CricketLatestSports

ಪರ್ತ್ ಟೆಸ್ಟ್: 287 ರನ್ ಗುರಿ ಪಡೆದ ಟೀಂ ಇಂಡಿಯಾಗೆ ಆರಂಭಿಕ ಆಘಾತ

ಪರ್ತ್: ಆಸ್ಟೇಲಿಯಾ ವಿರುದ್ಧ 2ನೇ  ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲಲು 287 ರನ್ ಗಳ ಗುರಿ ಪಡೆದಿದ್ದು, ಕೆಎಲ್ ರಾಹುಲ್, ಪೂಜಾರ ವಿಕೆಟ್ ಕಳೆದು ಕೊಳ್ಳುವ ಮೂಲಕ ಆರಂಭಿಕ ಆಘಾತ ಎದುರಿಸಿದೆ.

ಪಂದ್ಯದ 4ನೇ ದಿನದಾಟವನ್ನ 4 ವಿಕೆಟ್ ಕಳೆದುಕೊಂಡು 134 ರನ್ ಗಳಿಂದ ಆರಂಭಿಸಿದ ಆಸ್ಟ್ರೇಲಿಯಾ ಇಂದು 109 ರನ್ ಗಳನ್ನು ಸೇರಿಸಿ 93.2 ಓವರ್ ಗಳಲ್ಲಿ 243 ರನ್ ಗಳಿಗೆ ಆಲೌಟ್ ಆಯ್ತು.

ಆರಂಭದಲ್ಲೇ ಟೀಂ ಇಂಡಿಯಾ ಬೌಲರ್ ಗಳು ವಿಕೆಟ್ ಪಡೆಯಲು ವಿಫಲರಾದರೂ ಬಳಿಕ ಮಿಂಚಿನ ದಾಳಿ ನಡೆಸಿದ ಮೊಹಮ್ಮದ್ ಶಮಿ 3 ವಿಕೆಟ್ ಪಡೆಯುವ ಮೂಲಕ ಆಸೀಸ್ ದಿಢೀರ್ ಕುಸಿತಕ್ಕೆ ಕಾರಣರಾದರು. ಈ ಮೂಲಕ ಪಂದ್ಯ ಈಗ ರೋಚಕ ಹಂತ ತಲುಪಿದೆ.

ಆಸೀಸ್ ಪರ ಕೊನೆಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ಸ್ಟಾರ್ಕ್, ಹಜಲ್‍ವುಡ್ ಜೋಡಿ 36 ರನ್ ಗಳ ಉತ್ತಮ ಜೊತೆಯಾಟ ನೀಡಿತು. ಈ ಮೂಲಕ ಎದುರಾಳಿ ತಂಡಕ್ಕೆ ಸವಾಲಿನ ಮೊತ್ತದ ಗುರಿ ನೀಡಲು ಕಾರಣರಾದರು. ಸ್ಟಾರ್ಕ್ 14 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ಹಜಲ್‍ವುಡ್ 17 ರನ್ ಗಳಿಸಿ ಔಟಾಗದೆ ಉಳಿದರು. ಭಾರತದ ಪರ ಶಮಿ 6 ವಿಕೆಟ್, ಬುಮ್ರಾ 3, ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

ವಿರಾಮದ ಬಳಿಕ ಬ್ಯಾಟಿಂಗ್‍ಗೆ ಇಳಿದ ಟೀಂ ಇಂಡಿಯಾಗೆ ಹಜಲ್‍ವುಡ್, ಸ್ಟಾರ್ಕ್ ಜೋಡಿ ಆರಂಭದಲ್ಲೇ ಆಘಾತ ನೀಡಿತು. ಕೆಎಲ್ ರಾಹುಲ್ ಶೂನ್ಯ ಸುತ್ತಿದರೆ ಮೊದಲ ಪಂದ್ಯದ ಹೀರೋ ಚೇತೇಶ್ವರ ಪೂಜಾರ 4 ರನ್ ಗಳಿಸಿ ಔಟಾದರು. 13 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ ನಾಯಕ ಕೊಹ್ಲಿ ಕ್ರೀಸ್ ಗೆ ಆಗಮಿಸಿದ್ದಾರೆ. ಇತ್ತೀಚಿನ ವರದಿ ಬಂದಾಗ ಭಾರತ 37 ರನ್ ಗಳಿಸಿದ್ದು, ಕೊಹ್ಲಿ ಮತ್ತು ಮುರಳಿ ವಿಜಯ್ ಕ್ರೀಸಿನಲ್ಲಿದ್ದಾರೆ. 8 ವಿಕೆಟ್ ಗಳ ಸಹಾಯದಿಂದ ಭಾರತ 246 ರನ್ ಗಳಿಸಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button