CricketLatestMain PostSports

ಕನ್ನಡಿಗ ಮಯಾಂಕ್ ಶತಕ – ಸುಸ್ಥಿತಿಯಲ್ಲಿ ಟೀಂ ಇಂಡಿಯಾ

ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ಅಜೇಯ ಶತಕದ ನೆರವಿನಿಂದ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿ ಸುಸ್ಥಿತಿಯಲ್ಲಿದೆ.

ಟೀಂ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಮಯಾಂಕ್ ಅಗರ್ವಾಲ್ ನ್ಯೂಜಿಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ ಆ ಬಳಿಕ ವೇಗ ಪಡೆದುಕೊಂಡು ಅಜೇಯ ಶತಕ 120 ರನ್ (246 ಎಸೆತ, 14 ಬೌಂಡರಿ, 4 ಸಿಕ್ಸ್) ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ ಭಾರತ ತಂಡ 70 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 221 ರನ್‌ ಗಳಿಸಿದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸ ರದ್ದಾಗುವ ಸಾಧ್ಯತೆ?

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೊಹ್ಲಿ ನಿರ್ಧಾರವನ್ನು ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ ಮತ್ತು ಶುಭಮನ್ ಗಿಲ್ ಸಮರ್ಥಿಸಿಕೊಂಡರು. ಈ ಜೋಡಿ ಮೊದಲ ವಿಕೆಟ್‍ಗೆ 80 ರನ್ (165 ಎಸೆತ)ಗಳ ಜೊತೆಯಾಟವಾಡಿತು. ಶುಭಮನ್ ಗಿಲ್ 44 ರನ್ (71 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಬಂದ ಚೇತೇಶ್ವರ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇದನ್ನೂ ಓದಿ: ಒಂದೇ ವರ್ಷದಲ್ಲಿ 4000% ಸಂಬಳ ಹೈಕ್ – ಇದು ಅಯ್ಯರ್ ಸಾಧನೆ

ನಂತರ ಒಂದಾದ ಶ್ರೇಯಸ್ ಅಯ್ಯರ್ ಮತ್ತು ಮಯಾಂಕ್ ಮತ್ತೆ ಭಾರತಕ್ಕೆ ಚೇತರಿಕೆ ನೀಡಿದರು. 4ನೇ ವಿಕೆಟ್‍ಗೆ ಈ ಜೋಡಿ 80 ರನ್ (106 ಎಸೆತ) ಜೊತೆಯಾಟವಾಡಿ ತಂಡಕ್ಕೆ ಶಕ್ತಿ ತುಂಬಿತು. ಅಯ್ಯರ್ 18 ರನ್ (41 ಎಸೆತ, 3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವೃದ್ಧಿಮಾನ್ ಸಹಾ, ಮಯಾಂಕ್ ಜೊತೆ ಸೇರಿ ಇನ್ನಿಂಗ್ಸ್ ಕಟ್ಟಲಾರಂಭಿಸಿದರು. ಈ ಜೋಡಿ 5ನೇ ವಿಕೆಟ್‍ಗೆ ಮುರಿಯದ 61 ರನ್ (134 ಎಸೆತ) ಜೊತೆಯಾಟವಾಡಿದೆ. ಸಹಾ ಅಜೇಯ 25 ರನ್ (53 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಮಯಾಂಕ್ ಜೊತೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ನ್ಯೂಜಿಲೆಂಡ್ ಪರ ಏಜಾಜ್ ಪಟೇಲ್ 4 ವಿಕೆಟ್ ಕಿತ್ತು ಮಿಂಚಿದ್ದಾರೆ.

Leave a Reply

Your email address will not be published.

Back to top button