– ಗೆಲುವಿನ ಸನಿಹದಲ್ಲಿ ಭಾರತ, ಡ್ರಾ ಮಾಡಿಕೊಳ್ಳುವತ್ತ ಇಂಗ್ಲೆಂಡ್ ಚಿತ್ತ
ಎಡ್ಜ್‌ಬಾಸ್ಟನ್: ಇಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ (Test Cricket) ಪಂದ್ಯ ರೋಚಕ ಘಟ್ಟಕ್ಕೆ ತಲುಪಿದೆ. 536 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿರುವ ಭಾರತ (Team India) ಉಳಿದ 7 ವಿಕೆಟ್‌ಗಳನ್ನು ಕಿತ್ತು ಗೆಲ್ಲುವ ತವಕದಲ್ಲಿದ್ದರೆ, ಇತ್ತ ವಿಕೆಟ್ ಉಳಿಸಿಕೊಂಡು ಪಂದ್ಯ ಡ್ರಾ ಮಾಡಿಕೊಳ್ಳುವತ್ತ ಇಂಗ್ಲೆಂಡ್ ಚಿತ್ತ ಹರಿಸಿದೆ.
244 ರನ್‌ಗಳ ಭರ್ಜರಿ ಮುನ್ನಡೆಯೊಂದಿಗೆ 4ನೇ ದಿನದ ಕ್ರೀಸ್ ಆರಂಭಿಸಿದ ಭಾರತ ಒಟ್ಟು 83 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 427 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಆತಿಥೇಯ ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಬಳಿಕ ತನ್ನ 2ನೇ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಸ್ಫೋಟಕ ಪ್ರದರ್ಶನ ನೀಡುವ ಉತ್ಸಾಹದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.
4ನೇ ದಿನದ ಅಂತ್ಯಕ್ಕೆ 16 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ 72 ರನ್‌ಗಳನ್ನಷ್ಟೇ ಗಳಿಸಿತು. ಸದ್ಯ 536 ರನ್‌ಗಳ ಹಿನ್ನಡೆಯಲ್ಲಿರುವ ಇಂಗ್ಲೆಂಡ್ ಭಾನುವಾರ ಕೊನೆಯ ದಿನದ ಆಟವಾಡಲಿದೆ. ಓಲ್ಲಿ ಪೋಪ್, ಹ್ಯಾರಿ ಬ್ರೂಕ್ ಕ್ರೀಸ್ ಆರಂಭಿಸಲಿದ್ದಾರೆ.
ತನ್ನ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ಶುಭಮನ್ ಗಿಲ್ 161 ರನ್ (162 ಎಸೆತ, 8 ಸಿಕ್ಸರ್, 13 ಬೌಂಡರಿ) ಗಳಿಸಿದ್ರೆ, ರಿಷಭ್ ಪಂತ್ 65 ರನ್, ರವೀಂದ್ರ ಜಡೇಜಾ ಅಜೇಯ 69 ರನ್, ಕೆ.ಎಲ್ ರಾಹುಲ್ 55 ರನ್, ಜೈಸ್ವಾಲ್ 28 ರನ್, ಕರುಣ್ ನಾಯರ್ 26 ರನ್, ನಿತೀಶ್ ರೆಡ್ಡಿ 1 ರನ್ ಗಳಿಸಿದ್ರೆ ವಾಷಿಂಗ್ಟನ್ ಸುಂದರ್ 12 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ಇನ್ನೂ 2ನೇ ಇನ್ನಿಂಗ್ಸ್ ಆಡುತ್ತಿರುವ ಇಂಗ್ಲೆಂಡ್ ಪರ ಬೆನ್ ಡಕೆಟ್ 25 ರನ್, ಜೋ ರೂಟ್ 6 ರನ್ ಗಳಿಸಿ ಔಟಾದ್ರೆ, ಝಾಕ್ ಕ್ರಾವ್ಲಿ ಶೂನ್ಯ ಸುತ್ತಿದರು. ಇನ್ನೂ ಪೋಪ್ 24 ರನ್, ಬ್ರೂಕ್ 15 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ.