– ಬಾಂಗ್ಲಾ ಪಡೆಗೆ 149 ರನ್ ಗುರಿ ನೀಡಿದ ಟೀಂ ಇಂಡಿಯಾ
ನವದೆಹಲಿ: ಅತಿಥಿ ಬಾಂಗ್ಲಾ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 148 ರನ್ ಗಳ ಗುರಿ ನೀಡಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಭಾನುವಾರ ನಡೆದ ಮೂರು ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಶಿಖರ್ ಧವನ್ 41 ರನ್, ಶ್ರೇಯಸ್ ಅಯ್ಯರ್ 22 ರನ್, ರಿಷಭ್ ಪಂತ್ 27 ರನ್ ಸಹಾಯದಿಂದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 148 ರನ್ ಪೇರಿಸಿತು.
Advertisement
ಟಾಸ್ ಗೆದ್ದ ಬಾಂಗ್ಲಾ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ಬಾಂಗ್ಲಾ ಬೌಲರ್ ಶಫಿಯುಲ್ ಇಸ್ಲಾಮ್ ಟೀಂ ಇಂಡಿಯಾಗೆ ಆಘಾತ ನೀಡಿದರು. 5 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ಎರಡು ಬೌಂಡರಿ ಸೇರಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಕನ್ನಡಿಗ ಕೆ.ಎಲ್.ರಾಹುಲ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. 17 ಎಸೆತಗಳನ್ನು ಎದುರಿಸಿದ ಕೆ.ಎಲ್.ರಾಹುಲ್ ಎರಡು ಬೌಂಡರಿ ಸಹಾಯದಿಂದ 15 ರನ್ ಗಳಿಸಲು ಶಕ್ತರಾದರು.
Advertisement
Advertisement
ಶ್ರೇಯಸ್ ಅಯ್ಯರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಏರಿಸಿದರು. ಆದರೆ ಸಿಕ್ಸ್ ಸಿಡಿಸಲು ಹೋಗಿ ವಿಕೆಟ್ ಒಪ್ಪಿಸಿದರು. 13 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 2 ಸಿಕ್ಸರ್, ಒಂದು ಬೌಂಡರಿ ಸಹಾಯದಿಂದ 22 ರನ್ ಸಿಡಿಸಿದರು. ಈ ಬೆನ್ನಲ್ಲೇ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ತೆರಳಿದರು. ಶಿಖರ್ ದವನ್ 42 ಎಸೆತಗಳಲ್ಲಿ ಒಂದು ಸಿಕ್ಸ್, 3 ಬೌಂಡರಿ ಸೇರಿ 41 ರನ್ ದಾಖಲಿಸಿದರು. ಟೀಂ ಇಂಡಿಯಾ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ 15 ರನ್ ಹಾಗೂ ವಾಷಿಂಗ್ಟನ್ ಸುಂದರ್ 14 ಸಿಡಿಸುವ ಮೂಲಕ ತಂಡದ ಮೊತ್ತವನ್ನು ಕೊನೆಯ ಹಂತದಲ್ಲಿ ಏರಿಸಿದರು. ಈ ಮೂಲಕ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 148 ರನ್ ದಾಖಲಿಸಿತು.
Advertisement
ರೋಹಿತ್ ವಿಶ್ವದಾಖಲೆ:
ಬಾಂಗ್ಲಾ ವಿರುದ್ಧದ ಮೂರು ಪಂದ್ಯಗಳ ಟಿ-20 ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಈ ಹಿಂದೆ 2,450 ರನ್ ಗಳಿರುವ ವಿರಾಟ್ ಕೊಹ್ಲಿ ನಂ.1 ಪಟ್ಟದಲ್ಲಿದ್ದರು. ಆದರೆ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ 9 ರನ್ ಗಳಿಸಿದ ಹಿಟ್‌ಮ್ಯಾನ್ ಒಟ್ಟು 2,452 ರನ್ ಗಳೊಂದಿಗೆ ನಂ.1 ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪರಿಣಾಮ ಕೊಹ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
ಎಡವಿದ ಶಿವಂ:
ಮುಂಬೈ ಮೂಲದ ಶಿವಂ ದುಬೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ ಭರ್ಜರಿ ಮಿಂಚಿದ್ದ ಆಲ್‌ರೌಂಡರ್ ಶಿವಂ ಬಾಂಗ್ಲಾ ವಿರುದ್ಧದ ಸರಣಿಯ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಪಂದ್ಯಕ್ಕೂ ಮುನ್ನ ಶಿವಂ ದುಬೇ ನೆಟ್ ಅಭ್ಯಾಸ ನಡೆಸುವ ವೇಳೆ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಶಿವಂ ದುಬೇ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಅಭಿಮಾನಿಗಳು ಜೂನಿಯರ್ ಯುವರಾಜ್ ಸಿಂಗ್ ಎಂದೇ ಕರೆಯಲಾರಂಭಿಸಿದ್ದರು. ಆದರೆ ಮೊದಲ ಪಂದ್ಯದಲ್ಲೇ ದುಬೈ ಕೇವಲ 1 ರನ್ ಗಳಿಸಿ, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.