ಕೊಲಂಬೊ: ಕೊನೆವರೆಗೂ ರೋಚಕತೆಯಿಂದ ಕೂಡಿದ್ದ ಭಾರತ-ಶ್ರೀಲಂಕಾ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಚೊಚ್ಚಲ ಪಂದ್ಯ ಟೈ ಆಗಿದೆ. ಗೆಲುವಿಗೆ ಬೇಕಿದ್ದ 1 ರನ್ ಗಳಿಸುವಲ್ಲಿ ಟೀಂ ಇಂಡಿಯಾ ವಿಫಲವಾಗಿ ಪಂದ್ಯವು ಟೈನಲ್ಲಿ ಅಂತ್ಯಕಂಡಿತು.
ಇಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಶ್ರೀಲಂಕಾ ತಂಡವು 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತ್ತು. 231 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 47.5 ಓವರ್‌ಗೆ 230 ರನ್ ಗಳಿಸಿ ಗೆಲುವು ದಾಖಲಿಸಲಾಗದೇ ಆಲೌಟ್ ಆಯಿತು.
14 ಬಾಲ್‌ಗೆ ಗೆಲುವಿಗಾಗಿ ಭಾರತಕ್ಕೆ ಕೇವಲ 1 ರನ್ ಅಗತ್ಯವಿತ್ತು. ಶಿವಂ ದುಬೆ ಭರವಸೆ ಮೂಡಿಸಿದ್ದರು. ಆದರೆ ಎಲ್‌ಬಿಡಬ್ಲ್ಯೂ ಆಗಿ ನಿರಾಸೆ ಮೂಡಿಸಿದರು. ಕೊನೆ ಬ್ಯಾಟರ್ ಆಗಿದ್ದ ಅಕ್ಷರ್ ಪಟೇಲ್ ಕೂಡ ಎಲ್‌ಬಿಡಬ್ಲ್ಯೂ ಆದರು. ಭಾರತ ತಂಡ ಆಲೌಟ್ ಆಗಿ ಪಂದ್ಯ ಟೈ ಆಯಿತು.
ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 58, ಶುಭಮನ್ ಗಿಲ್ 16, ವಿರಾಟ್ ಕೊಹ್ಲಿ 23, ಕೆ.ಎಲ್.ರಾಹುಲ್ 31, ಅಕ್ಷರ್ ಪಟೇಲ್ 33, ಶಿವಂ ದುಬೆ 25 ರನ್ ಗಳಿಸಿದರು. ಶ್ರೀಲಂಕಾ ಪರ ವನಿಂದು ಹಸರಂಗ ಹಾಗೂ ಚರಿತ್ ಅಸಲಂಕಾ ತಲಾ 3 ವಿಕೆಟ್ ಕಬಳಿಸಿದರು. ದುನಿತ್ ವೆಲ್ಲಲಾಗೆ 2 ಹಾಗೂ ಅಸಿತ ಫೆರ್ನಾಂಡೋ, ಅಕಿಲ ದನಂಜಯ ತಲಾ 1 ವಿಕೆಟ್ ಕಿತ್ತರು.
ದುನೀತ್ ವೆಲ್ಲಲಾಗೆ 67, ಪಾತುಂ ನಿಸ್ಸಾಂಕ 56 ರನ್ ಗಳಿಸಿ ತಂಡಕ್ಕೆ ಹೆಚ್ಚಿನ ರನ್ ಬರಲು ಕಾರಣರಾದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಯಾವ ಬ್ಯಾಟರ್ ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಟೀಂ ಇಂಡಿಯಾ ಪರ ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್, ಶಿವಂ ದುಬೆ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಕಬಳಿಸಿದ್ದಾರೆ.