Connect with us

Cricket

ಭಾರತಕ್ಕೆ 7 ವಿಕೆಟ್‍ಗಳ ಭರ್ಜರಿ ಜಯ: ಮತ್ತೆ ಸಿಕ್ತು ನಂಬರ್ 1 ಪಟ್ಟ

Published

on

ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧದ 5 ಏಕದಿನ ಸರಣಿಯ ಕೊನೆಯ ಪಂದ್ಯವನ್ನು 7 ವಿಕೆಟ್ ಗಳಿಂದ ಭಾರತ ಗೆದ್ದುಕೊಂಡಿದೆ. ಈ ಮೂಲಕ ಟೀ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಇದೇ ಮೊದಲ ಬಾರಿಗೆ ಸರಣಿಯನ್ನು ಜಯಗಳಿಸಿದೆ.

ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಭಾರತ 42.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿ ವಿಜಯದ ನಗೆ ಬೀರಿತು.

ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಮೊದಲ ವಿಕೆಟ್ ಗೆ 22.3 ಓವರ್ ಗಳಲ್ಲಿ 124 ರನ್ ಜೊತೆಯಾಟವಾಡಿದರು. ರಹಾನೆ 61 ರನ್(74 ಎಸೆತ, 7 ಬೌಂಡರಿ) ಗಳಿಸಿದ್ದಾಗ ಎಲ್‍ಬಿ ಬಲಿಯಾದರು. ನಂತರ ಬಂದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಜೊತೆಗೂಡಿ ಎರಡನೇ ವಿಕೆಟ್ ಗೆ 99 ರನ್ ಗಳ ಜೊತೆಯಾಟವಾಡಿದರು. ತಂಡದ ಮೊತ್ತ 223 ಆಗಿದ್ದಾಗ ಕೊಹ್ಲಿ 39 ರನ್(55 ಎಸೆತ, 2 ಬೌಂಡರಿ) ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾದರು.

94 ಎಸೆತದಲ್ಲಿ 14ನೇ ಶತಕ ಪೂರ್ಣಗೊಳಿಸಿದ ರೋಹಿತ್ ಶರ್ಮಾ 125 ರನ್(109 ಎಸೆತ, 11 ಬೌಂಡರಿ, 5 ಸಿಕ್ಸರ್) ಗಳಿಸಿದ್ದಾಗ ಔಟಾದರು. ಕೇದಾರ್ ಜಾದವ್ ಅಜೇಯ 5 ರನ್, ಮನೀಷ್ ಪಾಂಡೆ ಅಜೇಯ 11ರನ್ ಗಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರವಾಗಿ ಡೇವಿಡ್ ವಾರ್ನರ್ 53 ರನ್(62 ಎಸೆತ, 5 ಬೌಂಡರಿ) ಸ್ಟೊಯಿನ್ಸ್ 46 ರನ್(63 ಎಸೆತ, 4 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು.

ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರೆ, ಬೂಮ್ರಾ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಕೇದಾರ್ ಜಾದವ್ ತಲಾ ಒಂದೊಂದು ವಿಕೆಟ್ ಕಿತ್ತರು. ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಈ ಸರಣಿಗೂ ಮುನ್ನ ಒಟ್ಟು 7 ಬಾರಿ ಭಾರತ-ಆಸೀಸ್ 5 ಅಥವಾ 5ಕ್ಕೂ ಹೆಚ್ಚು ಪಂದ್ಯಗಳ ಅಟವಾಡಿದ್ದು, ಇದರಲ್ಲಿ 2 ಬಾರಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು 2 ಬಾರಿ 3-2 ಅಂತರದಿಂದ ಸೋಲಿಸಿತ್ತು. 1986ರಲ್ಲಿ ಮೊದಲ ಬಾರಿ ಹಾಗೂ 2013ರಲ್ಲಿ 2ನೇ ಬಾರಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.

ಮತ್ತೆ ನಂಬರ್ 1 ಪಟ್ಟ: ಇಂದಿನ ಪಂದ್ಯದಲ್ಲಿ ಭಾರತ ಗೆದ್ದ ಹಿನ್ನೆಲೆಯಲ್ಲಿ ಮತ್ತೆ ಐಸಿಸಿ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೆ ಏರಿದೆ. ಸೆಪ್ಟೆಂಬರ್ 24ರಂದು ಇಂದೋರ್ ನಲ್ಲಿ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ನಂಬರ್ 1 ಪಟ್ಟಕ್ಕೇರಿತ್ತು. ಆದರೆ 4ನೇ ಪಂದ್ಯವನ್ನು ಸೋತ ಹಿನ್ನೆಲೆಯಲ್ಲಿ ನಂ.2ಕ್ಕೆ ಇಳಿದಿತ್ತು. ಈ ಪಂದ್ಯಕ್ಕೂ ಮುನ್ನಾ ದಕ್ಷಿಣ ಆಫ್ರಿಕಾ 119 ಅಂಕಗಳ ಜೊತೆ ನಂ.1 ಸ್ಥಾನದಲ್ಲಿತ್ತು. ಸಮಾನವಾದ 119 ಅಂಕಗಳೊಂದಿಗೆ ಟೀಂ ಇಂಡಿಯಾ 2ನೇ ಸ್ಥಾನದಲ್ಲಿತ್ತು. ಆದರೆ ಇಂದು ಪಂದ್ಯ ಗೆದ್ದ ಹಿನ್ನೆಲೆಯಲ್ಲಿ ಭಾರತದ ಅಂಕ 120ಕ್ಕೆ ಏರಿಕೆಯಾಗಿದ್ದು, ಈ ಮೂಲಕ ಮತ್ತೆ ನಂಬರ್ 1 ಪಟ್ಟಕ್ಕೆ ಏರಿದೆ.

 

Click to comment

Leave a Reply

Your email address will not be published. Required fields are marked *

www.publictv.in