CricketLatestSports

ಟೀಂ ಇಂಡಿಯಾ ಫೀಲ್ಡಿಂಗ್ ಬಗ್ಗೆ ಯುವಿ ಅಸಮಾಧಾನ

ನವದೆಹಲಿ: ವೆಸ್ಟ್ಇಂಡೀಸ್ ವಿರುದ್ಧದ ಟಿ-20ಯ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಫೀಲ್ಡಿಂಗ್ ಬಗ್ಗೆ ಭಾರತ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಟೀಕಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‍ಗಳಿಂದ ಜಯ ಸಾಧಿಸಿತ್ತಾದರೂ ಫೀಲ್ಡಿಂಗ್‍ನಲ್ಲಿ ಅನೇಕ ತಪ್ಪುಗಳನ್ನು ಎಸಗಿತ್ತು.

ಹೈದರಾಬಾದ್‍ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧದ ವೀಂಡಿಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್‍ಗಳ ನಷ್ಟಕ್ಕೆ 207 ರನ್ ಗಳಿಸಿತ್ತು. ಭಾರತದ ನಿಧಾನಗತಿಯ ಫೀಲ್ಡಿಂಗ್‍ನಿಂದಾಗಿ ವೆಸ್ಟ್ ಇಂಡೀಸ್ ಬೃಹತ್ ಮೊತ್ತ ಪೇರಿಸಿತ್ತು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ರೋಹಿತ್ ಶರ್ಮಾ ತಲಾ ಒಂದು ಕ್ಯಾಚ್‍ಗಳನ್ನು ಕೈಬಿಟ್ಟರೆ, ನಾಯಕ ವಿರಾಟ್ ಕೊಹ್ಲಿ ಕೂಡ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿದ್ದರು. ಇದನ್ನೂ ಓದಿ: 16 ಎಸೆತಗಳಲ್ಲಿ 50 ರನ್ – ಕೊಹ್ಲಿಯ ‘ನೋಟ್ ಬುಕ್ ಸೆಲಬ್ರೇಷನ್’ ಹಿಂದಿದೆ ಒಂದು ಕಥೆ

ಈ ವಿಚಾರವಾಗಿ ಶುಕ್ರವಾರ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್, ಭಾರತ ಇಂದು ಮೈದಾನದಲ್ಲಿ ತುಂಬಾ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿದೆ. ಯುವ ಆಟಗಾರರು ಸರಿಯಾಗಿ ಬಾಲ್ ಹಿಡಿಯದ ಕಾರಣ ಕ್ರಿಕೆಟಿನಲ್ಲಿ ದುಬಾರಿ ಆಯ್ತು. ಈ ರೀತಿಯ ರನ್‍ಗಳಿಗೆ ಕಡಿವಾಣ ಹೇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನಿಂಗ್ಸ್ ನ 16ನೇ ಓವರ್ ನಲ್ಲಿ 44 ರನ್ ಗಳಿಸಿದ್ದ ಶಿಮ್ರಾನ್ ಹೆಟ್ಮಾಯೆರ್ ನೀಡಿದ್ದ ಕ್ಯಾಚ್ ಅನ್ನು ವಾಷಿಂಗ್ಟನ್ ಸುಂದರ್ ಕೈಬಿಟ್ಟರು. ಪರಿಣಾಮ ಶಿಮ್ರಾನ್ ಟಿ-20ಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದರು. ಇದೇ ಓವರ್ ನಲ್ಲಿ ರೋಹಿತ್ ಶರ್ಮಾ 24 ರನ್‍ಗಳಿಸಿದ್ದ ಪೊಲಾರ್ಡ್ ಕ್ಯಾಚ್ ಕೈಬಿಟ್ಟರು. ಇದರಿಂದಾಗಿ 19 ಎಸೆತಗಳಲ್ಲಿ 37 ರನ್ ಗಳಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಭಾರತದ ವಿರುದ್ಧ ಎರಡನೇ ಅತಿ ಹೆಚ್ಚು ಮೊತ್ತವನ್ನು ದಾಖಲಿಸಿತು.

ವಿಂಡೀಸ್ ಒಡ್ಡಿದ್ದ ಬೃಹತ್ ಮೊತ್ತದ ಸವಾಲನ್ನು ನಾಯಕ ವಿರಾಟ್ ಕೊಹ್ಲಿ ಬೇಧಿಸಿದರು. ಪಂದ್ಯದಲ್ಲಿ 94 ರನ್ (50 ಎಸೆತ, 6 ಬೌಂಡರಿ, 6 ಸಿಕ್ಸರ್) ಗಳಿಸಿದ ಕೊಹ್ಲಿ ಸಿಕ್ಸರ್, ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟು ಅಜೇಯರಾಗಿ ಉಳಿದರು. ಇದು ಕೊಹ್ಲಿ ಅವರ ಟಿ20 ಮಾದರಿಯ ಟಾಪ್ ಸ್ಕೋರ್ ಆಗಿದೆ.

Leave a Reply

Your email address will not be published.

Back to top button