– 10 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಆಡುತ್ತಿದೆ ಪಾಕ್
– ಈ ಹಿಂದೆ ಬಿಸಿಸಿಐ ವಿರುದ್ಧ ದೂರು ನೀಡಿ ದಂಡ ತೆತ್ತಿದ್ದ ಪಿಸಿಬಿ
ಇಸ್ಲಾಮಾಬಾದ್: ಪಾಕಿಸ್ತಾನವು ಭಾರತದೊಂದಿಗೆ ಕ್ರಿಕೆಟ್ ಆಡಲು ಸಿದ್ಧವಾಗಿದೆ. ಆದರೆ ಅದಕ್ಕಾಗಿ ಮನವಿ ಮಾಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೆ ತನ್ನ ಮೊಂಡುತನವನ್ನು ಪ್ರದರ್ಶಿಸಿದೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಪಿಸಿಬಿ ಅಧ್ಯಕ್ಷ ಈಶನ್ ಮಣಿ, ಒಂದು ದೇಶವು ನಮ್ಮ ತಂಡದೊಂದಿಗೆ ಕ್ರಿಕೆಟ್ ಸರಣಿಯನ್ನು ಆಡಬೇಕಾದರೆ, ಅದು ಈಗ ಪಾಕಿಸ್ತಾನಕ್ಕೆ ಬರಬೇಕಾಗುತ್ತದೆ. 10 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಟೆಸ್ಟ್ ಕ್ರಿಕೆಟ್ ಮತ್ತೆ ನಡೆಯುತ್ತಿದೆ. ಎರಡು ಟೆಸ್ಟ್ ಸರಣಿಗಳಿಗಾಗಿ ಶ್ರೀಲಂಕಾ ತಂಡ ಇಲ್ಲಿಗೆ ಆಗಮಿಸಿದೆ. ಮೊದಲ ಟೆಸ್ಟ್ ಡಿಸೆಂಬರ್ 11ರಂದು (ಇಂದು) ರಾವಲ್ಪಿಂಡಿಯಲ್ಲಿ ಮತ್ತು ಎರಡನೇ ಟೆಸ್ಟ್ ಡಿಸೆಂಬರ್ 19ರಿಂದ ಕರಾಚಿಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಭಾರತ ಮತ್ತು ಪಾಕಿಸ್ತಾನದ ಜನರು ಉಭಯ ತಂಡಗಳ ಮಧ್ಯೆ ಕ್ರಿಕೆಟ್ ನೋಡಲು ಬಯಸುತ್ತಾರೆ. ದುರದೃಷ್ಟವಶಾತ್ ಭಾರತದ ಕ್ರಿಕೆಟ್ ಮಂಡಳಿಯಲ್ಲಿ ರಾಜಕೀಯ ಬೆರೆತು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ನೀತಿ ಏನೇ ಇರಲಿ, ಅದನ್ನು ಕ್ರಿಕೆಟ್‍ಗೂ ಅನ್ವಯಿಸುತ್ತಾರೆ. ನಮ್ಮೊಂದಿಗೆ ಆಡುವಂತೆ ಭಾರತಕ್ಕೆ ಬೇಡಿಕೊಳ್ಳುವುದಿಲ್ಲ. ಒಂದು ವೇಳೆ ಭಾರತವು ತಮ್ಮೊಂದಿಗೆ ಆಡಲು ಬಯಸಿದರೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
Advertisement
ಭಾರತದಲ್ಲಿ ಉಭಯ ದೇಶಗಳ ನಡುವಿನ ಕೊನೆಯ ಸರಣಿಯು 2012ರಲ್ಲಿ ಆಡೆದಿತ್ತು. ಇದಾದ ಬಳಿಕ ಎರಡೂ ದೇಶಗಳು ಐಸಿಸಿ ಟೂರ್ನಿಯಲ್ಲಿ ಮಾತ್ರ ಪರಸ್ಪರ ಎದುರಾಗಿವೆ.
Advertisement
ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಮಿಸ್ಬಾ ಉಲ್ ಹಕ್ ಮುಖ್ಯ ಕೋಚ್ ಆದಾಗಿನಿಂದ ಪಾಕಿಸ್ತಾನವು ಎರಡು ಸರಣಿಗಳನ್ನು ಆಡಿದ್ದು ಎರಡರಲ್ಲೂ ತೀವ್ರ ಸೋಲನ್ನು ಅನುಭವಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮಣಿ, ಮಿಸ್ಬಾ ಉಲ್ ಹಕ್ ಅವರಿಗೆ ಸ್ವಲ್ಪ ಸಮಯ ನೀಡಬೇಕಾಗಿದೆ. ತಂಡವು ಸರಣಿಯ ಬಳಿಕ ತವರಿಗೆ ಮರಳಿದೆ. ಒಂದು ವರ್ಷ ಪೂರೈಸಿದ ನಂತರ ಅವರ ಕೆಲಸವನ್ನು ಪರಿಶೀಲಿಸುತ್ತೇವೆ. ಒಂದು ವೇಳೆ ಅವರು ವಿಫಲವಾದರೆ ಮುಖ್ಯ ಕೋಚ್ ಸ್ಥಾನದಿಂದ ಕೈಬಿಡುತ್ತೇವೆ ಎಂದು ಹೇಳಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡವು ಈಗಾಲೇ ಇಲ್ಲಿಗೆ ಬಂದಿದೆ. ಬಾಂಗ್ಲಾದೇಶ ಕೂಡ ಬರುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಐರ್ಲೆಂಡ್‍ನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ನಮ್ಮ ಭದ್ರತಾ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ತಂಡಗಳು ಭವಿಷ್ಯದಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳುವ ಸಂಪೂರ್ಣ ನಿರೀಕ್ಷೆಯಿದೆ ಎಂದು ತಿಳಿಸಿದರು.
ದಂಡ ತೆತ್ತಿದ್ದ ಪಿಸಿಬಿ:
ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಯಲ್ಲಿ ಬಿಸಿಸಿಐ ವಿರುದ್ಧ ದೂರಿನ ಪ್ರಕರಣದಲ್ಲಿ ಸೋಲುಂಡಿದ್ದು, ಪರಿಣಾಮ 1.6 ಮಿಲಿಯನ್ ಡಾಲರ್ (ಸುಮಾರು 11 ಕೋಟಿ ರೂ.) ದಂಡವನ್ನು ಬಿಸಿಸಿಐಗೆ ಪಾವತಿಸಿತ್ತು.
ಈ ಕುರಿತು ಈ ವರ್ಷದ ಮಾರ್ಚ್ ನಲ್ಲಿ ಈಶನ್ ಮಣಿ ಪ್ರತಿಕ್ರಿಯಿಸಿ 2.2 ಮಿಲಿಯನ್ ಡಾಲರ್ ಹಣವನ್ನು ಪರಿಹಾರವಾಗಿ ಪಾವತಿ ಮಾಡಿದಿದ್ದೇವೆ ಎಂದು ತಿಳಿಸಿದ್ದರು.
ಪಾಕಿಸ್ತಾನದೊಂದಿಗೆ ದ್ವಿಪಕ್ಷಿಯ ಒಪ್ಪಂದ ಕ್ರಿಕೆಟ್ ಪಂದ್ಯಗಳನ್ನು ಭಾರತ ಆಯೋಜಿಸದ ಕಾರಣ ತನಗೆ ನಷ್ಟವಾಗಿದೆ ಎಂದು ಕಳೆದ ವರ್ಷ ಪಿಸಿಬಿ ದೂರು ದಾಖಲಿಸಿತ್ತು. ಸುಮಾರು 480 ಕೋಟಿ ರೂ. ಪರಿಹಾರವಾಗಿ ಬಿಸಿಸಿಐನಿಂದ ಕೊಡಿಸುವಂತೆ ಪಾಕಿಸ್ತಾನ ಐಸಿಸಿಗೆ ನೀಡಿದ ದೂರಿನಲ್ಲಿ ತಿಳಿಸಿತ್ತು.
2014 ರಲ್ಲಿ ಬಿಸಿಸಿಐ ಪಾಕ್ ನೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಲು ಒಪ್ಪಂದಕ್ಕೆ ಸಹಿ ಮಾಡಿತ್ತು. ಇದರಂತೆ ಭಾರತ 2014 ಹಾಗೂ 2015 ಅವಧಿಯಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ಕೈಗೊಂಡಿರಲಿಲ್ಲ. ಪಾಕಿಸ್ತಾನದ ಮನವಿಯನ್ನು ತಿರಸ್ಕರಿಸಿದ ಐಸಿಸಿ ಸಮಿತಿ, ಈ ಪ್ರಕರಣದ ವಿಚಾರಣೆ ನಡೆಸಿದ ಐಸಿಸಿ ಬಿಸಿಸಿಐಗೆ ಕಾನೂನು ವೆಚ್ಚವಾಗಿ ಸುಮಾರು 11 ಕೋಟಿಗಳನ್ನು ಪಾವತಿಸುವಂತೆ ಆದೇಶಿಸಿತ್ತು.
2009ರಲ್ಲಿ ಏನಾಗಿತ್ತು?
ಸುಮಾರು 12 ಮಂದಿಯ ಭಯೋತ್ಪಾದಕರ ತಂಡ ಶ್ರೀಲಂಕಾ ಕ್ರಿಕೆಟಿಗರು ಹಾಗೂ ಅಂಪೈರ್ ಗಳ ಮೇಲೆ ಲಹೋರಿನ ಗಢಾಪಿ ಕ್ರೀಡಾಂಗಣದ ಬಳಿ ಗುಂಡಿನ ದಾಳಿ ನಡೆಸಿತ್ತು. ಪರಿಣಾಮ ಘಟನೆಯಲ್ಲಿ 8 ಪೊಲೀಸರು ಸಾವನ್ನಪ್ಪಿದ್ದರೆ, 6 ಮಂದಿ ಗಾಯಗೊಂಡಿದ್ದರು. ಈ ವೇಳೆ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್‍ನ ಬೇಲಿಸ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉಗ್ರರು ಸಿಡಿಸಿದ್ದ ಗುಂಡು ಬಸ್ ಗ್ಲಾಸ್ ಸೀಳಿತ್ತು. ಪರಿಣಾಮ ಗಾಜಿನ ಚುರು ತಂಡದ ಸಹಾಯಕನಾಗಿದ್ದ ಫಾಬ್ರ್ರಾಸ್ ಎಂಬವರ ಭುಜಕ್ಕೆ ಹೊಕ್ಕಿತ್ತು. ಇಂದಿಗೂ ಘಟನೆಯನ್ನು ನೆನೆದರೆ ಫಾಬ್ರ್ರಾಸ್ ಬೆಚ್ಚಿ ಬೀಳುತ್ತಾರೆ.
2015ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮೊಂಡು ಧೈರ್ಯ ಮಾಡಿ ಲಾಹೋರಿನಲ್ಲಿ ಕ್ರಿಕೆಟ್ ಆಡಲು ಮುಂದಾಗಿತ್ತು, ಆದರೆ ಅಂದು ಕೂಡ ಪಂದ್ಯ ನಡೆಯುವ ವೇಳೆ ಸ್ಟೇಡಿಯಂ ಹೊರ ಭಾಗದಲ್ಲಿ ಉಗ್ರ ಮಾನವ ಬಾಂಬ್ ಸ್ಫೋಟಿಸಿ ಓರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಲಿ ಪಡೆದಿದ್ದ. ಈ ಘಟನೆ ಮತ್ತೆ ಪಾಕ್ ಕ್ರಿಕೆಟ್ ಆಡಲು ಆಸುರಕ್ಷಿತ ಎಂಬುವುದು ಖಚಿತವಾಯ್ತು. ಪರಿಣಾಮ ಐಸಿಸಿ ಕ್ರಿಕೆಟ್ ಟೂರ್ನಿಗಳನ್ನು ಏರ್ಪಡಿಸುವ ಅವಕಾಶವನ್ನು ಪಾಕಿಸ್ತಾದಿಂದ ಕಿತ್ತುಕೊಂಡಿತ್ತು.