ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ (Ind vs NZ) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟ ಮಳೆಗೆ ಬಲಿಯಾಗಿದೆ.
ಕಿವೀಸ್ ವಿರುದ್ಧ ಭಾರತ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು (Test Series), ಇಂದಿನಿಂದ (ಅ.16) ಅಕ್ಟೋಬರ್ 20ರ ವರೆಗೆ ಮೊದಲ ಪಂದ್ಯ ಆಯೋಜನೆಗೊಂಡಿದೆ. ಆದ್ರೆ ಬೆಂಗಳೂರಿನಲ್ಲಿ ಬಿಟ್ಟೂ ಬಿಡದೇ ಕಾಡುತ್ತಿರುವ ಮಳೆಯಿಂದಾಗಿ (Heavy Rain) ಮೊದಲ ದಿನದಾಟ ರದ್ದಾಗಿದೆ. ಮಧ್ಯಾಹ್ನದ ವೇಳೆಗೆ ಮಳೆ ಸ್ವಲ್ಪ ಬಿಡುವು ನೀಡಿದಾಗ ಓವರ್ ಕಡಿತಗೊಳಿಸಿ ಪಂದ್ಯ ಆಡಿಸಲು ನಿರ್ಧರಿಸಲಾಗಿತ್ತು. ಆ ನಂತರ ಮತ್ತೆ ಮಳೆ ನಿರಂತರವಾಗಿ ಸುರಿಯಲಾರಂಭಿಸಿದ ಕಾರಣ ಮೊದಲ ದಿನದ ಆಟವನ್ನು ಟಾಸ್ ಮಾಡದೆಯೇ ರದ್ದುಗೊಳಿಸಲಾಯಿತು.
15 ನಿಮಿಷ ಬೋನಸ್:
ಮಳೆಯಿಂದಾಗಿ ಮೊದಲ ದಿನದ ಆಟ ರದ್ದಾದ ಹಿನ್ನೆಲೆಯಲ್ಲಿ 2ನೇ ದಿನದ ಆಟವನ್ನು 15 ನಿಮಿಷಗಳ ಕಾಲ ಮುಂಚಿತವಾಗಿ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಅಲ್ಲದೇ ಮೊದಲ ಹಾಗೂ 2ನೇ ಸೆಷನ್‌ಗಳಿಗೆ ಉಭಯ ತಂಡಗಳಿಗೆ 15 ನಿಮಿಷ ಹೆಚ್ಚುವರಿ ನೀಡಲಾಗುವುದು. ಬೆಳಗ್ಗೆ 8:45ಕ್ಕೆ ಟಾಸ್ ಆಗಲಿದ್ದು, 9:15ಕ್ಕೆ ಪಂದ್ಯ ಆರಂಭಿಸಲಾಗುತ್ತದೆ. ಹೀಗಾಗಿ ದಿನದ ಮಿತಿ 90 ಓವರ್‌ಗೆ ಬದಲಾಗಿ 98 ಓವರ್ ಬೌಲಿಂಗ್ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನನಗೆ ಐಪಿಎಲ್‌ಗಿಂತಲೂ ಟೆಸ್ಟ್ ಕ್ರಿಕೆಟ್ ಮುಖ್ಯ: ಬಿಸಿಸಿಐ ಹೊಸ ನಿಯಮದ ಕುರಿತು ಕಮ್ಮಿನ್ಸ್ ರಿಯಾಕ್ಷನ್
ಭಾರತ-ಕಿವೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. 2ನೇ ಪಂದ್ಯವು ಅ.24 ರಿಂದ 28ರ ವರೆಗೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ, 3ನೇ ಪಂದ್ಯವು ನವೆಂಬರ್ 1 ರಿಂದ 5ರ ವರೆಗೆ ಮುಂಬೈನ ವಾಂಖೆಡೆ ಕ್ರಿಕೆಟ್ ಅಂಗಳದಲ್ಲಿ ನಡೆಯಲಿದೆ. ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 8 ಕ್ಯಾಚ್ ಬಿಟ್ಟ ಪಾಕ್ – ಚರ್ಚೆ ಹುಟ್ಟುಹಾಕಿದ ಕಳಪೆ ಫೀಲ್ಡಿಂಗ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಸೌಲಭ್ಯ:
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರೀ ಮಳೆ ಸುರಿದರೆ ಕೇವಲ 7 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಏಕೆಂದರೆ ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ಪಾಕ್‌ಗೆ ಹೀನಾಯ ಸೋಲು – ವಿಶ್ವಕಪ್ ಟೂರ್ನಿಯಿಂದಲೇ ಭಾರತ ಔಟ್