– ವಿರಾಟ್‍ಗೆ ಇಲ್ಲ ವಿಶ್ರಾಂತಿ, ಹಾರ್ದಿಕ್, ಭುಮಿ ಕಮ್‍ಬ್ಯಾಕ್
– ರಾಹುಲ್, ರಿಷಬ್ ಇಬ್ಬರಿಗೆ ಅವಕಾಶ
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ ಸ್ಥಾನ ಪಡೆದುಕೊಂಡಿದ್ದಾರೆ.
ಗಾಯದಿಂದ ಚೇತರಿಸಿಕೊಂಡ ಅನುಭವಿ ಆಟಗಾರ, ಓಪನರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದ್ದಾರೆ. ಆದರೆ, ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರು ಗಾಯದಿಂದ ಇನ್ನೂ ಚೇತರಿಸಿಕೊಳ್ಳದೆ ಇರುವುದರಿಂದ ಅವರನ್ನು ಕೈಬಿಡಲಾಗಿದೆ.
Advertisement
Advertisement
ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭುವಿ ಕೂಡ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭುವನೇಶ್ವರ್ ಕುಮಾರ್ ಅವರು ಹಾರ್ದಿಕ್ ಪಾಂಡ್ಯ ಮತ್ತು ಜಸ್‍ಪ್ರೀತ್ ಬುಮ್ರಾ ಅವರೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಏಕದಿನ ಸರಣಿಯ ತಂಡದಲ್ಲಿ ಯುವ ಆಟಗಾರ ಶುಭ್‍ಮನ್ ಗಿಲ್ ಅವರನ್ನು ಉಳಿಸಿಕೊಳ್ಳಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
Advertisement
ಮೂವರು ವೇಗದ ಬೌಲರ್‌ಗಳು:
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವೇಗದ ಬೌಲರ್ ಗಳಾದ ಜಸ್‍ಪ್ರೀತ್ ಬುಮ್ರಾ, ನವದೀಪ್ ಸೈನಿ ಹಾಗೂ ಭುವನೇಶ್ವರ್ ಕುಮಾರ್ ಸ್ಥಾನ ಪಡೆದುಕೊಂಡಿದ್ದಾರೆ. ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಸುವ ಸಾಧ್ಯತೆ ಇದೆ.
Advertisement
ಭಾರತದ ಸ್ಪಿನ್ ಪಡೆಯಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಹಾಗೂ ಯಜುವೇಂದ್ರ ಚಹಲ್ ಸ್ಥಾನ ಪಡೆದಿದ್ದಾರೆ. ಆದರೆ ಕುಲದೀಪ್ ಯಾದವ್ ಅವರನ್ನು ಇತರೆ ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‍ನಲ್ಲಿ ಬಲವಾಗಿ ಕಾಣುತ್ತಿದೆ.
ವಿಕೆಟ್ ಕೀಪರ್ ಯಾರು?
ಟೀಂ ಇಂಡಿಯಾ ಕ್ರಿಕೆಟ್ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಯಾರು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ನ್ಯೂಜಿಲೆಂಡ್ ಪ್ರಸಾದ ವೇಳೆ 3 ಏಕದಿನ ಪಂದ್ಯ ಹಾಗೂ 5 ಟಿ20 ಪಂದ್ಯಗಳಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಕೀಪಿಂಗ್ ಜವಾಬ್ದಾರಿ ಹಾಗೂ ಎರಡನ್ನೂ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಯಾರ ಹೆಗಲಿಗೆ ಬೀಳುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ.
ವೇಳಾಪಟ್ಟಿ:
ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೊದಲ ಪಂದ್ಯ ಧರ್ಮಶಾಲದಲ್ಲಿ ಮಾರ್ಚ್ 12ರಂದು ಮಧ್ಯಾಹ್ನ 1.30 ರಿಂದ ಆರಂಭವಾಗಲಿದೆ. ಎರಡನೇ ಪಂದ್ಯವು ಲಕ್ನೋದಲ್ಲಿ ಮಾರ್ಚ್ 15ರಂದು ಮಧ್ಯಾಹ್ನ 1.30 ರಿಂದ ನಡೆಯಲಿದೆ. ಕೊನೆಯ ಹಾಗೂ ಮೂರನೇ ಪಂದ್ಯ ಕೋಲ್ಕತ್ತಾದಲ್ಲಿ ಮಾರ್ಚ್ 18ರಂದು ಮಧ್ಯಾಹ್ನ 1.30 ರಿಂದ ನಡೆಯಲಿದೆ.
ಭಾರತ ತಂಡ:
ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್, ಜಸ್‍ಪ್ರೀತ್ ಬುಮ್ರಾ ಇದ್ದಾರೆ. ಇತರೆ ಆಟಗಾರರ ಪಟ್ಟಿಯಲ್ಲಿ ನವದೀಪ್ ಸೈನಿ, ಕುಲದೀಪ್ ಯಾದವ್, ಶುಭ್‍ಮನ್ ಗಿಲ್.
#TeamIndia for 3-match ODI series against SA – Shikhar Dhawan, Prithvi Shaw, Virat Kohli (C), KL Rahul, Manish Pandey, Shreyas Iyer, Rishabh Pant, Hardik Pandya, Ravindra Jadeja, Bhuvneshwar Kumar, Yuzvendra Chahal, Jasprit Bumrah, Navdeep Saini, Kuldeep Yadav, Shubman Gill. pic.twitter.com/HD53LRAhoh
— BCCI (@BCCI) March 8, 2020