LatestSports

ಸೋತ ಮೈದಾನದಲ್ಲೇ ಇಂದು ಗೆಲ್ಲುವ ಪ್ರಯತ್ನದಲ್ಲಿ ಕೊಹ್ಲಿ ಪಡೆ

ಲಂಡನ್: ಇಂದು ಬರ್ಮಿಗ್ಹ್ಯಾಮ್‍ನಲ್ಲಿ ನಡೆಯಲಿರುವ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಗೆಲುವು ಕೊಹ್ಲಿ ಪಡೆ ಗೆಲುವು ಸಾಧಿಸುವ ತವಕದಲ್ಲಿದೆ. ಭಾನುವಾರ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ 31ರನ್‍ಗಳ ಅಂತರದಲ್ಲಿ ಶರಣಾಗಿತ್ತು.

ಭಾನುವಾರ ನಡೆದ ಪಂದ್ಯದಲ್ಲಿ 338 ರನ್ ಬೆನ್ನಟ್ಟಿದ ಭಾರತ ನಿಗದಿತ 50 ಓವರ್ ಗಳಲ್ಲಿ ಕೇವಲ 306 ರನ್ ಮಾತ್ರ ಗಳಿಸಿತು. ಈ ಮೂಲಕ ಈ ವಿಶ್ವಕಪ್‍ನಲ್ಲಿ ಸೋಲನ್ನೇ ಕಾಣದ ಭಾರತ 31 ರನ್‍ಗಳ ಅಂತರದಲ್ಲಿ ಸೋತಿತು. ರೋಹಿತ್ ಶರ್ಮಾ ಅವರ ಶತಕ ಮತ್ತು ಮೊಹಮ್ಮದ್ ಶಮಿ ಅವರ ಹೋರಾಟ ವ್ಯರ್ಥವಾಗಿತ್ತು. ಆದರೆ ಇಂದು ಇದೇ ಮೈದಾನದಲ್ಲಿ ಬಾಂಗ್ಲಾ ದೇಶದ ವಿರುದ್ಧ ಆಡಲಿರುವ ಭಾರತ ಗೆದ್ದು ಬೀಗುವ ವಿಶ್ವಾಸದಲ್ಲಿದೆ.

ವಿಶ್ವಕಪ್‍ನಲ್ಲಿ ಉತ್ತಮ ಲಯದಲ್ಲಿರುವ ಭಾರತ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ವಿಶ್ವಕಪ್‍ನಲ್ಲಿ 3 ಶತಕ ಸಿಡಿಸಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಒಳ್ಳೆಯ ಲಯದಲ್ಲಿದ್ದು, ಇವರಿಗೆ ಕನ್ನಡಿಗ ಕೆ.ಎಲ್ ರಾಹುಲ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಇನ್ನೂ ನಾಯಕ ವಿರಾಟ್ ಕೊಹ್ಲಿ ಕೂಡ ಉತ್ತಮ ಲಯದಲ್ಲಿದ್ದು ಟೂರ್ನಿಯಲ್ಲಿ ಸತತ ಐದು ಅರ್ಧಶತಕ ಸಿಡಿಸಿ ಮಿಂಚುತ್ತಿದ್ದರೆ. ಇನ್ನೂ ಸ್ಪಿನ್ನರ್‍ ಗಳಾದ ಯುಜ್ವೇಂದ್ರ ಚಹಾಲ್ ಮತ್ತು ಕುಲ್‍ದೀಪ್ ಯಾದವ್ ಅವರು ಮೋಡಿ ಮಾಡುತ್ತಿದ್ದಾರೆ. ವೇಗಿಗಳಾದ ಜಸ್ಪ್ರಿತ್ ಬುಮ್ರಾ ಮತ್ತು ಮಹಮ್ಮದ್ ಶಮಿ ಅವರು ಬಿಗಿ ಬೌಲಿಂಗ್ ದಾಳಿ ಮಾಡುತ್ತಿದ್ದಾರೆ.

ಬಾಂಗ್ಲಾದೇಶ ಕೊಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಒಳ್ಳೆಯ ಪ್ರತಿಭಾನ್ವಿತ ಆಟಗಾರರಿದ್ದು ಯಾವುದೇ ಕ್ಷಣದಲ್ಲೂ ಸಿಡಿದು ಬೀಳುವ ಕ್ಷಮತೆ ತಂಡಕ್ಕೆ ಇದೆ. ಆಲ್‍ರೌಂಡರ್ ಶಕೀಬ್ ಅಲ್ ಹಸನ್ ಟೂರ್ನಿಯಲ್ಲಿ 476 ರನ್ ಗಳಿಸಿ 10 ವಿಕೆಟ್ ಪಡೆದು ಮಿಂಚುತ್ತಿದ್ದಾರೆ. ಮತ್ತು ಆರಂಭಿಕ ತಮೀಮ್ ಇಕ್ಬಾಲ್, ಮುಷ್ಫಿಕರ್ ರಹೀಮ್, ಮಹಮದುಲ್ಲಾ ಮತ್ತು ಲಿಟನ್ ದಾಸ್ ಅವರು ಉತ್ತಮ ಲಯದಲ್ಲಿರುವುದರಿಂದ ಬಾಂಗ್ಲಾದೇಶವನ್ನು ಕಡೆಗಣಿಸುವಂತಿಲ್ಲ. ಆದರೆ ತಂಡದಲ್ಲಿ ಉತ್ತಮ ಹೊಂದಾಣಿಕೆ ಆಟದ ಕೊರತೆ ಇದ್ದು, ಶಕೀಬ್ ಅಲ್ ಹಸನ್ ಬಿಟ್ಟರೆ ಬೇರೆ ಆಟಗಾರರು ರನ್ ಹೊಡೆಯಲು ಕಷ್ಟಪಡುತ್ತಿದ್ದಾರೆ.

ಭಾರತ ವಿಶ್ವಕಪ್‍ನಲ್ಲಿ 7 ಪಂದ್ಯಗಳನ್ನು ಆಡಿದ್ದು ಅದರಲ್ಲಿ 5 ರಲ್ಲಿ ಗೆದ್ದು ಒಂದರಲ್ಲಿ ಸೋತಿದೆ ಮತ್ತು ಒಂದು ಪಂದ್ಯ ಮಳೆಯ ಕಾರಣಕ್ಕೆ ರದ್ದಾಗಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ 7 ಪಂದ್ಯಗಳನ್ನು ಆಡಿರುವ ಬಾಂಗ್ಲಾದೇಶ 3 ರಲ್ಲಿ ಗೆದ್ದು 3 ರಲ್ಲಿ ಸೋತು ಒಂದು ಪಂದ್ಯ ಮಳೆಯಿಂದ ರದ್ದು ಆಗಿರುವ ಕಾರಣ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ದೊಡ್ಡ ದೊಡ್ಡ ತಂಡಗಳನ್ನು ಬಗ್ಗು ಬಡಿದು ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಕೊಹ್ಲಿ ಪಡೆ ಹೆಚ್ಚಿನ ಆತ್ಮವಿಶ್ವಾಸದಿಂದ ಆಡುವಂತಿಲ್ಲ ಏಕೆಂದರೆ ಇದೇ ಬಾಂಗ್ಲಾದೇಶ ತಂಡ 2007ರ ವಿಶ್ವಕಪ್‍ನಲ್ಲಿ ಭಾರತವನ್ನು ಸೋಲಿಸಿತ್ತು. ಅಂಕಿಅಂಶಗಳನ್ನು ನೋಡುವುದಾದರೆ ಉಭಯ ತಂಡಗಳು ವಿಶ್ವಕಪ್‍ನಲ್ಲಿ ಕೇವಲ ಮೂರು ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಭಾರತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಪಿಚ್ ರೀಪೋರ್ಟ್
ಇನ್ನೂ ಬರ್ಮಿಗ್ಹ್ಯಾಮ್‍ನ ಈ ಮೈದಾನ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಬ್ಯಾಟ್ಸ್‍ಮನ್‍ಗಳ ಪಾಲಿನ ಸ್ವರ್ಗ ಎಂದೇ ಹೆಸರುವಾಸಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಇಂಗ್ಲೆಂಡ್ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಒಟ್ಟು 643 ರನ್‍ಗಳು ದಾಖಲಾಗಿದ್ದವು. ಇಂದು ನಡೆಯುವ ಪಂದ್ಯದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದ್ದು, ಟಾಸ್ ಗೆದ್ದವರು ಮೊದಲು ಬ್ಯಾಟ್ ಮಾಡುವ ಸಾಧ್ಯತೆ ಇದೆ.

Leave a Reply

Your email address will not be published.

Back to top button