ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್‌-3 ಆರ್ಥಿಕತೆಯಲ್ಲಿ ಒಂದಾಗಲಿದೆ: ಮೋದಿ ಮತ್ತೊಂದು ಗ್ಯಾರಂಟಿ

Public TV
2 Min Read
Narendra Modi 4

ಗಾಂಧಿನಗರ (ಸೂರತ್‌): ನನ್ನ 3ನೇ ಅವಧಿಯಲ್ಲಿ ಭಾರತ ದೇಶವು ವಿಶ್ವದ ಟಾಪ್‌-3 ಆರ್ಥಿಕತೆಗಳಲ್ಲಿ (Economies) ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನರಿಗೆ ಮತ್ತೊಂದು ಗ್ಯಾರಂಟಿ ನೀಡಿದ್ದಾರೆ.

ಗುಜರಾತ್‌ನ ವಾಣಿಜ್ಯನಗರಿ ಸೂರತ್‌ನಲ್ಲಿ ಡೈಮಂಡ್‌ ಬೋರ್ಸ್‌ (Surat Diamond Bourse) ಕಚೇರಿ ಸಂಕೀರ್ಣ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಭಾರತವನ್ನು ವಿಶ್ವದ ಟಾಪ್‌-3 ಆರ್ಥಿಕತೆಗಳಲ್ಲಿ ಒಂದಾಗಲಿದೆ. ಅದಕ್ಕಾಗಿ ಸರ್ಕಾರವು ಮುಂಬರುವ 25 ವರ್ಷಗಳ ಗುರಿ ನಿಗದಿಪಡಿಸಿದೆ ಎಂದು ಹೇಳಿದ್ದಾರೆ.

1 5

ಸೂರತ್‌ ಡೈಮಂಡ್‌ ಬೋರ್ಸ್‌ ʻನವ ಭಾರತದ ಶಕ್ತಿʼಯ ಸಂಕೇತ. ಈ ಸಂಕೀರ್ಣವು ರಾಷ್ಟ್ರದ ಪ್ರಗತಿಗಾಗಿ ನಮ್ಮ ಸರ್ಕಾರ ಕೈಗೊಂಡಿರುವ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ವಿಶ್ವದಾದ್ಯಂತ ಜನರು ಈ ಡೈಮಂಡ್‌ ಬೋರ್ಸ್‌ ಬಗ್ಗೆ ಮಾತನಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸಂಸತ್‌ ಮೇಲಿನ ದಾಳಿ ಗಂಭೀರವಾದದ್ದು; ಚರ್ಚೆ ಬೇಡ, ವಿಸ್ತೃತ ತನಿಖೆಯಾಗಲಿ: ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

ಬೋರ್ಸ್‌ ಭಾರತೀಯ ವಿನ್ಯಾಸ, ಭಾರತೀಯ ವಿನ್ಯಾಸಕಾರರು, ಭಾರತೀಯ ವಸ್ತು ಮತ್ತು ಭಾರತೀಯ ಪರಿಕಲ್ಪನೆಗಳ ಸಾಮರ್ಥ್ಯವನ್ನು ಇಲ್ಲಿ ಪ್ರದರ್ಶಿಸುತ್ತಿದೆ. ನಮ್ಮ ಈ ಕಚೇರಿ ಸಂಕೀರ್ಣದ ಎದುರು ಇತರ ಕಟ್ಟಡಗಳು ತಮ್ಮ ಹೊಳಪನ್ನೇ ಕಳೆದುಕೊಳ್ಳುತ್ತವೆ. ಈ ಹಿಂದೆ ಸೂರತ್‌ ನಗರವನ್ನು ʻಸೂರ್ಯನಗರʼಎಂದು ಕರೆಯಲಾಗುತ್ತಿತ್ತು. ಇಲ್ಲಿನ ಜನರ ಪರಿಶ್ರಮದಿಂದ ಈಗ ʻಡೈಮಂಡ್‌ ಸಿಟಿʼ ಆಗಿದೆ ಎಂದು ಶ್ಲಾಘಿಸಿದ್ದಾರೆ.

Surat Diamond Bourse

ಮುಂದುವರಿದು, ಪರಿಸರ ವಿಜ್ಞಾನ ಮತ್ತು ವಾಸ್ತುಶಿಲ್ಪ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಒಮ್ಮೆ ಈ ಅದ್ಭುತ ಕಟ್ಟಡಕ್ಕೆ ಭೇಟಿ ನೀಡಬೇಕು. ಇಲ್ಲಿ ಪ್ರಯೋಗವಾಗಿರುವ ವಿನೂತನ ವಿನ್ಯಾಸವನ್ನು ಅಧ್ಯಯನಕ್ಕಾಗಿ ವಾಸ್ತುಶಿಲ್ಪದ ವಿದ್ಯಾರ್ಥಿಗಳನ್ನು ಕರೆತರಬೇಕು. ಪರಿಸರ ಅಧ್ಯಯನ ವಿದ್ಯಾರ್ಥಿಗಳು ಇಲ್ಲಿನ ಹಸಿರು ಪರಿಸರದ ಗಮನಾರ್ಹ ವೈಶಿಷ್ಟಗಳ ಬಗ್ಗೆ ತಳಿಯಲು ಭೇಟಿ ನೀಡಬೇಕು ಎಂಬ ಕಿವಿ ಮಾತನ್ನೂ ಹೇಳಿದ್ದಾರೆ.

ನಂತರ 353 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೂರತ್‌ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡವನ್ನೂ ಪ್ರಧಾನಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿ, ಸೂರತ್‌ನ ಜನರು, ಸಾರ್ವಜನಿಕರು, ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಇನ್ನೂ ಎರಡು ಊಡುಗೊರೆ ಸಿಕ್ಕಿದೆ. ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆಯಾಗಿದೆ, ಜೊತೆಗೆ ಸೂರತ್ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಸ್ಥಾನಮಾನ ಪಡೆದುಕೊಂಡಿದೆ. ಇದು ಅತ್ಯಂತ ದೊಡ್ಡ ವಿಷಯ. ಈ ಹಿಂದೆ ನಾನು ಇಲ್ಲಿಗೆ ಭೇಟಿ ನೀಡಿದಾಗ ವಿಮಾನ ನಿಲ್ದಾಣವು ಹಳೆಯ ಬಸ್‌ ನಿಲ್ದಾಣದಂತೆ ಕಾಣುತ್ತಿತ್ತು. ಈಗ ಅದರ ರೂಪಾಂತರ ನೋಡಿದ್ರೆ ನಾವು ಎಲ್ಲಿಯವರೆಗೆ ಬಂದಿದ್ದೇವೆ ಎಂಬುದು ತಿಳಿಯುತ್ತದೆ ಎಂದು ಶ್ಲಾಘಿಸಿದ್ದಾರೆ.

Surat Diamond Bourse 2

ಸೂರತ್ ಪ್ರಸ್ತುತ 14 ದೇಶೀಯ ನಗರಗಳಿಗೆ ಸಂಪರ್ಕ ಹೊಂದಿದೆ. ದೆಹಲಿ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್, ಗೋವಾ, ಗೋವಾ ಮೊಪಾ, ಬೆಳಗಾವಿ, ಪುಣೆ, ಜೈಪುರ, ಉದಯಪುರ, ಇಂದೋರ್, ದಿಯು ಮತ್ತು ಕಿಶನ್‌ಗಢ್ ಮತ್ತು ಅಂತಾರಾಷ್ಟ್ರೀಯವಾಗಿ ಶಾರ್ಜಾ ಮೂಲಕ ಪ್ರಪಂಚದ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ಇದು ವಾರಕ್ಕೆ 252ಕ್ಕೂ ಹೆಚ್ಚು ಪ್ರಯಾಣಿಕರ ವಿಮಾನ ಚಲನೆಗಳನ್ನು ನಿರ್ವಹಿಸುತ್ತಿದೆ. ಇದನ್ನೂ ಓದಿ: ವೈದ್ಯ, ಆರ್ಮಿ ಡಾಕ್ಟರ್‌, ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ.. ನಾನಾ ವೇಶ – ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿ ಬಂಧನ

Share This Article