ಮುತ್ತಯ್ಯ ಮುರಳೀಧರನ್ ವಿಶ್ವದಾಖಲೆ ಸರಿಗಟ್ಟಿದ ಆರ್.ಅಶ್ವಿನ್

Public TV
1 Min Read
Ashwin

ವಿಶಾಖಪಟ್ಟಣಂ: ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಪರೂಪದ ಸಾಧನೆ ಮಾಡಿದ್ದು, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.

ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾದ 7 ವಿಕೆಟ್ ಪಡೆದಿದ್ದ ಅಶ್ವಿನ್ 2ನೇ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ಪಡೆದಿದ್ದು, ಆ ಮೂಲಕ ವೇಗವಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ 350 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಅಶ್ವಿನ್ ಈ ಸಾಧನೆಯನ್ನು 66 ಪಂದ್ಯಗಳಲ್ಲಿ ಮಾಡಿದ್ದು, ಮುರಳೀಧರನ್ ದಾಖಲೆ ಮುರಿಯಲು 1 ವಿಕೆಟ್ ಮಾತ್ರ ಇದೆ. 2001ರಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಮುರಳೀಧರನ್ ಈ ದಾಖಲೆ ಮಾಡಿದ್ದರು. ಅಂದಹಾಗೇ ಮುರಳೀಧರನ್ ವೃತ್ತಿ ಜೀವನದಲ್ಲಿ 800 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಭಾರತದ ಪರ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ.

ಉಳಿದಂತೆ ಅಶ್ವಿನ್ 5 ವಿಕೆಟ್ ಗೊಂಚಲು ಪಡೆದ ಸಾಧನೆಯನ್ನು 21 ಬಾರಿ ಮಾಡಿದ್ದು, 45 ಬಾರಿ 5 ವಿಕೆಟ್ ಗೊಂಚಲು ಪಡೆದಿರುವ ಮುರಳೀಧರನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ರಂಗನಾ ಹೆರಾತ್ 26, ಅನಿಲ್ ಕುಂಬ್ಳೆ 25 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.

ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಾಟವನ್ನು 1 ವಿಕೆಟ್ ಕಳೆದುಕೊಂಡು 11 ರನ್ ಗಳಿಂದ ಆರಂಭಿಸಿದ ದಕ್ಷಿಣ ಅಫ್ರಿಕಾ ತಂಡ ಟೀಂ ಇಂಡಿಯಾ ಬೌಲರ್ ಜಡೇಜಾರ ದಾಳಿಗೆ ಸಿಲುಕಿ ತತ್ತರಿಸಿದೆ. ಇತ್ತೀಚಿನ ವರದಿ ಬಂದಾಗ ದಕ್ಷಿಣ ಆಫ್ರಿಕಾ 110 ರನ್ ಗಳಿಗೆ 8 ವಿಕೆಟ್ ಕಳೆದು ಕೊಂಡು ಸೋಲಿನ ಸುಳಿಗೆ ಸಿಲುಕಿದ್ದು, ಟೀಂ ಇಂಡಿಯಾ ಮೊದಲ ಟೆಸ್ಟ್ ಗೆಲುವಿನ ಸನಿಹದಲ್ಲಿದೆ. 2ನೇ ಇನ್ನಿಂಗ್ಸ್ ನಲ್ಲಿ ಇದುವರೆಗೆ ಜಡೇಜಾ 4 ವಿಕೆಟ್ ಪಡೆದರೆ, ಶಮಿ 3 ಉರುಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *