಜಗಳ ವಿಸ್ಮಯ ಲೋಕಕ್ಕೂ ಕಾಲಿಟ್ಟಿದೆ. ಇತ್ತೀಚೆಗೆ ಹಿಂದೂ ಮಹಾಸಾಗರದ ಕಾರ್ಲ್ಸ್‌ಬರ್ಗ್ ರಿಡ್ಜ್‌ನಲ್ಲಿ ಪಾಲಿಮೆಟಾಲಿಕ್ ಸಲ್ಫೈಡ್‌ಗಳ ನಿಕ್ಷೇಪ (PMS) ಶೋಧಕ್ಕೆ ಅಂತರರಾಷ್ಟ್ರೀಯ ಸಮುದ್ರತಳ ಪ್ರಾಧಿಕಾರದ (ISA) ಜೊತೆ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಇದರಿಂದ PMS ಶೋಧನೆಗಾಗಿ ಎರಡು ಒಪ್ಪಂದಗಳನ್ನು ಮಾಡಿಕೊಂಡ ವಿಶ್ವದ ಮೊದಲ ದೇಶ ಭಾರತವಾಗಿ ಹೊರಹೊಮ್ಮಿದೆ.
ಕಾರ್ಲ್ಸ್‌ಬರ್ಗ್ ರಿಡ್ಜ್ PMS ಶೋಧಕ್ಕಾಗಿ ಅಂತರರಾಷ್ಟ್ರೀಯ ಸಮುದ್ರತಳದಲ್ಲಿ ಹಂಚಿಕೆಯಾದ ಅತಿದೊಡ್ಡ ಪ್ರದೇಶವಾಗಿದೆ. ಭಾರತ 2024 ರಲ್ಲಿ ISA ಗೆ ಈ ಬಗ್ಗೆ ಅರ್ಜಿಯನ್ನು ಸಲ್ಲಿಸಿತ್ತು. ಪರಿಶೀಲನೆಯ ನಂತರ ISA ಭಾರತಕ್ಕೆ ಕಾರ್ಲ್ಸ್‌ಬರ್ಗ್ ರಿಡ್ಜ್‌ನಲ್ಲಿ 10,000 ಚದರ ಕಿಮೀ ಪ್ರದೇಶವನ್ನು ಮಂಜೂರು ಮಾಡಿದೆ. ಗೋವಾ ಮೂಲದ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ (NCPOR) 2026 ರಲ್ಲಿ PMS ಶೋಧಕಾರ್ಯ ಕೈಗೊಳ್ಳಲಿದೆ.
PMS ಎಂದರೇನು? ಅದು ಭಾರತಕ್ಕೆ ಏಕೆ ಮುಖ್ಯ?
ಪಾಲಿಮೆಟಾಲಿಕ್ ಸಲ್ಫೈಡ್ (PMS) ಇದು ಸಾಗರ ತಳದಲ್ಲಿರುವ ನಿಕ್ಷೇಪಗಳಾಗಿದೆ. ತಾಮ್ರ, ಸತು, ಸೀಸ, ಚಿನ್ನ ಮತ್ತು ಬೆಳ್ಳಿಯಂತಹ ನಿರ್ಣಾಯಕ ಲೋಹಗಳಿಂದ ಈ ನಿಕ್ಷೇಪಗಳು ತುಂಬಿವೆ. ಈ ಖನಿಜಗಳನ್ನು ಹೊಂದಿರುವ ಭೂ ಪ್ರದೇಶ ಭಾರತಕ್ಕೆ ಬಹಳ ಸೀಮಿತವಾಗಿರುವುದರಿಂದ, ಆಳ ಸಾಗರದಲ್ಲಿ PMSನ್ನು ಅನ್ವೇಷಿಸುವುದು ಬಹಳ ಮುಖ್ಯವಾಗಿದೆ. ಈ ಲೋಹಗಳು ಉನ್ನತ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನಗಳಿಗೆ ಬಹಳ ಮುಖ್ಯವಾಗಿದೆ.
PMS ಹುಡುಕಾಟ ಹೇಗೆ?
2016 ರಲ್ಲಿ ISA ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ನೈಋತ್ಯ ಹಿಂದೂ ಮಹಾಸಾಗರದಲ್ಲಿ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ.
ಮೊದಲ ಹಂತದಲ್ಲಿ ನಿಕ್ಷೇಪಗಳ ಹುಡುಕಾಟಕ್ಕಾಗಿ ಹಡಗು, ಡಿಟೆಕ್ಟರ್ ಉಪಕರಣಗಳನ್ನು ಬಳಸಿಕೊಂಡು ಸಮೀಕ್ಷೆಗಳನ್ನು ನಡೆಸಿ PMS ಇರುವ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗುತ್ತದೆ. ಎರಡನೇ ಹಂತದಲ್ಲಿ PMS ಇದರ ಬಗ್ಗೆ ದೃಢಪಡಿಸಿಕೊಳ್ಳಲು AUV ಗಳು ಮತ್ತು ರಿಮೋಟ್ ಆಪರೇಟಿಂಗ್ ವೆಹಿಕಲ್ಸ್ (ROV) ನಂತಹ ಸುಧಾರಿತ ವ್ಯವಸ್ಥೆ ಬಳಸಿಕೊಂಡು ನಿಕ್ಷೇಪಗಳ ಪತ್ತೆ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ ಗುರುತಿಸಲಾದ PMS ನಿಕ್ಷೇಪಗಳ ಸಂಪನ್ಮೂಲದ ಮೌಲ್ಯಮಾಪನ ಮಾಡಲಾಗುತ್ತದೆ.
ಮತ್ಸ್ಯ -6000 ಯೋಜನೆ
ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ “ಡೀಪ್ ಓಷನ್ ಮಿಷನ್’ನತ್ತ ಭಾರತ ದೊಡ್ಡ ಹೆಜ್ಜೆ ಇಟ್ಟಿದೆ. ಇದಕ್ಕಾಗಿ “ಭಾರತ ಮತ್ಸ್ಯ-6000′ ಯೋಜನೆ ರೂಪಿಸಿದ್ದು ಈ ಯೋಜನೆ ಭಾಗವಾಗಿ ಸಮುದ್ರದಾಳಕ್ಕೆ ಹೋಗುವ ಭಾರತೀಯ ವಿಜ್ಞಾನಿಗಳು ಫ್ರಾನ್ಸ್‌ನಲ್ಲಿ 5000 ಮೀಟರ್ ಆಳದವರೆಗೆ ಹೋಗುವ ತರಬೇತಿ ಪೂರ್ಣಗೊಳಿಸಿದ್ದಾರೆ.
ಕಾರ್ಲ್ಸ್‌ಬರ್ಗ್ ರಿಡ್ಜ್‌ನ ಮಹತ್ವವೇನು?
ಕಾರ್ಲ್ಸ್‌ಬರ್ಗ್ ರಿಡ್ಜ್ ಪ್ರದೇಶ ಭಾರತಕ್ಕೆ ಹೆಚ್ಚು ಹತ್ತಿರದಲ್ಲಿದೆ. ಇದು PMS ನಿಕ್ಷೇಪಗಳ ಸಂಭಾವ್ಯ ತಾಣವಾಗಿದೆ. ಕಳೆದ ಮೂರು ದಶಕಗಳಲ್ಲಿ ಭಾರತ ಈ ಬಗ್ಗೆ ಸಾಕಷ್ಟು ವೈಜ್ಞಾನಿಕ ಸಂಶೋಧನೆ ನಡೆಸಿದೆ.
ಈ ಪ್ರದೇಶದ ಸಮುದ್ರತಳದ 2,000–5,000 ಮೀಟರ್ ಆಳದಲ್ಲಿ ಕಲ್ಲಿನಿಂದ ಕೂಡಿದ ಭೂಪ್ರದೇಶದಿಂದ ಕೂಡಿದ್ದು, ಅಪಾರ ಪ್ರಮಾಣದ ಖನಿಜಗಳನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರದೇಶ ಇತರ ಆಳ-ಸಮುದ್ರ ಖನಿಜ ಶೋಧಕ್ಕಿಂತ ಹೆಚ್ಚು ಸವಾಲಿನದ್ದಾಗಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಹೊಂದಿರುವ ಉಪಕರಣ ಹಾಗೂ ಹಡಗುಗಳ ಅಗತ್ಯವಿದೆ.
ISA ಖನಿಜ ಶೋಧಕ್ಕೆ ಹೇಗೆ ಒಪ್ಪಿಗೆ ನೀಡುತ್ತದೆ?
ISA ಒಂದು ಸ್ವಾಯತ್ತ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ವಿಶ್ವಸಂಸ್ಥೆಯ ಸಮುದ್ರ ಕಾನೂನು(UNCLOS) ಚೌಕಟ್ಟಿನ ಅಡಿಯಲ್ಲಿ ಅಂತರರಾಷ್ಟ್ರೀಯ ಸಮುದ್ರ ಖನಿಜ ಪರಿಶೋಧನೆಗಾಗಿ ಸ್ಥಳಗಳನ್ನು ಹಂಚಿಕೆ ಮಾಡುತ್ತದೆ. ಒಂದು ದೇಶವು ಸರ್ಕಾರ, ಸಾರ್ವಜನಿಕ ವಲಯ ಅಥವಾ ಪ್ರಾಯೋಜಿತ ಸಂಸ್ಥೆಯ ಮೂಲಕ ISAಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಈ ಅರ್ಜಿಯು ವಿವರವಾದ ಕಾರ್ಯ ಯೋಜನೆ, ಹಣಕಾಸು/ತಾಂತ್ರಿಕ ಸಾಮರ್ಥ್ಯ ದಾಖಲೆಗಳೊಂದಿಗೆ ಪ್ರಸ್ತಾವಿತ ಪ್ರದೇಶದ ಮಾಹಿತಿ ಒದಗಿಸಬೇಕು. ಈ ಅರ್ಜಿಯನ್ನು ISA ಕಾನೂನು ಮತ್ತು ತಾಂತ್ರಿಕ ಆಯೋಗ (LTC) ಪರಿಶೀಲಿಸುತ್ತದೆ. ಎಲ್ಲಾ ಮಾಹಿತಿ ಆಧರಿಸಿ, ಅಂತಿಮ ಅನುಮೋದನೆಗಾಗಿ ISA ಕೌನ್ಸಿಲ್‌ಗೆ ಶಿಫಾರಸು ಮಾಡುತ್ತದೆ. ಬಳಿಕ ಚರ್ಚಿಸಿ ಅನುಮತಿ ನೀಡಬೇಕೇ? ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ.
ಭಾರತದಿಂದ ISAಗೆ ಮತ್ತೊಂದು ಅರ್ಜಿ
ಭಾರತವು ಹಿಂದೂ ಮಹಾಸಾಗರದ ಉದ್ದಕ್ಕೂ ಖನಿಜ ಶೋಧಕ್ಕೆ ತೀರ್ಮಾನಿಸಿದೆ. ಭಾರತ ಸರ್ಕಾರದ ಬ್ಲೂ ಎಕಾನಮಿ ಉತ್ತೇಜಿಸಲು ಖನಿಜ ಶೋಧನೆಗಾಗಿ ಹಿಂದೂ ಮಹಾಸಾಗರದಲ್ಲಿ ಹೆಚ್ಚುವರಿ ಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳಲು ನೋಡುತ್ತಿದೆ. ಮಧ್ಯ ಹಿಂದೂ ಮಹಾಸಾಗರದ ಅಫನಾಸಿ-ನಿಕಿಟಿನ್ ಸೀಮೌಂಟ್‌ನಲ್ಲಿರುವ ಕೋಬಾಲ್ಟ್ ಭರಿತ ಫೆರೋಮ್ಯಾಂಗನೀಸ್ ಕ್ರಸ್ಟ್‌ಗಳ ಶೋಧಕ್ಕೆ ಭಾರತ ಮುಂದಾಗಿದೆ. ಈ ಅರ್ಜಿ ISAಯಲ್ಲಿ ಪರಿಶೀಲನೆ ಹಂತದಲ್ಲಿದೆ.
ಭಾರತಕ್ಕೆ ಈ ಯೋಜನೆಯ ಲಾಭವೇನು?
ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡುವ ಹಲವಾರು ಖನಿಜ ನಿಕ್ಷೇಪಗಳನ್ನು ಹಿಂದೂ ಮಹಾಸಾಗರ ಹೊಂದಿದೆ. ನೀಲಿ ಆರ್ಥಿಕತೆಯಲ್ಲಿ ಲಾಭದಾಯಕವಾದ ಕೈಗಾರಿಕೆಗಳಲ್ಲಿ ಖನಿಜ ಉದ್ಯಮವೂ ಒಂದು. ಹಿಂದೂ ಮಹಾಸಾಗರದ ಸಮುದ್ರತಳದಲ್ಲಿರುವ ಈ ನಿರ್ಣಾಯಕ ಖನಿಜಗಳು ಭವಿಷ್ಯದಲ್ಲಿ ಜಾಗತಿಕ ಇಂಧನ ಪರಿವರ್ತನೆಗೆ ದಾರಿ ಮಾಡಿಕೊಡಬಹುದುಮ ಎಂಬ ನಿರೀಕ್ಷೆ ಇದೆ. ಈ ಮೂಲಕ ಭಾರತ ನಿರ್ಣಾಯಕ ಖನಿಜಗಳ ಪೂರೈಕೆಯ ವಿಷಯದಲ್ಲಿ ಸ್ವಾವಲಂಬಿಯಾಗುವ ಗುರಿ ತಲುಪುವ ಸಾಧ್ಯತೆ ಇದೆ. ಇದರೊಂದಿಗೆ ಕೈಗಾರಿಗಳಿಗೆ ಖನಿಜ ಬಹಳ ಅಗತ್ಯ. ಇದರಿಂದ ಕೈಗಾರಿಕೆ ಅಭಿವೃದ್ಧಿಯಾಗಿ, ದೇಶದ ಆರ್ಥಿಕತೆ ಪ್ರಗತಿಯಾಗಲಿದೆ.
ಇತ್ತೀಚೆಗೆ ಅಮೆರಿಕದ ಟ್ಯಾರಿಫ್ ನೀತಿ, ಜೊತೆಗೆ ವಿಶ್ವದ ಬಹುತೇಕ ಭಾಗಗಳಲ್ಲಿ ಯುದ್ಧದಂತಹ ವಾತಾವರಣ ಇರುವುದರಿಂದ ಆಮದಿನ ಮೇಲೆ ಇದು ಭಾರೀ ಪರಿಣಾಮ ಬೀರುತ್ತದೆ. ಇದರಿಂದ ಭಾರತವೇ ಅಗತ್ಯ ಖನಿಜಗಳನ್ನು ಶೋಧಿಸಿ ಬಳಸಿಕೊಂಡರೆ, ಹಾಗೂ ರಫ್ತು ಮಾಡಿದರೆ ಬೇರೆ ದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ಸಮುದ್ರ ಜೀವಿಗಳ ನಾಶದ ಆತಂಕ
ಭೂಮಿ ಮೇಲಿನ ಗಣಿಗಾರಿಕೆಯಂತೆಯೇ ಆಳ ಸಮುದ್ರ ಗಣಿಗಾರಿಕೆಗೂ ಪ್ರಪಂಚದಾದ್ಯಂತ ವಿರೋಧವಿದೆ. ಇದು ನಿಸರ್ಗದ ಅಸಮತೋಲನ ಸೃಷ್ಟಿಸಲಿದೆ. ಸಮುದ್ರ ಜೀವಿಗಳ ನಾಶಕ್ಕೆ ಕಾರಣವಾಗಲಿದೆ ಎಂದು ಅನೇಕ ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಿವೆ.





