ಮುಂಬೈ: ಪ್ರವಾಸಿ ಶ್ರೀಲಂಕಾ (Sri Lanka) ಉತ್ತಮವಾಗಿ ಆಡಿ ಕೊನೆ ಕ್ಷಣದಲ್ಲಿ ಪಂದ್ಯ ಕೈಚೆಲ್ಲಿಕೊಂಡರೆ, ಡೆಬ್ಯೂ ಸ್ಟಾರ್ ಶಿವಂ ಮಾವಿ (Shivam Mavi) ಬೌಲಿಂಗ್‍ನಲ್ಲಿ ಲಗಾಮು ಹಾಕಿದ ಪರಿಣಾಮ ತವರಿನಲ್ಲಿ ಭಾರತ (India) 2 ರನ್‍ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
Advertisement
ಗೆಲ್ಲಲು 163 ರನ್‌ಗಳ ಗುರಿ ಪಡೆದ ಶ್ರೀಲಂಕಾಗೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 13 ರನ್ ಬೇಕಾಗಿತ್ತು. ಅಕ್ಷರ್ ಪಟೇಲ್ ಎಸೆದ ಕೊನೆಯ ಓವರ್‌ನ ಮೊದಲ ಎಸೆತ ವೈಡ್ ಆಯಿತು. ನಂತರ ಮೊದಲ ಎರಡು ಎಸೆತಗಳಲ್ಲಿ ಒಂದೊಂದು ರನ್ ಬಂದರೆ, 3ನೇ ಎಸೆತ ಸಿಕ್ಸ್, 4 ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ನಂತರ 5ನೇ ಎಸೆತದಲ್ಲಿ ವಿಕೆಟ್ ಬಿತ್ತು. ಕೊನೆಯ ಎಸೆತದಲ್ಲಿ ಶ್ರೀಲಂಕಾ ಗೆಲುವಿಗೆ 4 ರನ್ ಬೇಕಾಗಿತ್ತು. ಆದರೆ ಬ್ಯಾಟ್ಸ್‌ಮ್ಯಾನ್ ರನೌಟ್ ಆಗುವುದರೊಂದಿಗೆ ಭಾರತ 2 ರನ್‍ಗಳ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: ಮಂಕಡ್ ಮೂಲಕ ರನೌಟ್ ಮಾಡಿದ ಜಂಪಾ – ನಾಟೌಟ್ ಎಂದ ಅಂಪೈರ್!
Advertisement
Advertisement
ಬ್ಯಾಟಿಂಗ್‍ನಲ್ಲಿ ಅಕ್ಷರ್ ಪಟೇಲ್ ಮತ್ತು ದೀಪಕ್ ಹೂಡಾ ಧೂಳೆಬ್ಬಿಸಿದರೆ, ಬೌಲಿಂಗ್‍ನಲ್ಲಿ ಶಿವಂ ಮಾವಿ ಶೈನ್ ಆದರು. ಪರಿಣಾಮ 20 ಓವರ್‌ಗಳಲ್ಲಿ 163 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ 160 ರನ್‍ಗಳಿಗೆ ಸರ್ವಪತನ ಕಂಡು ಸೋಲುಂಡಿತು. ಇತ್ತ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾದ ಗೆಲುವಿನ ಓಟ ಮುಂದುವರಿಸಿತು.
Advertisement
ಉತ್ತಮ ಮೊತ್ತ ಗುರಿ ಪಡೆದು ಚೇಸಿಂಗ್ ಆರಂಭಿಸಿದ ಲಂಕಾ ಆರಂಭಿಕ ಆಘಾತ ಅನುಭವಿಸಿತು. ಡೆಬ್ಯೂ ಆಟಗಾರ ಶಿವಂ ಮಾವಿ ತನ್ನ ಮೊದಲ ಓವರ್‌ನಲ್ಲೇ ವಿಕೆಟ್ ಬೇಟೆ ಆರಂಭಿಸಿದರು. ನಿಸಲಂಕ 1, ಡಿಸಿಲ್ವ 8, ಅಸಲಂಕ 12, ರಾಜಪಕ್ಸ 10 ರನ್ ಬಾರಿಸಿ ನಿರಾಸೆ ಅನುಭವಿಸಿದರು.
ಮಾವಿ ಮಾರಕ ದಾಳಿ:
ಶಿವಂ ಮಾವಿ ಆರಂಭದಿಂದಲೇ ವಿಕೆಟ್ ಕಿತ್ತು ಮೇಲುಗೈ ತಂದರೆ, ಆ ಬಳಿಕ ಹರ್ಷಲ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ಶ್ರೀಲಂಕಾವನ್ನು ಕಟ್ಟಿಹಾಕಿದರು. ಈ ನಡುವೆ ಗೆಲುವಿಗಾಗಿ ನಾಯಕ ದಾಸುನ್ ಶನಕ 45 ರನ್ (27 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ಹೋರಾಡಿ ಔಟ್ ಆಗುತ್ತಿದ್ದಂತೆ ಶ್ರೀಲಂಕಾ ಗೆಲುವಿನ ಆಸೆ ಕಮರಿತು. ಅಂತಿಮವಾಗಿ ಲಂಕಾ 20 ಓವರ್‌ಗಳಲ್ಲಿ 160 ರನ್‍ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಬುಮ್ರಾ ಈಸ್ ಬ್ಯಾಕ್ – ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ
ಭಾರತ ಪರ ಶಿವಂ ಮಾವಿ 4 ವಿಕೆಟ್ ಕಿತ್ತು ತಮ್ಮ ಡೆಬ್ಯೂ ಪಂದ್ಯವನ್ನು ಸ್ಮರಣಿಯವಾಗಿಸಿಕೊಂಡರೆ, ಉಮ್ರಾನ್ ಮಲಿಕ್ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಈ ಮೊದಲು ಟಾಸ್ ಗೆದ್ದ ಶ್ರೀಲಂಕಾ ಆತಿಥೇಯ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಇತ್ತ ಶ್ರೀಲಂಕಾ ಬೌಲರ್‌ಗಳು ನಾಯಕನ ನಿರ್ಧಾರವನ್ನು ಯಶಸ್ವಿಯಾಗಿಸುವಂತೆ ಆರಂಭದಲ್ಲೇ ವಿಕೆಟ್ ಬೇಟೆ ಆರಂಭಿಸಿದರು. ಶುಭಮನ್ ಗಿಲ್ 7, ಸೂರ್ಯಕುಮಾರ್ ಯಾದವ್ 7 ಮತ್ತು ಸಂಜು ಸ್ಯಾಮ್ಸನ್ 5 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.
ಒಂದು ಕಡೆ ವಿಕೆಟ್ ಪತನವಾಗುತ್ತಿದ್ದರೆ ಇನ್ನೊಂದೆಡೆ ಇಶಾನ್ ಕಿಶನ್ ಬೌಂಡರಿ, ಸಿಕ್ಸರ್‌ಗಳ ಮೂಲಕ ಮೆರೆದಾಡಿದರು. ಆದರೆ ಕಿಶನ್ ಆಟ 37 ರನ್ (29 ಎಸೆತ, 3 ಬೌಂಡರಿ, 2 ಸಿಕ್ಸ್)ಗೆ ಅಂತ್ಯ ಕಂಡಿತು. ಇತ್ತ ಇಶಾನ್ ಕಿಶನ್‍ಗೆ ಉತ್ತಮ ಸಾಥ್ ನೀಡುತ್ತಿದ್ದ ನಾಯಕ ಪಾಂಡ್ಯ ಕೂಡ 29 ರನ್ (27 ಎಸೆತ, 4 ಬೌಂಡರಿ) ಸಿಡಿಸಿ ಕ್ಯಾಚ್ ನೀಡಿ ಹೊರ ನಡೆದರು.
ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಹೂಡಾ, ಅಕ್ಷರ್
94 ರನ್‍ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಕುಸಿತಕಂಡಿದ್ದ ತಂಡಕ್ಕೆ ಆ ಬಳಿಕ ಸ್ಲಾಗ್ ಓವರ್‌ಗಳಲ್ಲಿ ಶಕ್ತಿ ತುಂಬಿದ್ದು, ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್. ಇವರಿಬ್ಬರೂ ಕುಸಿತದ ಭೀತಿಯಲ್ಲಿದ್ದ ತಂಡಕ್ಕೆ ಭರ್ಜರಿ ಬ್ಯಾಟಿಂಗ್ ಮೂಲಕ ಚೇತರಿಕೆ ನೀಡಿದರು. ಹೂಡಾ ತನ್ನ ಹೊಡಿಬಡಿ ಬ್ಯಾಟಿಂಗ್ ಮೂಲಕ 41 ರನ್ (23 ಎಸೆತ, 1 ಬೌಂಡರಿ, 4 ಸಿಕ್ಸ್) ಚಚ್ಚಿ ಮಿಂಚಿದರು. ಇವರೊಂದಿಗೆ ನಾನೇನು ಕಮ್ಮಿ ಇಲ್ಲ ಎಂಬಂತೆ ಅಕ್ಷರ್ ಪಟೇಲ್ 31 ರನ್ (20 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಈ ಜೋಡಿ 6ನೇ ವಿಕೆಟ್‍ಗೆ ಅಜೇಯ 68 ರನ್ (35 ಎಸೆತ) ಚಚ್ಚಿದ ಪರಿಣಾಮ 20 ಓವರ್‍ಗಳಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 162 ರನ್ ಬಾರಿಸಿತು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ, ಮಹೇಶ್ ತೀಕ್ಷಣ, ಚಾಮಿಕಾ ಕರುಣಾರತ್ನೆ, ಹಸರಂಗ, ಧನಂಜಯ ಡಿಸಿಲ್ವ ತಲಾ 1 ವಿಕೆಟ್ ಪಡೆದರು.