ಡರ್ಬನ್: ಟೆಸ್ಟ್ ಸರಣಿ ಸೋಲಿನ ನಿರಾಸೆಯಿಂದ ಹೊರಬಂದು ಕೆಚ್ಚೆದೆಯ ಆಟವಾಡಿದ ಪ್ರವಾಸಿ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್‍ಗಳಿಂದ ಗೆದ್ದು ಬೀಗಿದೆ.
ಡರ್ಬನ್‍ನ ಕಿಂಗ್ಸ್ ಮೇಡ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ನೀಡಿದ್ದ 270 ರನ್‍ಗಳ ಸವಾಲಿನ ಗುರಿಯನ್ನು 45.3 ಓವರ್‍ಗಳಲ್ಲಿ 4ವಿಕೆಟ್ ನಷ್ಟದಲ್ಲಿ ಚೇಸ್ ಮಾಡಿದ ಭಾರತ ಸರಣಿಯಲ್ಲಿ ಶುಭಾರಂಭ ಮಾಡಿದೆ. ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ – ಧವನ್ ಜೋಡಿ 33 ರನ್ ಗಳಿಸುವಷ್ಟರಲ್ಲಿಯೇ ಬೇರ್ಪಟ್ಟಿತ್ತು. ಶರ್ಮಾ 20 ರನ್‍ಗಳಿಸಿ ಔಟಾದರೆ 35 ರನ್‍ಗಳಿಸಿ ಆಡುತ್ತಿದ್ದ ಧವನ್ ರನೌಟ್‍ಗೆ ಬಲಿಯಾದರು. ಬಳಿಕ ಜೊತೆಯಾದ ನಾಯಕ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಮೂರನೇ ವಿಕೆಟ್‍ಗೆ 189ರನ್‍ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.
Advertisement
Advertisement
105 ಎಸೆತಗಳಲ್ಲಿ 9 ಬೌಂಡರಿಗಳಿಂದ ವೃತ್ತಿ ಜೀವನದ 33ನೇ ಶತಕ ದಾಖಲಿಸಿದ ಕೊಹ್ಲಿ, ಆಫ್ರಿಕಾ ಬೌಲರ್‍ಗಳ ಬೆವರಿಳಿಸಿದರು. ಚೇಸಿಂಗ್ ವೇಳೆ 20ನೇ ಶತಕ ಸಿಡಿಸಿz ಕೊಹ್ಲಿ ಬ್ಯಾಟಿಂಗ್‍ನಲ್ಲಿ ಮತ್ತೊಮ್ಮೆ ಕಮಾಲ್ ಮಾಡಿದರು. ವಿದೇಶಗಳಲ್ಲಿ ಕೊಹ್ಲಿ ಗಳಿಸಿದ 19ನೇ ಶತಕ ಇದಾಗಿದ್ದು, ಆಫ್ರಿಕಾದಲ್ಲಿ ಇದೇ ಮೊದಲ ಬಾರಿ ಶತಕದ ಸಂಭ್ರಮವನ್ನಾಚರಿಸಿದರು. 119 ಎಸೆತಗಳಿಂದ 112 ರನ್‍ಗಳಿಸಿ ಗೆಲುವಿನ ಸನಿಹದಲ್ಲಿ ರಬಾಡಾಗೆ ಕ್ಯಾಚಿತ್ತು ನಿರ್ಗಮಿಸಿದರು. ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಅಜಿಂಕ್ಯಾ ರಹಾನೆ 86 ಎಸೆತಗಳಿಂದ 5 ಬೌಂಡರಿ ಹಾಗೂ 2 ಸಿಕ್ಸರ್‍ಗಳ ನೆರವಿನಿಂದ ಆಕರ್ಷಕ 79 ರನ್‍ಗಳಿಸಿ ಫೆಲುಕ್ವಾಯೊಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಮಹೇಂದ್ರ ಸಿಂಗ್ ಧೋನಿ 4 ಹಾಗೂ ಪಾಂಡ್ಯಾ 3 ರನ್‍ಗಳಿಸಿ ಗೆಲುವಿನ ಸಂಭ್ರವನ್ನಾಚರಿಸಿದರು.
Advertisement
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಹರಿಣಗಳು ನಾಯಕ ಡುಪ್ಲೆಸ್ಸಿಸ್ ಶತಕದ ನೆರವಿನಿಂದ 8 ವಿಕೆಟ್ ನಷ್ಟದಲ್ಲಿ 269ರನ್‍ಗಳಿಸಿತ್ತು. 34 ರನ್ ಗಳಿಸಿದ್ದ ಡಿ ಕಾಕ್‍ರನ್ನು ಎಲ್‍ಬಿಡಬ್ಲ್ಯೂ ಬಲೆಯಲ್ಲಿ ಕೆಡವಿದ ಸ್ಪಿನ್ನರ್ ಚಾಹಲ್ ಆಫ್ರಿಕಾಗೆ ಶಾಕ್ ನೀಡಿದ್ದರು. ಮಾರ್ಕ್ ರಮ್ (9), ಜೆಪಿ ಡ್ಯುಮಿನಿ (12), ಡೇವಿಡ್ ಮಿಲ್ಲರ್ (7) ರನ್‍ಗಳಿಸುವಷ್ಟರಲ್ಲೇ ಪೆವಿಲಿಯನ್ ಸೇರಿದ್ದರು. ಆದರೆ ಇನ್ನೊಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ನಾಯಕ ಡು ಪ್ಲೆಸಿಸ್ ಮಾತ್ರ ಏಕಾಂಗಿಯಾಗಿ ಹೋರಾಟ ಚಾಲ್ತಿಯಲ್ಲಿರಿಸಿದ್ದರು.
Advertisement
ವೃತ್ತಿ ಜೀವನದ 117ನೇ ಏಕದಿನ ಪಂದ್ಯದಲ್ಲಿ 9ನೇ ಶತಕ ಬಾರಿಸಿದ ಡು ಪ್ಲೆಸಿಸ್ ತವರಿನ ಅಭಿಮಾನಿಗಳನ್ನು ರಂಜಿಸಿದರು. ಅಂತಿಮ ಓವರ್ ವರೆಗೂ ಕ್ರೀಸ್ ಆಕ್ರಮಿಸಿಕೊಂಡಿದ್ದ ಹರಿಣಗಳ ನಾಯಕ, 112 ಎಸೆತಗಳೆದುರು 11 ಬೌಂಡರಿ ಹಾಗೂ 2 ಸಿಕ್ಸರ್‍ಗಳನ್ನು ಒಳಗೊಂಡ 120 ರನ್‍ಗಳಿಸಿ ಆಫ್ರಿಕಾದ ಮಾನ ಕಾಪಾಡಿದರು. ಶತಕ ಪೂರ್ತಿಗೊಳಿಸಲು ಡು ಪ್ಲೆಸಿಸ್ ಎದುರಿಸಿದ್ದು 101 ಎಸೆತ. ಕೊನೆಯಲ್ಲಿ ಅಬ್ಬರಿಸಿದ ಆಲ್‍ರೌಡರ್ ಕ್ರಿಸ್ ಮಾರಿಸ್ 37 ಹಾಗೂ ಬೌಲರ್ ಫೆಲುಕ್ವಾಯೊ 27 ರನ್‍ಗಳಿಸಿದರು. 6ನೇ ವಿಕೆಟ್ ಜತೆಯಾಟದಲ್ಲಿ 74 ರನ್ ಗಳಿಸಿದ್ದರಿಂದ ಆಫ್ರಿಕಾದ ಮೊತ್ತ 250 ದಾಟಿತು. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಡರ್ಬನ್‍ನಲ್ಲಿ ಸೋಲಿನ ಸರಪಳಿ ಕಳಚಿತು. ಈ ಹಿಂದೆ ಇದೇ ಮೈದಾನದಲ್ಲಿ ಆಡಿದ್ದ 7 ಪಂದ್ಯಗಳಲ್ಲಿ 6 ರಲ್ಲೂ ಭಾರತ ಸೋಲನುಭವಿಸಿತ್ತು.
ಉಳಿದ ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿತ್ತು. ಮತ್ತೊಂದೆಡೆ ತನ್ನ ನೆಲದಲ್ಲಿ ಸೋಲರಿಯದ ಸರದಾರನಂತೆ ಮೆರೆಯುತ್ತಿದ್ದ ಆಫ್ರಿಕದ ಗೆಲುವಿನ ಯಾತ್ರೆಗೂ ಕೊಹ್ಲಿ ಬಾಯ್ಸ್ ಬ್ರೇಕ್ ಹಾಕಿದೆ. ಸತತ 17 ಏಕದಿನ ಪಂದ್ಯಗಳಲ್ಲಿ ಗೆದ್ದು ಬೀಗುತ್ತಿದ್ದ ಹರಿಣಗಳಿಗೆ ಈಗ ಸೋಲಿನ ರುಚಿ ತೋರಿಸಿರುವ ಟೀಮ್ ಇಂಡಿಯಾ ಟೆಸ್ಟ್ ಸರಣಿಯ ಸೋಲಿಗೆ ಮೊದಲನೇ ಏಕದಿನ ಪಂದ್ಯದಲ್ಲೇ ಸೇಡು ತೀರಿಸಿಕೊಂಡಿದೆ.
6 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯ ಸೆಂಚೂರಿಯನ್‍ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‍ನಲ್ಲಿ ಭಾನುವಾರ ನಡೆಯಲಿದೆ.