ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ – ಸೋತರೆ ಬಹುತೇಕ ಮನೆಗೆ

Public TV
2 Min Read
India vs Pakistan

ದುಬೈ: ರೋಹಿತ್‌ ಶರ್ಮ (Rohit Sharma) ಸಾರಥ್ಯದ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿಯ (Champions Trophy) ʻಎʼ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ (ಇಂದು) ಬದ್ಧ ವೈರಿ ಪಾಕಿಸ್ತಾನ ತಂಡದ ಸವಾಲು ಎದುರಿಸಲಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್‌ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಗುರಿಯಲ್ಲಿದೆ. ಹಾಗೆಯೇ ಮೊಹಮದ್‌ ರಿಜ್ವಾನ್‌ ನೇತೃತ್ವದ ಪಾಕಿಸ್ತಾನ, ಟೂರ್ನಿಯಿಂದ ಹೊರಗುಳಿಯುವುದನ್ನು ತಪ್ಪಿಸಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿದೆ.

ಬಾಂಗ್ಲಾದೇಶ ಎದುರು ಆರು ವಿಕೆಟ್‌ಗಳ ಜಯ ಸಾಧಿಸಿರುವ ಟೀಮ್‌ ಇಂಡಿಯಾ ಉತ್ತಮ ಸ್ಥಿತಿಯಲ್ಲಿದ್ದರೆ, ನ್ಯೂಜಿಲೆಂಡ್‌ ವಿರುದ್ಧ 60 ರನ್‌ಗಳಿಂದ ಸೋತಿರುವ ಪಾಕಿಸ್ತಾನ, ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿ ಎದುರಿಸುತ್ತಿದೆ. ಹೀಗಾಗಿ ಪಂದ್ಯ ತೀವ್ರ ಹೈವೋಲ್ಟೇಜ್‌ ಪಡೆಯುವ ನಿರೀಕ್ಷೆಯಿದ್ದು, ಅಭಿಮಾನಿಗಳಿಗೆ ರಸದೌತಣ ಉಣಬಡಿಸುವ ಸಾಧ್ಯತೆ ಇದೆ. ಉಪಖಂಡದ ಎದುರಾಳಿಗಳಾದ ಭಾರತ-ಪಾಕ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕೊನೆಯದಾಗಿ 2017ರ ಫೈನಲ್‌ನಲ್ಲಿ ಎದುರಾಗಿದ್ದವು. ಆ ಪಂದ್ಯದಲ್ಲಿ ಪಾಕಿಸ್ತಾನ 180 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿ ಮೊದಲ ಸಲ ಚಾಂಪಿಯನ್‌ ಆಗಿತ್ತು. ಈಗ ರಿಜ್ವಾನ್‌ ಮತ್ತು ತಂಡ ಆ ಜಯದ ಸ್ಫೂರ್ತಿ ಪಡೆಯಲು ಹಾತೊರೆಯುತ್ತಿದೆ. ಆದರೆ ಎಲ್ಲಾ ವಿಭಾಗಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ.

IND vs PAK

ಸದಾ ತೀವ್ರತೆಯನ್ನುಂಟು ಮಾಡುವ ಉಭಯ ರಾಷ್ಟ್ರಗಳ ನಡುವಿನ ಪಂದ್ಯವು ದುಬೈನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳಲ್ಲಿ ಶಾಂತತೆ ನೆಲೆಯೂರಿದೆ. ಕರಾಚಿಯಲ್ಲಿ ಕಿವೀಸ್‌ ವಿರುದ್ಧ ಸೋತ ನಂತರ ದುಬೈಗೆ ಆಗಮಿಸಿರುವ ಪಾಕ್‌, ಸ್ಥಳೀಯ ವಾತಾವರಣಕ್ಕೆ ಈಗಾಗಲೇ ಹೊಂದಿಕೊಂಡಿದೆ.

ಬಾಂಗ್ಲಾದೇಶ ವಿರುದ್ಧ 41 ರನ್‌ ಗಳಿಸಿದ ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮ, ಫಾರ್ಮ್‌ ಕಂಡುಕೊಂಡಿರುವುದನ್ನು ಬಿಂಬಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 8ನೇ ಶತಕ ಗಳಿಸಿ ಭಾರತ ತಂಡದ ಗೆಲುವನ್ನು ಸುಲಭಗೊಳಿಸಿದ ಶುಭಮನ್‌ ಗಿಲ್‌, ಮತ್ತೊಂದು ಸೊಬಗಿನ ಆಟಕ್ಕೆ ಸಜ್ಜುಗೊಂಡಿದ್ದಾರೆ.

ಬಾಬರ್‌ ಅಜಂ ಮೇಲೆ ಭಾರೀ ಒತ್ತಡ
ಅತ್ತ ಪಾಕಿಸ್ತಾನ ಪ್ರಮುಖ ಬ್ಯಾಟರ್‌ಗಳ ಪೇಲವ ಪ್ರದರ್ಶನದಿಂದ ಚಿಂತಕ್ರಾಂತವಾಗಿದೆ. ತಂಡದ ಸ್ಟಾರ್‌ ಎನಿಸಿರುವ ಬಾಬರ್‌ ಅಜಂ, ಕಿವೀಸ್‌ ವಿರುದ್ಧ 90 ಎಸೆತಗಳಲ್ಲಿ 64 ರನ್‌ ಗಳಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಗಾಯದಿಂದಾಗಿ ಫಖರ್‌ ಜಮಾನ್‌ ಹೊರಗುಳಿದಿರುವುದು ಕೂಡ ಪಾಕ್‌ನ ಒತ್ತಡವನ್ನು ತೀವ್ರಗೊಳಿಸಿದೆ. ಇವರ ಬದಲಿಗೆ ಇಮಾಮ್‌ ಉಲ್‌ ಹಕ್‌ ತಂಡವನ್ನು ಸೇರ್ಪಡೆಗೊಂಡಿದ್ದು, ಅವರ ಸ್ಥಾನವನ್ನು ಎಷ್ಟರ ಮಟ್ಟಿಗೆ ತುಂಬಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

IND vs PAK 1

ನಿವೃತ್ತಿ ಅಂಚಿನಲ್ಲಿರುವ ರನ್‌ ಮಷಿನ್‌ ವಿರಾಟ್‌ ಕೊಹ್ಲಿ, ಇತ್ತೀಚಿಗೆ ಉತ್ತಮ ಆಟವಾಡುವಲ್ಲಿ ಎಡವಿದ್ದಾರೆ. ಆದರೆ ಪಾಕಿಸ್ತಾನ ವಿರುದ್ಧದ ತಮ್ಮ ಅಮೋಘ ಫಾರ್ಮ್ ಮರುಕಳಿಸುವ ಜಾಣ್ಮೆಯನ್ನು ಹೊಂದಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಲಯ ಕಂಡುಕೊಂಡಿರುವ ವೇಗಿ ಮೊಹಮ್ಮದ್‌ ಶಮಿಗೆ ಹರ್ಷಿತ್‌ ರಾಣಾ ಉತ್ತಮ ಸಾಥ್‌ ನೀಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ 5 ವಿಕೆಟ್‌ ಕಬಳಿಸಿದ ಶಮಿ, ಗಾಯಾಳು ಜಸ್‌ಪ್ರೀತ್‌ ಬುಮ್ರಾ ಅವರ ಅಲಭ್ಯತೆಯನ್ನು ಕಾಡದಂತೆ ನೋಡಿಕೊಂಡಿದ್ದರು. 2017ರ ಫೈನಲ್‌ನಲ್ಲಿ ಅರ್ಧ ಶತಕ ಗಳಿಸಿಯೂ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲಗೊಂಡ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ಈ ಬಾರಿ ನಿರಾಸೆಯನ್ನು ಸರಿದೂಗಿಸುವ ವಿಶ್ವಾಸದಲ್ಲಿದ್ದಾರೆ. ಸದ್ಯ ಬದ್ಧವೈರಿಗಳ ನಡುವಿನ ಕಾದಾಟಕ್ಕೆ ದುಬೈ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಕುತೂಹಲ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

Share This Article