Sunday, 22nd July 2018

Recent News

ಇಂದು ಗೆದ್ದರೆ ಟಿ20ಯಲ್ಲಿ ಟೀಂ ಇಂಡಿಯಾ ನಂ.3!

ಬೆಂಗಳೂರು: ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣದಲ್ಲಿ ಇಂದು ಆಸೀಸ್ ವಿರುದ್ಧ ನಡೆಯಲಿರುವ 2ನೇ ಪಂದ್ಯದಲ್ಲಿ ಗೆದ್ದರೆ ಟೀಂ ಇಂಡಿಯಾ ಟಿ20 ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಲಿದೆ. ಇಂದಿನ ಪಂದ್ಯವನ್ನೂ ಸೋತರೆ ಆಸ್ಟ್ರೇಲಿಯಾ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕೊನೆಯ ಪಂದ್ಯವನ್ನು ಆಡಿ ವಾಪಸ್ ಸ್ವದೇಶಕ್ಕೆ ವಾಪಾಸಾಗಬೇಕಾಗುತ್ತದೆ.

ಇಂದಿನ ಪಂದ್ಯಕ್ಕೂ ಮಳೆ ಭೀತಿಯಿದ್ದು ನಿನ್ನೆ ಗುವಾಹಟಿಯಲ್ಲಿ ಮೋಡ ಕವಿದ ವಾತಾವರಣವಿತ್ತು. ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದರೆ 51ನೇ ಟಿ20 ಗೆಲುವು ಸಾಧಿಸಿದಂತಾಗುತ್ತದೆ. ಶ್ರೀಲಂಕಾವೂ ಇಷ್ಟೇ ಪಂದ್ಯವನ್ನು ಟಿ20ಯಲ್ಲಿ ಗೆದ್ದಿದೆ. ಆದರೆ ಭಾರತದ ಗೆಲುವಿನ ಸರಾಸರಿ ಶ್ರೀಲಂಕಾ ತಂಡಕ್ಕಿಂತ ಉತ್ತಮವಾಗಿದೆ. ಹೀಗಾಗಿ ಭಾರತ 3ನೇ ಸ್ಥಾನವನ್ನು ತಲುಪುವುದು ಖಚಿತ.

84 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಇದುವರೆಗೆ 50 ಪಂದ್ಯದಲ್ಲಿ ಗೆದ್ದಿದ್ದು 31ರಲ್ಲಿ ಸೋತಿದೆ. ಇಲ್ಲಿ ಗೆಲುವಿನ ಪ್ರಮಾಣ ಶೇ.62ರಷ್ಟಿದೆ. ಮತ್ತೊಂದೆಡೆ ಸಿಂಹಳೀಯರು ಇದುವರೆಗೆ 96 ಟಿ20 ಪಂದ್ಯಗಳನ್ನಾಡಿದ್ದು 51ರಲ್ಲಿ ಗೆದ್ದು, 43 ಪಂದ್ಯಗಳಲ್ಲಿ ಸೋತಿದ್ದಾರೆ. ಶ್ರೀಲಂಕಾ ಗೆಲುವಿನ ಪ್ರಮಾಣ ಶೇ.54ರಷ್ಟಾಗುತ್ತದೆ.

ಆಸೀಸ್ ಗೆ ಸ್ಪಿನ್ನರ್ ಗಳ ಕಾಟ: ಸದ್ಯ ಆಸೀಸ್ ತಂಡಕ್ಕೆ ತಲೆನೋವಾಗಿರೋದು ಭಾರತದ ಸ್ಪಿನ್ನರ್ ಗಳು. ಅದರಲ್ಲೂ ಕುಲದೀಪ್ ಯಾದವ್ ಹಾಗೂ ಚಾಹಲ್ ಆಸೀಸ್ ತಂಡಕ್ಕೆ ಭಾರೀ ಸವಾಲಾಗಿ ಪರಿಣಮಿಸಿದ್ದಾರೆ. ಎಷ್ಟೇ ಜಾಗ್ರತೆಯಿಂದ ಆಟವಾಡಿದರೂ ಇವರಿಬ್ಬರಿಗೆ ವಿಕೆಟ್ ಒಪ್ಪಿಸುತ್ತಿದ್ದಾರೆ.

 

ಚಾಹಲ್ ಹಾಗೂ ಕುಲದೀಪ್ ಯಾದವ್ ಇದುವರೆಗೆ ಈ ಪ್ರವಾಸದಲ್ಲಿ 4 ಏಕದಿನ ಹಾಗೂ 1 ಟಿ20 ಪಂದ್ಯದಿಂದ ಒಟ್ಟು 16 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಕುಲದೀಪ್ 9 ಹಾಗೂ ಚಾಹಲ್ 7 ವಿಕೆಟ್ ಹಂಚಿಕೊಂಡಿದ್ದಾರೆ. ಗ್ಲೆನ್ ಮ್ಯಾಕ್ಸ್ ವೆಲ್ ಅಂತಾ ಚಾಹಲ್ ದಾಳಿಗೆ ಕಕ್ಕಾಬಿಕ್ಕಿಯಾಗಿದ್ದಾರೆ. ಯಾಕೆಂದರೆ ಇದುವರೆಗೆ ಒಟ್ಟು 4 ಬಾರಿ ಚಾಹಲ್ ಗೆ ವಿಕೆಟ್ ಒಪ್ಪಿಸಿ ಮ್ಯಾಕ್ಸ್ ವೆಲ್ ಪೆವಿಲಿಯನ್ ನತ್ತ ಮುಖ ಮಾಡಿದ್ದಾರೆ.

Leave a Reply

Your email address will not be published. Required fields are marked *