ದುರ್ಬಲರಂತೆ ಬಂದರೂ ಕೋಚ್ ಉತ್ತಮ ತರಬೇತಿ ನೀಡಿದ್ರು- ಮುಷ್ಫಿಕರ್ ರಹೀಮ್

Public TV
2 Min Read
mushfiqur rahim Main

ನವದೆಹಲಿ: ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವು ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸಿ, ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಯಿತು. ದೆಹಲಿಯ ವಾಯುಮಾಲಿನ್ಯವು ಗಂಭೀರ ಮಟ್ಟದಲ್ಲಿರುವುದರಿಂದ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಬಾಂಗ್ಲಾ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಮುಷ್ಫಿಕರ್ ರಹೀಮ್, ಇದು ನನಗೆ ವಿಶೇಷ ವಿಷಯವಲ್ಲ. ಮಾಲಿನ್ಯಕ್ಕಿಂತ ಭಾರತೀಯ ಬೌಲರ್‌ಗಳನ್ನು ಎದುರಿಸುವ ಬಗ್ಗೆ ನನಗೆ ಹೆಚ್ಚು ಚಿಂತೆ ಇತ್ತು ಎಂದು ಹೇಳಿಕೊಂಡಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವಾಗ ಮಾತನಾಡಿದ ಮುಷ್ಫಿಕರ್ ರಹೀಮ್, ನಾವು ಪರಿಸ್ಥಿತಿಯ ಬಗ್ಗೆ ಚಿಂತಿಸದೆ ಪಂದ್ಯವನ್ನು ಆಡಿದ್ದೇವೆ. ಭಾರತಕ್ಕೆ ಭೇಟಿ ನೀಡಿದಾಗಿನಿಂದಲೂ ಇದೇ ರೀತಿಯ ಹವಾಮಾನವನ್ನು ಎದುರಿಸಿದ್ದೇವೆ. ಅದಕ್ಕಾಗಿಯೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಭಾರತದ ನೆಲದಲ್ಲಿಯೇ ಟೀಂ ಇಂಡಿಯಾವನ್ನು ಸೋಲಿಸಿದ್ದೇವೆ. ಇದಕ್ಕಿಂತ ಉತ್ತಮ ಸಾಧನೆ ಮತ್ತೊಂದಿಲ್ಲ. ಈ ಪಂದ್ಯದಲ್ಲಿ ನನಗೆ ಸೌಮ್ಯ ಸರ್ಕಾರ್ ಸಾಥ್ ಸಾಥ್ ನೀಡಿ ತಂಡದ ಗೆಲುವಿಗೆ ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದರು. ಇದನ್ನೂ ಓದಿ: ಕ್ಯಾಚ್ ಡ್ರಾಪ್, ಕೊನೆಯಲ್ಲಿ ಸತತ 4‌ ಬೌಂಡರಿ – ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾ

mushfiqur rahim A

ನಾವು ಇಲ್ಲಿಗೆ ಬಂದಿರುವುದು ದುರ್ಬಲರಂತೆ. ಕಳೆದ ಮೂರು ವಾರಗಳಲ್ಲಿ ತಂಡದ ಕೋಚ್ ನಮಗೆ ಉತ್ತಮ ತರಬೇತಿ ನೀಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶಕ್ಕೆ 149 ರನ್‌ಗಳ ಗುರಿ ನೀಡಿತ್ತು. ಇದನ್ನು ಬಾಂಗ್ಲಾದೇಶದ ತಂಡವು 19.3 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 154 ರನ್ ಹೊಡೆದು ಜಯಗಳಿಸಿತು. ಬಾಂಗ್ಲಾ ಪರ ಮುಷ್ಫಿಕರ್ ರಹೀಮ್ ಅತ್ಯಧಿಕ (60 ರನ್) ಮತ್ತು ಸೌಮ್ಯ ಸರ್ಕಾರ್ 39 ರನ್ ಗಳಿಸಿದ್ದರು. ಮೂರನೇ ವಿಕೆಟಿಗೆ ಇವರಿಬ್ಬರೂ 60 ರನ್ ಜೊತೆಯಾಟವಾಡಿ ಬಾಂಗ್ಲಾ ತಂಡವನ್ನು ಗೆಲುವಿನ ಸಮೀಪ ತಂದರು.

mushfiqur rahim B

ವಾಯುಮಾಲಿನ್ಯದ ವಿಪರೀತ ಪರಿಸ್ಥಿತಿಯ ಮಧ್ಯೆ ಅದ್ಭುತವಾಗಿ ಆಡಿದ ಮತ್ತು ಪ್ರದರ್ಶನ ನೀಡಿದ ಉಭಯ ತಂಡಗಳಿಗೆ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ತಿಳಿಸಿದ್ದಾರೆ.

ಸ್ಟೇಡಿಯಂ ಭರ್ತಿ:
ದೆಹಲಿಯಲ್ಲಿ ಪಂದ್ಯಕ್ಕೂ ಮುನ್ನ ಮಾಲಿನ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದರ ಹೊರತಾಗಿಯೂ ಅರುಣ್ ಜೇಟ್ಲಿ ಕ್ರೀಡಾಂಗಣವು ಭಾನುವಾರ ಸಂಪೂರ್ಣ ಭರ್ತಿಯಾಗಿತ್ತು. ಈ ಮಾಲಿನ್ಯವು ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಅಪಾಯಕಾರಿ ಎಂದು ಹೇಳಲಾಗಿತ್ತು. ಆದರೆ ಇದು ಕ್ರಿಕೆಟ್ ಅಭಿಮಾನಿಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಜೊತೆಗೆ ಪಂದ್ಯ ಪ್ರಾರಂಭವಾಗುವ ಮುನ್ನ ಸುಮಾರು 46 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣ ಸಂಪೂರ್ಣವಾಗಿ ತುಂಬಿತ್ತು.

Share This Article
Leave a Comment

Leave a Reply

Your email address will not be published. Required fields are marked *