ಹೊಸ ದಾಖಲೆ ಬರೆದ ರನ್ ಮೆಷಿನ್ ವಿರಾಟ್ – ಭಾರತಕ್ಕೆ 68 ರನ್ ಮುನ್ನಡೆ

Public TV
2 Min Read
PINKD1 2502

– ನಾಯಕನಾಗಿ ಟೆಸ್ಟ್‍ನಲ್ಲಿ 5 ಸಾವಿರ ರನ್

ಕೋಲ್ಕತ್ತಾ: ಬಾಂಗ್ಲಾದೇಶ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಉತ್ತಮ ಸ್ಥಿತಿಯಲ್ಲಿದ್ದು, ರನ್ ಮೆಷಿನ್ ಖ್ಯಾತಿಯ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ಟಾಸ್ ಗೆದ್ದ ಬಾಂಗ್ಲಾ ಮೊದಲು ಬ್ಯಾಟಿಂಗ್ ಮಾಡಿ 30.3 ಓವರ್‌ಗಳಲ್ಲಿ 106 ರನ್‍ಗಳಿಗೆ ಆಲೌಟ್ ಆಗಿದ್ದರೆ ಭಾರತ 46 ಓವರ್‌ಗಳಲ್ಲಿ  3 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ 68 ರನ್ ಗಳ ಮುನ್ನಡೆ ಸಾಧಿಸಿದೆ. ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 23ನೇ ಹಾಗೂ ಚೇತೇಶ್ವರ ಪೂಜಾರ 24ನೇ ಅರ್ಧಶತಕವನ್ನು ಗಳಿಸಿದರು.

ಈ ಹಿಂದಿನ ಟೆಸ್ಟ್ ನಲ್ಲಿ ದ್ವಿಶಕತ ಸಿಡಿಸಿದ್ದ ಮಯಾಂಕ್ ಅಗರ್ವಾಲ್ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ರೋಹಿತ್ ಶರ್ಮಾ ಕೂಡ 21 ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿಸಿದರು. ವಿಕೆಟ್ ಕಾಯ್ದುಕೊಂಡ ಕೊಹ್ಲಿಗೆ ಸಾಥ್ ನೀಡಿದ್ದ ಚೇತೇಶ್ವರ ಪೂಜಾರ 105 ಎಸೆತಗಳಲ್ಲಿ 8 ಬೌಂಡರಿ ಸೇರಿ 55 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊಹ್ಲಿ 59 ರನ್(93 ಎಸೆತ, 8 ಬೌಂಡರಿ) ಅಜಿಂಕ್ಯಾ ರಹಾನೆ  23 ರನ್ ಗಳಿಸಿದ್ದು ಶನಿವಾರ ಮಧ್ಯಾಹ್ನ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

ಈ ಪಂದ್ಯದಲ್ಲಿ ನಾಯಕನಾಗಿ 5 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಕೊಹ್ಲಿ ಈ ಸಾಧನೆ ಮಾಡಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದಕ್ಕೂ ಮೊದಲು ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ ನಲ್ಲಿ 106 ರನ್‍ಗಳಿಗೆ ಆಲೌಟ್ ಆಗಿತ್ತು. ಇಶಾಂತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ 10ನೇ ಬಾರಿಗೆ 5 ವಿಕೆಟ್ ಪಡೆದರು.

ವಿರಾಟ್ ಕೊಹ್ಲಿ ತಮ್ಮ 32ನೇ ರನ್ ಪೂರ್ಣಗೊಳಿಸಿದ ಕೂಡಲೇ ಅವರು ಟೆಸ್ಟ್ ನಲ್ಲಿ ನಾಯಕನಾಗಿ 5,000 ರನ್‍ಗಳನ್ನು ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ ಆರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ಅಲನ್ ಬಾರ್ಡರ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ಕ್ಲೈವ್ ಲಾಯ್ಡ್, ವೆಸ್ಟ್ ಇಂಡೀಸ್‍ನ ಸ್ಟೀಫನ್ ಫ್ಲೆಮಿಂಗ್ ಇದ್ದಾರೆ. ಈ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ನಾಯಕನಾಗಿ 62.88 ಸರಾಸರಿಯಲ್ಲಿ 52 ಟೆಸ್ಟ್ ಪಂದ್ಯಗಳಲ್ಲಿ 4,968 ರನ್ ಗಳಿಸಿದ್ದರು. ಮಹೇಂದ್ರ ಸಿಂಗ್ ಧೋನಿ 60 ಪಂದ್ಯಗಳಲ್ಲಿ 3,454 ರನ್ ಗಳಿಸಿದ್ದು, ನಾಯಕನಾಗಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 109 ಟೆಸ್ಟ್ ಪಂದ್ಯಗಳಲ್ಲಿ 8,659 ರನ್ ಗಳಿಸಿ ನಾಯಕನಾಗಿ ಅತಿ ಹೆಚ್ಚು ರನ್‍ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಲನ್ ಬಾರ್ಡರ್ 93 ಪಂದ್ಯಗಳಲ್ಲಿ 6,623 ರನ್ ಗಳಿಸಿ ಎರಡನೇ ಹಾಗೂ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 77 ಪಂದ್ಯಗಳಲ್ಲಿ 6,542 ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *