ನವದೆಹಲಿ: ನಾಳೆಯಿಂದ ಆರಂಭವಾಗಲಿರುವ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ-20 ಮತ್ತು ಏಕದಿನ ಸರಣಿಗೆ ಮೂರನೇ ಅಂಪೈರ್ ನೋಬಾಲ್ ಗುರುತಿಸಲಿದ್ದಾರೆ.
ಈ ಹಿಂದಿನಿಂದಲೂ ಕ್ರಿಕೆಟ್ ಪಂದ್ಯಗಳಲ್ಲಿ ನೋಬಾಲ್ ವಿಚಾರದಲ್ಲಿ ಗೊಂದಲಗಳು ಆಗುತ್ತಿವೆ. ಈ ಗೊಂದಲಗಳಿಗೆ ತೆರೆಎಳೆಯಲು ಐಸಿಸಿ ಪ್ರಯತ್ನ ಮಾಡುತ್ತಿದ್ದು, ಇನ್ನು ಮುಂದೆ ನೋಬಾಲ್ ಮಾಡಿದರೆ ಅದನ್ನು ಮೈದಾನದಲ್ಲಿರುವ ಆಂಪೈರ್ ಹೇಳುವುದಿಲ್ಲ. ಬದಲಾಗಿ ಅ ಪಂದ್ಯದಲ್ಲಿ ಮೂರನೇ ಆಂಪೈರ್ ಆಗಿ ಕಾರ್ಯನಿರ್ವಹಿಸುವವರು ನೋಬಾಲ್ ಎಂದು ತೀರ್ಮಾನ ಮಾಡಬೇಕು ಎಂದು ಐಸಿಸಿ ಹೇಳಿದೆ.
Advertisement
Advertisement
ನಾಳೆಯಿಂದ ಹೈದರಾಬಾದ್‍ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮೊದಲ ಟಿ-20 ಪಂದ್ಯವನ್ನು ಆಡಲಿದ್ದು, ನಂತರ ಡಿಸೆಂಬರ್ 15 ರಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಪಂದ್ಯಗಳಲ್ಲಿ ಈ ಹೊಸ ನಿಯಮವನ್ನು ಪ್ರಯೋಗ ಮಾಡಿ ನೋಡಲು ಐಸಿಸಿ ತೀರ್ಮಾನ ಮಾಡಿದ್ದು ಈ ಪಂದ್ಯಗಳಲ್ಲಿ ಫ್ರಂಟ್‍ಫುಟ್ ನೋಬಾಲ್ ಮಾಡಿದರೆ ಅದನ್ನು ಆನ್‍ಫೀಲ್ಡ್ ಆಂಪೈರ್ ಬದಲಿಗೆ ಮೂರನೇ ಆಂಪೈರ್ ನೀಡಲಿದ್ದಾರೆ.
Advertisement
ಪಂದ್ಯಗಳಲ್ಲಿ ಬೌಲರ್ ನೋಬಾಲ್ ಎಸೆದರೆ ಅದನ್ನು ಮೂರನೇ ಆಂಪೈರ್ ನೋಡಿ ನಂತರ ಅವರ ಸಹಾಯದಿಂದ ಆನ್‍ಫೀಲ್ಡ್ ಆಂಪೈರ್ ನೋಬಾಲ್ ಎಂದು ಘೋಷಣೆ ಮಾಡಬೇಕು. ಮೂರನೇ ಆಂಪೈರ್ ನೋಬಾಲ್ ಎಂದು ಹೇಳದೆ ಇದ್ದರೆ ಆನ್‍ಫೀಲ್ಡ್ ಆಂಪೈರ್ ಅ ಎಸೆತವನ್ನು ನೋಬಾಲ್ ಎಂದು ಹೇಳುವಂತಿಲ್ಲ ಎಂದು ಇಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Advertisement
ಒಂದು ವೇಳೆ ಮೂರನೇ ಆಂಪೈರ್ ಕಡೆಯಿಂದ ನೋಬಾಲ್ ನಿರ್ಧಾರ ತಡವಾಗಿ ಬಂದರೆ ಈ ಬಾಲ್ ಅಲ್ಲಿ ಬ್ಯಾಟ್ಸ್ ಮ್ಯಾನ್ ಔಟ್ ಆಗಿದ್ದರೆ ಆ ತೀರ್ಮಾವನ್ನು ಮೈದಾನದ ಆಂಪೈರ್ ವಾಪಸ್ ಪಡೆದು ಅದನ್ನು ನೋಬಾಲ್ ಎಂದು ಘೋಷಣೆ ಮಾಡಬಹುದು. ಇದನ್ನು ಬಿಟ್ಟರೆ ಉಳಿದ ಎಲ್ಲಾ ನಿಯಮಗಳ ಜವಾಬ್ದಾರಿಯನ್ನು ಆನ್‍ಫೀಲ್ಡ್ ಆಂಪೈರ್ ಎಂದಿನಂತೆ ನಿರ್ವಹಿಸುತ್ತಾರೆ ಎಂದು ಐಸಿಸಿ ತಿಳಿಸಿದೆ.
ಈ ನಿಯಮವನ್ನು 2016 ರಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಏಕದಿನ ಸರಣಿಯಲ್ಲಿ ಪ್ರಯೋಗ ಮಾಡಲಾಗಿತ್ತು. ಆದರೆ ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ. ಈಗ ಕ್ರಿಕೆಟ್ ಸಮಿತಿಯೊಂದು ಈ ನಿಯಮವನ್ನು ಬಳಸುವುದು ಸೂಕ್ತ ಎಂದು ಶಿಫಾರಸು ಮಾಡಿದ ಕಾರಣ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಫ್ರಂಟ್‍ಫುಟ್ ನೋಬಾಲ್ ತೀರ್ಮಾನವನ್ನು ಮೂರನೇ ಆಂಪೈರ್ ತೆಗೆದುಕೊಳ್ಳಬೇಕು ಎಂದು ಐಸಿಸಿ ಹೊಸ ನಿಯಮ ಮಾಡಿತ್ತು. ಈ ನಿಯಮವನ್ನು ಇಂಡೋ-ವಿಂಡೀಸ್ ಸರಣಿಯಲ್ಲಿ ಮತ್ತೆ ಪ್ರಯೋಗ ಮಾಡಲು ಐಸಿಸಿ ತೀರ್ಮಾನಿಸಿದೆ.
ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಅಂಪೈರ್ ಅಲ್ಲದೇ ನೋಬಾಲ್ ಗಮನಿಸಲೆಂದೇ ಅಂಪೈರ್ ಇರಲಿದ್ದಾರೆ. ಈ ಸಂಬಂಧ ಐಪಿಎಲ್ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಕಲ್ಪನೆ ನಿಮಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಈ ವಿಚಾರದ ಬಗ್ಗೆ ಮೊದಲ ಐಪಿಎಲ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ನೋಬಾಲ್ ಗಮನಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ. ಈ ಅಂಪೈರ್ ಮೂರು ಅಥವಾ ನಾಲ್ಕನೇಯ ಅಂಪೈರ್ ಅಲ್ಲ ಎಂದು ಅಧಿಕಾರಿ ಈ ಹಿಂದೆ ತಿಳಿಸಿದ್ದರು.
ಕಳೆದ ವರ್ಷದ ಐಪಿಎಲ್‍ನಲ್ಲಿ ಮಾರ್ಚ್ 28 ರಂದು ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 8 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಬೆಂಗಳೂರು ತಂಡಕ್ಕೆ ಕೊನೆಯ ಓವರಿನಲ್ಲಿ 17 ರನ್ ಬೇಕಿತ್ತು. ಕ್ರೀಸಿನಲ್ಲಿ ಎಬಿಡಿ ವಿಲಿಯರ್ಸ್ 68 (39 ಎಸೆತ) ರನ್ ಗಳಿಸಿದ್ದರೆ ಶಿವಂ ದುಬೆ 1 ರನ್ ಗಳಿಸಿದ್ದರು. ಮಾಲಿಂಗ ಎಸೆದ ಕೊನೆಯ ಓವರಿನ ಮೊದಲ ಎಸೆತವನ್ನು ದುಬೆ ಸಿಕ್ಸರ್‍ಗೆ ಅಟ್ಟಿದ್ದರು. ಒಟ್ಟು ಐದು ಎಸೆತಗಳಲ್ಲಿ 10 ರನ್ ಬಂದಿತ್ತು. ಕೊನೆಯ ಎಸೆತದಲ್ಲಿ ಜಯಗಳಿಸಲು 7 ರನ್ ಬೇಕಿತ್ತು. ಮಾಲಿಂಗ ಎಸೆದ ಕೊನೆಯ ಎಸೆತದಲ್ಲಿ ದುಬೆ ಬಲವಾಗಿ ಹೊಡೆದರೂ ಬಾಲ್ ಬ್ಯಾಟಿಗೆ ತಾಗದ ಕಾರಣ ಯಾವುದೇ ರನ್ ಬಂದಿರಲಿಲ್ಲ. ಆದರೆ ಟಿವಿ ರಿಪ್ಲೇಯಲ್ಲಿ ಮಾಲಿಂಗ ನೋಬಾಲ್ ಎಸೆದಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಮುಂದಿನ ಎಸೆತ ಫ್ರೀ ಹಿಟ್ ಆಗಬೇಕಿತ್ತು. ಆದರೆ ಅಂಪೈರ್ ರವಿ ನೋಬಾಲ್ ನೀಡದ ಪರಿಣಾಮ ಮುಂಬೈ ತಂಡ 6 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
ಈ ಪಂದ್ಯದ ಬಳಿಕ ಕೊಹ್ಲಿ ಮಾತನಾಡಿ, ನಾವು ಐಪಿಎಲ್ ಪಂದ್ಯ ಆಡುತ್ತಿದ್ದೇವೆ ಹೊರತು ಕ್ಲಬ್ ಕ್ರಿಕೆಟ್ ಆಡುತ್ತಿಲ್ಲ. ಅಂಪೈರ್ ಗಳು ಕಣ್ಣನ್ನು ತೆರೆದು ಗಮನಿಸುತ್ತಿರಬೇಕು. ಅಂಪೈರ್ ನೋಬಾಲ್ ನೀಡುತ್ತಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆ ಇತ್ತು. ನೋಬಾಲ್ ಮತ್ತು ಫ್ರೀ ಹಿಟ್ ನೀಡಿದ್ದರೆ ನಾವು ಗೆಲ್ಲುವ ಸಾಧ್ಯತೆ ಇತ್ತು. ಅಂಪೈರ್ ನಿರ್ಲಕ್ಷ್ಯದಿಂದ ಎಲ್ಲ ಹಾಳಾಯಿತು. ಅಂಪೈರ್ ಗಳು ಮೈದಾನದಲ್ಲಿ ಜಾಗೃತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಆಕ್ರೋಶ ಹೊರಹಾಕಿದ್ದರು.
ಮೈದಾನ ಪ್ರವೇಶಿಸಿದ್ದ ಧೋನಿ:
ರಾಜಸ್ಥಾನ ಮತ್ತು ಚೆನ್ನೈ ತಂಡದ ವೇಳೆಯೂ ಅಂಪೈರ್ ನೋಬಾಲ್ ನೀಡಿರಲಿಲ್ಲ. ಈ ವೇಳೆ ನಾಯಕ ಧೋನಿ ಮೈದಾನ ಪ್ರವೇಶಿಸಿ ಅಂಪೈರ್ ಜೊತೆ ಜಗಳವಾಡಿದ್ದರು. ಅಂಪೈರ್ ಎಡವಟ್ಟುಗಳಿಂದ ಪದೇ ಪದೇ ಮುಜುಗರಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಮಾದ ಆಗದಂತೆ ತಡೆಯಲು ನೋಬಾಲ್ ಗಮನಿಸಲೆಂದೇ ಪ್ರತ್ಯೇಕ ಅಂಪೈರ್ ನಿಯೋಜಿಸಲು ಐಪಿಎಲ್ ಆಡಳಿತ ಮಂಡಳಿ ಮುಂದಾಗಿದೆ.