ಸಿಕ್ಸರ್‌ನೊಂದಿಗೆ ಶತಕ, ದ್ವಿಶತಕ ಸಿಡಿಸಿ ದಾಖಲೆ ಬರೆದ ರೋಹಿತ್

Public TV
2 Min Read
ROHIT SHARMA a

– ದಕ್ಷಿಣ ಆಫ್ರಿಕಾ ವಿರುದ್ಧ ಹಿಟ್ ಮ್ಯಾನ್ 500ಪ್ಲಸ್ ರನ್
– ಡಾನ್ ಬ್ರಾಡ್ಮನ್ ದಾಖಲೆ ಉಡೀಸ್

ರಾಂಚಿ: ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಟೆಸ್ಟ್ ಮಾದರಿಯಲ್ಲಿ ಮೊದಲ ದ್ವಿಶತಕದ ಸಾಧನೆ ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ದ್ವಿಶತಕ ಸಿಡಿಸಿದ್ದಾರೆ.

ಪಂದ್ಯದ ಮೊದಲ ದಿನದಾಟದಲ್ಲಿ ಶತಕ ಸಿಡಿಸಿದ್ದ ರೋಹಿತ್ ಇಂದು ಅದನ್ನು ದ್ವಿಶತಕವಾಗಿ ಪರಿವರ್ತಿಸಲು ಯಶಸ್ವಿಯಾದರು. ಅಲ್ಲದೇ ಶತಕವನ್ನು ಸಿಕ್ಸರ್ ಬಾರಿಸುವ ಪೂರೈಸಿದ್ದ ಹಿಟ್ ಮ್ಯಾನ್ ಇಂದು ದ್ವಿಶತಕವನ್ನು ಸಿಕ್ಸರ್ ಸಿಡಿಸಿಯೇ ಪೂರೈಸಿದ್ದು ವಿಶೇಷವಾಗಿತ್ತು. ಈ ಮೂಲಕ ಭಾರತದ ಪರ ಸಿಕ್ಸರ್ ಸಿಡಿಸಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 249 ಎಸೆತಗಳಲ್ಲಿ 28 ಬೌಂಡರಿ, 6 ಸಿಕ್ಸರ್ ಗಳ ನೆರವಿನಿಂದ ರೋಹಿತ್ ದ್ವಿಶತಕ ಸಿಡಿಸಿದ್ದು, ಆ ಮೂಲಕ ಏಕದಿನ ಹಾಗೂ ಟೆಸ್ಟ್ ಎರಡೂ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದರು.

224 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು 2ನೇ ದಿನದಾಟ ಆರಂಭಿಸಿದ ಭಾರತ ಪರ 115 ರನ್ ಗಳಿಸಿ ರಹಾನೆ ಔಟಾದರು. ಆ ಬಳಿಕ ರವೀಂದ್ರ ಜಡೇಜಾರನ್ನು ಕೂಡಿಕೊಂಡ ರೋಹಿತ್ ಬಿರುಸಿನ ಆಟ ಪ್ರದರ್ಶಿಸಿದರು. 199 ರನ್ ಗಳಿಸಿದ್ದ ವೇಳೆ ರೋಹಿತ್ ಔಟಾಗುವ ಪ್ರಮಾದದಿಂದ ತಪ್ಪಿಸಿಕೊಂಡರು. ವಿರಾಮ ಬಳಿಕ ಆರಂಭವಾದ ಆಟದಲ್ಲಿ ದ್ವಿಶತಕ ಸಾಧನೆ ಮಾಡಿ 255 ಎಸೆತಗಳಲ್ಲಿ 212 ರನ್ ಗಳಿಸಿ 5ನೇಯವರಾಗಿ ಔಟಾದರು. ಅಂದಹಾಗೇ ರೋಹಿತ್ ಶರ್ಮಾ ತಮ್ಮ 6 ಟೆಸ್ಟ್ ಶತಕಗಳನ್ನು ತವರು ನೆಲದಲ್ಲಿಯೇ ಗಳಿಸಿದ್ದಾರೆ.

500 ಪ್ಲಸ್ ರನ್: ದಕ್ಷಿಣ ಆಫ್ರಿಕಾ ವಿರುದ್ಧ ಟೂರ್ನಿಯಲ್ಲಿ ರೋಹಿತ್ 500 ಪ್ಲಸ್ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಭಾರತ ಪರ ಒಂದು ಟೂರ್ನಿಯಲ್ಲಿ 500 ಪ್ಲಸ್ ರನ್ ಗಳಿಸಿದ 5ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಹಿಂದೆ ಭಾರತದ ಪರ ಸುನೀಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ವಿನೂ ಮಂಕಡ್, ಬುಧಿ ಕುಂದೇರನ್ ಈ ಸಾಧನೆಯನ್ನು ಮಾಡಿದ್ದ ಆರಂಭಿಕ ಆಟಗಾರಾಗಿದ್ದಾರೆ. 2005 ರಲ್ಲಿ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ವಿರುದ್ಧ 500 ರನ್ ಗಳಿಸಿ ಈ ಸಾಧನೆ ಮಾಡಿದ್ದರು.

99.84 ಸರಾಸರಿ: ತವರು ನೆಲದಲ್ಲಿ ನಡೆದ ಟೆಸ್ಟ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 99.84ರ ಸರಾಸರಿಯಲ್ಲಿ ರನ್ ಗಳಿಸಿದ್ದು, ಈ ಹಿಂದೆ ದಿಗ್ಗಜ ಆಟಗಾರ ಡಾನ್ ಬ್ರಾಡ್ಮನ್ ಆಸೀಸ್ ತವರು ನೆಲದಲ್ಲಿ ಸಿಡಿಸಿದ್ದ ಸರಾಸರಿ ರನ್ ದಾಖಲೆಯನ್ನು ಮುರಿದರು. ಬ್ರಾಡ್ಮನ್ 98.22 ಸರಾಸರಿಯಲ್ಲಿ ರನ್ ಗಳಿಸಿದ್ದರು.

ಟೆಸ್ಟ್ ಮಾದರಿಯಲ್ಲಿ ರೋಹಿತ್ ರನ್ ಗಳಿಸುವ ಕುರಿತು ಹೆಚ್ಚಿನ ಸಮಯ ಚಿಂತನೆ ನಡೆಸಿ ರೋಹಿತ್‍ಗೆ ಆರಂಭಿಕ ಸ್ಥಾನ ನೀಡಲಾಗಿತ್ತು. ತಮ್ಮ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿರುವ ರೋಹಿತ್ ಮೊದಲ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಾಧನೆ ಮಾಡಿ ತಿರುಗೇಟು ನೀಡಿದ್ದರು. ಸದ್ಯ ಅಂತಿಮ ಪಂದ್ಯದಲ್ಲೂ ದ್ವಿಶತಕ ಸಾಧನೆ ಮಾಡುವ ಮೂಲಕ ಆಯ್ಕೆ ಸಮಿತಿಗೆ ಖಡಕ್ ಸಂದೇಶವನ್ನು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *