– ಶ್ರೇಯಸ್ ಅಯ್ಯರ್ ಹ್ಯಾಟ್ರಿಕ್ ಸಿಕ್ಸ್
– 2-1 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ
ನಾಗ್ಪುರ: ದೀಪಕ್ ಚಹರ್ ಹ್ಯಾಟ್ರಿಕ್ ವಿಕೆಟ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಅರ್ಧಶತಕದ ಸಾಧನೆಯಿಂದ ಭಾರತ ಬಾಂಗ್ಲಾದೇಶ ವಿರುದ್ಧ 30 ರನ್ ಗಳಿಂದ ಮೂರನೇ ಟಿ-20 ಪಂದ್ಯವನ್ನು ಗೆದ್ದುಕೊಂಡಿದೆ.
ಗೆಲ್ಲಲು 175 ರನ್ ಗಳ ಕಠಿಣ ಸವಾಲನ್ನು ಪಡೆದ ಬಾಂಗ್ಲಾ 19.2 ಓವರ್ ಗಳಲ್ಲಿ 144 ರನ್ ಗಳಿಗೆ ಆಲೌಟ್ ಆಯ್ತು. ಈ ಮೂಲಕ ಪೇಟಿಎಂ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
Advertisement
Advertisement
ಈ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಭಾರತದ ಪರ ಟಿ-20ಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಬರೆದರು. ಈ ಪಂದ್ಯದಲ್ಲಿ ದೀಪಕ್ ಚಹರ್ ಎಸೆದದ್ದು 20 ಎಸೆತ (3.2 ಓವರ್), ನೀಡಿದ್ದು 7 ರನ್, ಯಾವುದೇ ಇತರೆ ರನ್ ಇಲ್ಲ. ಆದರೆ ಪಡೆದದ್ದು 6 ವಿಕೆಟ್. ಇದರಲ್ಲೂ 14 ಎಸೆತಗಳಿಗೆ ಯಾವುದೇ ರನ್ ಬಂದಿಲ್ಲ.
Advertisement
ಈ ಪಂದ್ಯದಲ್ಲಿ 6 ವಿಕೆಟ್ ಪಡೆಯುವ ಮೂಲಕ ಟಿ20ಯಲ್ಲಿ ಚಹರ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೊದಲು ಶ್ರೀಲಂಕಾದ ಅಜಂತ ಮೆಂಡೀಸ್ 8 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಈಗ 7 ರನ್ ನೀಡಿ 6 ವಿಕೆಟ್ ಪಡೆಯುವುದರೊಂದಿಗೆ ಈ ದಾಖಲೆಯನ್ನು ಚಹರ್ ಈಗ ಮುರಿದಿದ್ದಾರೆ.
Advertisement
ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ಬಾಂಗ್ಲಾ ಬ್ಯಾಟ್ಸ್‌ಮನ್ ಗಳು ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಹೀಗಾಗಿ ಟೀಂ ಇಂಡಿಯಾ ಬೌಲರ್ ಖಲೀಲ್ ಅಹ್ಮದ್ 8ರನ್ ನೀಡಿದರು. ನಂತರ ಬೌಲಿಂಗ್ ಮಾಡಿದ ವಾಷಿಂಗ್ಟನ್ ಸುಂದರ್ ಬಾಂಗ್ಲಾ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿಹಾಕಿ ಕೇವಲ 3 ರನ್ ನೀಡಿದರು. ಇನ್ನಿಂಗ್ಸ್ ನ ಮೂರನೇ ಓವರ್ ನ 4 ಹಾಗೂ 5ನೇ ಎಸೆತದಲ್ಲಿ ದೀಪಕ್ ಚಹರ್ ಪ್ರಮುಖ ಎರಡು ವಿಕೆಟ್ ಉರುಳಿಸಿದರು. ಬಾಂಗ್ಲಾ ಆರಂಭಿಕ ಬ್ಯಾಟ್ಸ್‌ಮನ್ ಲಿಟನ್ ದಾಸ್ (8 ರನ್) ಹಾಗೂ ಸೌಮ್ಯ ಸರ್ಕಾರ್ (0 ರನ್) ಪೆವಿಲಿಯನ್‍ಗೆ ತೆರಳಿದರು. ಹೀಗಾಗಿ ಇನ್ನಿಂಗ್ಸ್ ನ 4 ಓವರ್ ಅಂತ್ಯಕ್ಕೆ ಬಾಂಗ್ಲಾ ಕೇವಲ 18 ರನ್ ಗಳಿಸಲು ಶಕ್ತವಾಗಿತ್ತು.
ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ನೈಮ್‍ಗೆ ಸಾಥ್ ನೀಡಿದ ಮೊಹಮ್ಮದ್ ಮಿಥುನ್ ವಿಕೆಟ್ ಕಾಯ್ದುಕೊಂಡು, ಆಟ ಮುಂದುವರಿಸಿದರು. ಈ ಜೋಡಿಯು ತಂಡದ ಮೊತ್ತವನ್ನು ಇನ್ನಿಂಗ್ಸ್ ನ 8 ಓವರ್ ಅಂತ್ಯಕ್ಕೆ 53 ರನ್‍ಗಳಿಗೆ ಏರಿಸಿತು.
ದುಬಾರಿಯಾದ ಚಹಲ್, ದುಬೆ:
ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ಹಾಗೂ ಆಲ್ ರೌಂಡರ್ ಶಿವಂ ದುಬೇ ಬಾಂಗ್ಲಾ ದೇಶದ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿಹಾಕುವಲ್ಲಿ ವಿಫಲರಾದರು. ಎರಡು ಓವರ್ ಬೌಲಿಂಗ್ ಮಾಡಿದ ಚಹಲ್ 23 ರನ್ ನೀಡಿದರೆ, ದುಬೇ ಕೂಡ ಎರಡು ಓವರ್ ಬೌಲಿಂಗ್ ಮಾಡಿ 23 ರನ್ ಹೊಡೆಸಿಕೊಂಡರು. ಇತ್ತ ಇನ್ನಿಂಗ್ಸ್ ನ 12ನೇ ಓವರ್ ನ ಮೊದಲ ಎಸೆತದಲ್ಲಿ ರನ್ ಔಟ್ ಮಾಡಲು ಅವಕಾಶ ಸಿಕ್ಕರೂ ಚಹಲ್ ಮಿಸ್ ಮಾಡಿದರು. ಪರಿಣಾಮ ಮೊಹಮ್ಮದ್ ನೈಮ್ ಹಾಗೂ ಮಿಥುನ್ ಜೋಡಿಯು 12ನೇ ಓವರ್ ಅಂತ್ಯಕ್ಕೆ ತಂಡದ ಮೊತ್ತವನ್ನು 106 ರನ್‍ಗೆ ಪೇರಿಸಿತು.
98 ರನ್ ಜೊತೆಯಾಟ:
ಮೊಹಮ್ಮದ್ ನೈಮ್ ಹಾಗೂ ಮೊಹಮ್ಮದ್ ಮಿಥುನ್ ತಮ್ಮ ಸ್ಫೋಟಕ ಬ್ಯಾಟಿಂಗ್‍ನಿಂದ ಭಾರತದ ಬೌಲರ್ ಗಳನ್ನು ಕಾಡಿದರು. ಇನ್ನಿಂಗ್ಸ್ ನ 13ನೇ ಓವರ್ ನಲ್ಲಿ ದೀಪಕ್ ಚಹರ್, ಮೊಹಮ್ಮದ್ ಮಿಥುನ್ ವಿಕೆಟ್ ಉರುಳಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ನೈಮ್ ಹಾಗೂ ಮಿಥುನ್ ಅವರ 98 ರನ್‍ಗಳ ಜೊತೆಯಾಟವನ್ನು ಚಹರ್ ಮುರಿದರು. 29 ಎಸೆತಗಳಲ್ಲಿ ಮಿಥುನ್ ಸಿಕ್ಸ್, 2 ಬೌಂಡರಿ ಸೇರಿ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಬೆನ್ನಲ್ಲೇ ಶಿವಂ ದುಬೈ ಬೌಲಿಂಗ್‍ಗೆ ಮುಷ್ಫಿಕರ್ ರಹೀಂ (0 ರನ್‍ಗೆ) ವಿಕೆಟ್ ಒಪ್ಪಿಸಿದರು. ಅಷ್ಟೇ ಅಲ್ಲದೆ ಇನ್ನಿಂಗ್ಸ್ ನ 16ನೇ ಓವರ್ ನಲ್ಲಿ ಶಿವಂ ದುಬೈ ಸ್ಫೋಟಕ ಬ್ಯಾಟ್ಸ್‌ಮನ್ ಮೊಹಮ್ಮದ್ ನೈಮ್ ಹಾಗೂ ಆಫಿಫ್ ಹುಸೇನ್ ವಿಕೆಟ್ ಉರುಳಿಸಿದರು. ಮೊಹಮ್ಮದ್ ನೈಮ್ 48 ಎಸೆತಗಳಲ್ಲಿ 2 ಸಿಕ್ಸರ್, 10 ಬೌಂಡರಿ ಸೇರಿ 81 ರನ್ ಗಳಿಸಿ ಔಟಾದರೆ, ಆಫಿಫ್ ಹುಸೇನ್ ರನ್ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.
ಚಹಲ್ ಸರಣಿ ದಾಖಲೆ:
ಬಾಂಗ್ಲಾ ತಂಡದ ನಾಯಕ ಮಹ್ಮದುಲ್ಲಾ ವಿಕೆಟ್ ಉರುಳಿಸುವ ಮೂಲಕ ಚಹಲ್ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ಪರ ಆರ್.ಅಶ್ವಿನ್ ಟಿ-20 ಮಾದರಿಯಲ್ಲಿ 52 ವಿಕೆಟ್‍ಗಳೊಂದಿಗೆ ಮೊದಲ ಹಾಗೂ ಜಸ್ಪ್ರೀತ್ ಬುಮ್ರಾ 51 ವಿಕೆಟ್ ಗಳಿಂದ 2ನೇ ಸ್ಥಾನದಲ್ಲಿದ್ದರು. 53 ವಿಕೆಟ್ ಪಡೆದ ಚಹಲ್ ನಂ.1 ಸ್ಥಾನಕ್ಕೆ ಏರಿದ್ದಾರೆ.
ಇದಕ್ಕೂ ಮುನ್ನ ಟಾಸ್ ಗೆದ್ದ ಬಾಂಗ್ಲಾದೇಶವು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಇನ್ನಿಂಗ್ಸ್ ನ ಆರಂಭದಲ್ಲಿಯೇ ಬಾಂಗ್ಲಾ ಬೌಲರ್ ಶಫಿಯುಲ್ ಇಸ್ಲಾಮ್ ಟೀಂ ಇಂಡಿಯಾಗೆ ಆಘಾತ ನೀಡಿದರು. ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ 6 ಎಸೆಗಳನ್ನು ಎದುರಿಸಿ ಕೇವಲ 2 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದ್ದರು.
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‍ಗೆ ಸಾಥ್ ನೀಡಿದ ಕನ್ನಡಿಗ ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿ, ತಂಡದ ಮೊತ್ತವನ್ನು ಏರಿಸಿದರು. ಆದರೆ ಸಿಕ್ಸ್ ಸಿಡಿಸಲು ಯತ್ನಿಸಿದ್ದ ಶಿಖರ್ ಧವನ್ ಕ್ಯಾಚ್ ಒಪ್ಪಿದರು. 16 ಎಸೆತಗಳನ್ನು ಎದುರಿಸಿದ ಧವನ್ 4 ಬೌಂಡರಿ ಸೇರಿ 19 ರನ್ ಗಳಿಸಿದ್ದರು.
ಕೆ.ಎಲ್.ರಾಹುಲ್‍ಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಕೂಡ ಭರ್ಜರಿ ಬ್ಯಾಟಿಂಗ್ ಆರಂಭಿಸಿದರು. ಈ ಜೋಡಿಯು 59 ರನ್ ಕಲೆ ಹಾಕಿತು. ಅರ್ಧ ಶತಕ ಪೂರೈಸಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಬಾಲ್ ಅನ್ನು ಬೌಂಡರಿಗೆ ಅಟ್ಟಲು ಹೋಗಿ ವಿಕೆಟ್ ಒಪ್ಪಿಸಿದರು. 35 ಎಸೆತಗಳನ್ನು ಎದುರಿಸಿದ ರಾಹುಲ್ 7 ಬೌಂಡರಿ ಸಿಡಿಸಿ 52 ರನ್ ಗಳಿಸಿ ಔಟಾಗಿದ್ದರು.
ಹ್ಯಾಟ್ರಿಕ್ ಸಿಕ್ಸ್:
ಇನ್ನಿಂಗ್ಸ್ ನ 15ನೇ ಓವರ್ ಎಸೆದ ಅಫಿಫ್ ಹುಸೇನ್ ಎಸೆದ ಮೊದಲ ಮೂರು ಎಸೆತಗಳನ್ನು ಶ್ರೇಯಸ್ ಅಯ್ಯರ್ ಸಿಕ್ಸ್ ಸಿಡಿಸಿದರು. ಈ ಮೂಲಕ ಈ ಪಂದ್ಯದಲ್ಲಿ ಅಯ್ಯರ್ 5 ಸಿಕ್ಸರ್ ಸಿಡಿಸಿದ್ದಾರೆ. ಆದರೆ ಇನ್ನಿಂಗ್ಸ್ ನ 16ನೇ ಓವರ್ ನ ಮೊದಲ ಎಸೆತದಲ್ಲಿಯೇ ರಿಷಭ್ ಪಂತ್ ವಿಕೆಟ್ ಒಪ್ಪಿಸಿದರು. 9 ಎಸೆತಗಳನ್ನು ಎದುರಿಸಿದ ಪಂತ್ ಕೇವಲ 6 ರನ್ ಗಳಿಸಲು ಶಕ್ತರಾದರು. ಇದೇ ಓವರ್ ನ 5ನೇ ಎಸೆತದಲ್ಲಿ ಅಯ್ಯರ್ ವಿಕೆಟ್ ಒಪ್ಪಿಸಿದರು. 33 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸೇರಿ 62 ರನ್ ಸಿಡಿಸಿ ಔಟಾಗಿದ್ದರು. ಮನೀಷ್ ಪಾಂಡೆ ಔಟಾಗದೆ 13 ಎಸೆತಗಳಲ್ಲಿ 3 ಬೌಂಡರಿ ಸೇರಿ 22 ರನ್ ಹಾಗೂ ಶಿವಂ ದುಬೇ ಔಟಾಗದೆ 8 ಎಸೆತಗಳಲ್ಲಿ 9 ರನ್ ಗಳಿಸಿದರು. ಈ ಮೂಲಕ ಟೀಂ ಇಂಡಿಯಾ 174 ರನ್ ಪೇರಿಸಿತ್ತು.
ಈ ಪಂದ್ಯದಲ್ಲಿ 7 ವಿಕೆಟ್ ಪಡೆಯುದರೊಂದಿಗೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಗೌರವವಕ್ಕೆ ದೀಪಕ್ ಚಹರ್ ಪಾತ್ರರಾದರು.