ಹುಲುನ್ಬುಯರ್: ಅತಿಥೇಯ ಚೀನಾವನ್ನು (China) ಸೋಲಿಸಿ ಭಾರತ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು (Asian Champions Trophy) ಗೆದ್ದುಕೊಂಡಿದೆ. ಇಂದು ನಡೆದ ಫೈನಲ್ ಪಂದ್ಯವನ್ನು ಭಾರತ 1-0 ಅಂತರದಿಂದ ಗೆಲ್ಲುವುದರ ಮೂಲಕ ಐದನೇ ಬಾರಿ ಹಾಕಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತಕ್ಕೆ (India) ಚೀನಾ ಭಾರೀ ಪೈಪೋಟಿ ನೀಡಿತ್ತು. ಎರಡೂ ತಂಡಗಳು ಜಿದ್ದಿಗೆ ಬಿದ್ದಂತೆ ಆಡಿದ್ದವು. ಮೊದಲ ಮೂರು ಕ್ವಾರ್ಟರ್ ನಲ್ಲಿ ಇತ್ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ 51ನೇ ನಿಮಿಷದಲ್ಲಿ ಜುಗ್ರಾಜ್ ಸಿಂಗ್ (Jugraj Singh) ಅವರು ಗೋಲು ಹೊಡೆದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇದನ್ನೂ ಓದಿ: ಭಾರತ-ಬಾಂಗ್ಲಾ ಟೆಸ್ಟ್ ಸರಣಿ: 5 ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸ್ತಾರಾ ಅಶ್ವಿನ್?
ಈ ಮುನ್ನಡೆಯನ್ನು ಕಾಯ್ದುಕೊಂಡ ಭಾರತ ಕೊನೆಗೆ ವಿಜಯ ಸಾಧಿಸಿತು. ಹಲವು ಬಾರಿ ಚೀನಾ ಆಟಗಾರರು ಪ್ರಯತ್ನ ಪಟ್ಟರೂ ಗೋಲು ಹೊಡೆಯಲು ಭಾರತದ ಆಟಗಾರರು ಬಿಡಲಿಲ್ಲ. ಟೂರ್ನಿಯಲ್ಲಿ ಅತ್ಯುತ್ತಮ ಆಟವಾಡಿದ ನಾಯಕ ಹರ್ಮನ್‌ಪ್ರೀತ್ ಅರ್ಹವಾಗಿ ಸರಣಿಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರವಾದರು.
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಚೀನಾ ತಮ್ಮ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು 3-0 ಅಂತರದಿಂದ ಭಾರತ ಗೆದ್ದುಕೊಂಡಿತ್ತು.
ಉತ್ತಮ ಫಾರ್ಮ್‌ನಲ್ಲಿರುವ ಭಾರತ 2020ರ ಟೋಕಿಯೋ ಮತ್ತು ಈ ವರ್ಷ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಹಾಕಿಯಲ್ಲಿ ಕಂಚಿನ ಪದಕವನ್ನು ಗೆದ್ದು ಬೀಗಿತ್ತು.