Connect with us

Cricket

ರಾಂಚಿ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಧೋನಿ

Published

on

ರಾಂಚಿ: ವಿಶ್ವಕಪ್ ಟೂರ್ನಿಯ ಬಳಿಕ ಕ್ರಿಕೆಟ್‍ನಿಂದ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಶನಿವಾರ ರಾಂಚಿಯಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಸದಸ್ಯರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಧೋನಿ ತವರು ನೆಲ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಪಂದ್ಯಗಳ ಟೂರ್ನಿಯ ಅಂತಿಮ ಪಂದ್ಯ ಶನಿವಾರದಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಧೋನಿ ಕ್ರೀಡಾಂಗಣಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ ಎಂದು ಧೋನಿ ಬಾಲ್ಯದ ಗೆಳೆಯ, ಮ್ಯಾನೇಜರ್ ಮಿಹಿರ್ ದಿವಾಕರ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಜಾರ್ಖಂಡ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಫಿಸ್ ಖಾನ್ ಧೋನಿ ಅವರ ಕುಟುಂಬಕ್ಕೆ ವೈಯಕ್ತಿಕ ಆಹ್ವಾನ ನೀಡಿದ್ದು, ಧೋನಿ ತವರಿನ ಕ್ರೀಡಾಂಗಣ ಆಗಿರುವುದರಿಂದ ಅವರಿಗೆ ಆಹ್ವಾನ ನೀಡಲಾಗಿದೆ ಎಂದಿದ್ದಾರೆ. ಧೋನಿ ರಾಂಚಿಯಿಂದ 30 ಕಿಲೋ ಮೀಟರ್ ದೂರ ಇರುವ ನಿವಾಸದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

ವಿಶ್ವಕಪ್ ಬಳಿಕ ಧೋನಿ ನಿವೃತ್ತಿಯ ಕುರಿತು ಭಾರೀ ಚರ್ಚೆಗಳು ನಡೆದಿದ್ದು, ಬಿಸಿಸಿಐ ಬಾಂಗ್ಲಾದೇಶದ ಟೂರ್ನಿಗೂ ಅವರನ್ನು ಆಯ್ಕೆ ಮಾಡಿಲ್ಲ. ಪರಿಣಾಮ ಅವರು ಮುಂದಿನ ಅವಧಿಯಲ್ಲಿ ಟೀಂ ಇಂಡಿಯಾ ಪರ ಧೋನಿ ಆಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಧೋನಿ ಆಪ್ತ ವಲಯದಲ್ಲಿರುವ ದಿವಾಕರ್ ಕೂಡ, ನಿವೃತ್ತಿಯ ಬಗ್ಗೆ ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ ಎಂದಿದ್ದಾರೆ. ಅಲ್ಲದೇ ಧೋನಿರ ತೀರ್ಮಾನಗಳ ಬಗ್ಗೆ ಭವಿಷ್ಯ ನುಡಿಯುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ. ಅಂದಹಾಗೇ ಧೋನಿ ಟೆಸ್ಟ್ ಕ್ರಿಕೆಟ್‍ಗೆ 2014 ರಲ್ಲಿ ನಿವೃತ್ತಿ ಘೋಷಿಸಿದ್ದು, ಸಮೀತ ಓವರ್ ಗಳ ಕ್ರಿಕೆಟ್‍ನಲ್ಲಿ ಮಾತ್ರ ಮುಂದುವರಿದಿದ್ದರು.

ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ವಶಕ್ಕೆ ಪಡೆದಿದ್ದು, ರಾಂಚಿ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ನಂ.1 ಪಟ್ಟದಲ್ಲಿ ಮುಂದುವರಿಯುವ ಚಿಂತನೆಯಲ್ಲಿದೆ.

Click to comment

Leave a Reply

Your email address will not be published. Required fields are marked *