ಅಕ್ರಮ ವಲಸಿಗರ ವಿಚಾರದಲ್ಲಿ ಪ್ರಧಾನಿ ಮೋದಿ ಸರಿಯಾಗಿದ್ದನ್ನು ಮಾಡುತ್ತಾರೆ: ಟ್ರಂಪ್

Public TV
2 Min Read
trump modi

ನವದೆಹಲಿ/ವಾಷಿಂಗ್ಟನ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ವಾಪಸ್ ಕರೆತರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾಗಿದ್ದನ್ನು ಮಾಡುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಫ್ಲೋರಿಡಾದಿಂದ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ಗೆ ಟ್ರಂಪ್ ಹಿಂದಿರುಗುತ್ತಿದ್ದಾಗ ಏರ್‌ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರು ಟ್ರಂಪ್ ಅವರನ್ನು ಅಕ್ರಮ ವಲಸಿಗರನ್ನು ತೆಗೆದುಕೊಳ್ಳಲು ಮೋದಿ ಒಪ್ಪಿಕೊಂಡಿದ್ದಾರೆಯೇ ಎಂದು ಕೇಳಿದಾಗ ಅವರು ಇದಕ್ಕೆ ಉತ್ತರಿಸಿದ್ದಾರೆ.

usa india flag

ದೂರವಾಣಿ ಸಂಭಾಷಣೆಯಲ್ಲಿ ನಾವು ಚರ್ಚಿಸುತ್ತಿದ್ದೇವೆ. ಬೆಳಗ್ಗೆ ಮೋದಿಯವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಅವರು ಮುಂದಿನ ತಿಂಗಳು ಶ್ವೇತಭವನಕ್ಕೆ ಬರಲಿದ್ದಾರೆ. ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಮೋದಿ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಟ್ರಂಪ್ ಹೇಳಿದರು.

ಇದಲ್ಲದೇ ಉಭಯ ನಾಯಕರು ಇಂಡೋ-ಪೆಸಿಫಿಕ್, ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ಭದ್ರತೆ ಸೇರಿದಂತೆ ಹಲವಾರು ಪ್ರಾದೇಶಿಕ ವಿಷಯಗಳ ಕುರಿತು ಚರ್ಚಿಸಿದರು. ಯುಎಸ್ ನಿರ್ಮಿತ ಭದ್ರತಾ ಉಪಕರಣಗಳ ಭಾರತದ ಖರೀದಿಯನ್ನು ಹೆಚ್ಚಿಸುವ ಮತ್ತು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವ ಮಹತ್ವವನ್ನು ಅಧ್ಯಕ್ಷ ಟ್ರಂಪ್ ಒತ್ತಿ ಹೇಳಿದರು. ಈ ವರ್ಷದ ಕೊನೆಯಲ್ಲಿ ಭಾರತವು ಮೊದಲ ಬಾರಿಗೆ ಕ್ವಾಡ್ ನಾಯಕರಿಗೆ ಆತಿಥ್ಯ ನೀಡಲಿದೆ ಎಂದು ಶ್ವೇತಭವನವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಬಗ್ಗೆ ಮಾತನಾಡಿದ್ದು, ಭಾರತ-ಅಮೆರಿಕ ಸಂಬಂಧಗಳು ಬಹಳ ಬಲವಾದವು. ಬಹು ಆಯಾಮದವು ಎಂದು ಹೇಳಿದ್ದರು. ಅದೇ ಸಮಯದಲ್ಲಿ ಎರಡು ದೇಶಗಳ ಆರ್ಥಿಕ ಸಂಬಂಧಗಳು ಬಹಳ ವಿಶೇಷವಾಗಿವೆ. ಯಾವುದೇ ವ್ಯಾಪಾರ ಸಂಬಂಧಿತ ವಿಷಯಗಳನ್ನು ಚರ್ಚಿಸಲು ನಾವು ಅಮೆರಿಕ ಮತ್ತು ಭಾರತದ ನಡುವೆ ಕಾರ್ಯವಿಧಾನಗಳನ್ನು ಸ್ಥಾಪಿಸಿದ್ದೇವೆ. ಈ ವಿಚಾರದ ಬಗ್ಗೆಯೂ ನಿಗಾ ಇಡುತ್ತಿದ್ದೇವೆ ಎಂದು ಹೇಳಿದರು.

ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಕ್ರಮ ವಲಸೆಯನ್ನು ನಾವು ವಿರೋಧಿಸುತ್ತೇವೆ. ಯಾವುದೇ ಕಾನೂನುಬಾಹಿರ ಕೆಲಸ ಮಾಡಿದಾಗ, ಅದರೊಂದಿಗೆ ಇತರ ಅನೇಕ ಕಾನೂನುಬಾಹಿರ ಚಟುವಟಿಕೆಗಳು ಸಹ ಸೇರಿಕೊಂಡಿರುತ್ತವೆ. ಇದು ಖಂಡಿತವಾಗಿಯೂ ಒಳ್ಳೆಯದಲ್ಲ. ನಮ್ಮ ನಾಗರಿಕರಲ್ಲಿ ಯಾರಾದರೂ ಅಕ್ರಮವಾಗಿ ಇದ್ದರೆ ಮತ್ತು ಅವರು ನಮ್ಮ ಪ್ರಜೆಗಳು ಎಂದು ನಮಗೆ ಖಚಿತವಾಗಿದ್ದರೆ, ಅವರು ಭಾರತಕ್ಕೆ ಕಾನೂನುಬದ್ಧವಾಗಿ ಮರಳಲು ನಾವು ಯಾವಾಗಲೂ ಸಿದ್ಧರಿದ್ದೇವೆ. ಭಾರತಕ್ಕೆ ಯಾರನ್ನು ಕಳುಹಿಸಬಹುದು ಎಂದು ಹೇಳಿದರು‌.

1.80 ಲಕ್ಷ ಭಾರತೀಯರನ್ನು ಭಾರತದಿಂದ ಗಡಿಪಾರು ಮಾಡಲು ಅಮೆರಿಕ ಮುಂದಾಗಿದೆ. ಅಲ್ಲಿ ಅಕ್ರಮವಾಗಿ ಅಥವಾ ವೀಸಾ ಅವಧಿ ಮುಗಿದ ನಂತರವೂ ಅನೇಕ ಭಾರತೀಯರು ಅಲ್ಲಿ ವಾಸಿಸುತ್ತಿದ್ದಾರೆ. ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು 2022 ರಲ್ಲಿ ಅಮೆರಿಕದಲ್ಲಿ ಸುಮಾರು 11 ಮಿಲಿಯನ್ ಅಕ್ರಮ ವಲಸಿಗರು ಎಂದು ಹೇಳಿತು. 4.81 ಮಿಲಿಯನ್ ಅಕ್ರಮ ವಲಸಿಗರೊಂದಿಗೆ ಮೆಕ್ಸಿಕೋ ಅಗ್ರಸ್ಥಾನದಲ್ಲಿದೆ. ಗ್ವಾಟೆಮಾಲಾದಿಂದ 7.5 ಲಕ್ಷ, ಎಲ್ ಸಾಲ್ವಡಾರ್‌ನಿಂದ 7.1 ಲಕ್ಷ, ಹೊಂಡುರಾಸ್‌ನಿಂದ 5.6 ಲಕ್ಷ, ಫಿಲಿಪೈನ್ಸ್‌ನಿಂದ 3.5 ಲಕ್ಷ, ವೆನೆಜುವೆಲಾದಿಂದ 3.2 ಲಕ್ಷ, ಕೊಲಂಬಿಯಾ ಮತ್ತು ಬ್ರೆಜಿಲ್‌ನಿಂದ 2.3 ಲಕ್ಷ ವಲಸಿಗರು ಸೇರಿದ್ದಾರೆ. 2018 ಮತ್ತು 2022 ರ ನಡುವೆ ಭಾರತದಿಂದ ಅಕ್ರಮ ವಲಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಹೋಮ್ಲ್ಯಾಂಡ್ ಹೇಳಿದೆ.

Share This Article