ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಭಾರತದ ರೋಷವೇಶ – ಭರ್ಜರಿ ಗೆಲುವಿನೊಂದಿಗೆ ಟೂರ್ನಿಗೆ ಗುಡ್ ಬೈ

Public TV
3 Min Read
KOHLI AND BHUVANESHWAR KUMAR

ದುಬೈ: ಏಷ್ಯಾಕಪ್‍ನ (Asia Cup 2022) ಸೂಪರ್ ಫೋರ್ ಹಂತದ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ (Virat Kohli)  ಭರ್ಜರಿ ಶತಕ ಮತ್ತು ಭುವನೇಶ್ವರ್ ಕುಮಾರ್ ಮಾರಕ ದಾಳಿಯ ಪರಿಣಾಮವಾಗಿ ಅಘ್ಘಾನಿಸ್ತಾನ (Afghanistan) ವಿರುದ್ಧ ಭಾರತ (India) 101 ರನ್‍ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಗೆ ಗುಡ್ ಬೈ ಹೇಳಿದೆ.

India vs Afghanistan 1
ಭಾರತ ನೀಡಿದ 213 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲಾಗದೆ ಬೆದರಿ ಬೆಂಡಾದ ಅಘ್ಘಾನಿಸ್ತಾನ ಕೇವಲ 111 ರನ್ ಸಿಡಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಇತ್ತ 101 ರನ್‍ಗಳ ಈ ಭರ್ಜರಿ ಗೆಲುವಿನೊಂದಿಗೆ ಭಾರತ ಟೂರ್ನಿಗೆ ಅಂತ್ಯ ಹಾಡಿದೆ. ಇದನ್ನೂ ಓದಿ: 2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

India vs Afghanistan

ಬುಸುಗುಟ್ಟಿದ ಭುವಿ:
ಕಳೆದೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾದ ವಿಲನ್ ಆಗಿ ಬಿಂಬಿತರಾಗಿದ್ದ ಭುವನೇಶ್ವರ್ ಕುಮಾರ್ ಇಂದಿನ ಪಂದ್ಯದಲ್ಲಿ ಮಾರಕ ಬೌಲಿಂಗ್‍ನಿಂದ ಅಘ್ಘಾನಿಸ್ತಾನ ತಂಡಕ್ಕೆ ನೀರು ಕುಡಿಸಿದರು. ಆರಂಭದ ಓವರ್‌ನಿಂದಲೇ ಅಘ್ಘಾನಿಸ್ತಾನಕ್ಕೆ ಕಾಟ ಕೊಟ್ಟ ಭುವಿ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಬೇಟೆಯಾಡಿದರು. ಆರಂಭಿಕರಿಬ್ಬರು ಶೂನ್ಯ ಸುತ್ತಿದರೆ, ಆ ಬಳಿಕ ಬಂದ 3 ಜನ ಒಂದಂಕಿ ಮೊತ್ತಕ್ಕೆ ಸುಸ್ತಾದರು. ಇತ್ತ ಭುವಿ 4 ಓವರ್ ಎಸೆದು 4 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರು.

VIRAT KOHLI 3 1

ಅಘ್ಘಾನಿಸ್ತಾನ ಪರ ರಶೀದ್ ಖಾನ್ 15 ರನ್ (19 ಎಸೆತ, 2 ಬೌಂಡರಿ) ಬಾರಿಸಿ ವಿಕೆಟ್ ಕಳೆದುಕೊಂಡರು. ಇತ್ತ ಇಬ್ರಾಹಿಂ ಜದ್ರಾನ್ 64 ರನ್ ( 59 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ನಿಗದಿತ ಓವರ್‌ಗಳಲ್ಲಿ ಅಘ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 111 ರನ್ ಸಿಡಿಸಿತು. ಇದನ್ನೂ ಓದಿ: ಬೌಲರ್‌ಗೆ ಬ್ಯಾಟ್‍ನಲ್ಲಿ ಹೊಡೆಯಲು ಮುಂದಾದ ಆಸಿಫ್ ಅಲಿ – ಜೋರಾದ #BanAsifAli ಕೂಗು

VIRAT KOHLI AND PANTH

ಭಾರತದ ಪರ ಭುವನೇಶ್ವರ್ ಕುಮಾರ್ 5 ವಿಕೆಟ್ ಕಿತ್ತು ಮಿಂಚಿದರೆ, ಅರ್ಶ್‍ದೀಪ್ ಸಿಂಗ್, ಆರ್. ಅಶ್ವಿನ್ ಮತ್ತು ದೀಪಕ್ ಹೂಡಾ ತಲಾ 1 ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾದರು.

ಈ ಮೊದಲು ಟಾಸ್ ಗೆದ್ದ ಅಘ್ಘಾನಿಸ್ತಾನ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಇದನ್ನು ಸರಿಯಾಗಿ ಬಳಸಿಕೊಂಡ ರಾಹುಲ್ ಪಡೆ ಆರಂಭದಲ್ಲೇ ಅಘ್ಘಾನಿಸ್ತಾನ ಬೌಲರ್‌ಗಳ ಬೆವರಿಳಿಸಿತು. ಆರಂಭಿಕರಾಗಿ ಬಂದ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಮನ ಬಂದಂತೆ ಬ್ಯಾಟ್‍ಬೀಸಿದರು. ಇದನ್ನೂ ಓದಿ: ಏಷ್ಯಾಕಪ್ ಸೋಲು, ರೊಚ್ಚಿಗೆದ್ದ ಅಭಿಮಾನಿಗಳು – #BoycottIPL ಟ್ರೆಂಡ್

VIRAT KOHLI 1 2

ನಾ ಮುಂದು ತಾ ಮುಂದು ಎಂಬಂತೆ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದ ಇಬ್ಬರೂ ಕೂಡ ನೋಡ ನೋಡುತ್ತಿದ್ದಂತೆ ಅರ್ಧಶತಕದ ಗಡಿ ದಾಟಿದರು. ಒಂದು ಕಡೆ ಇನ್ನಷ್ಟು ಬಿರುಸಿನ ಬ್ಯಾಟಿಂಗ್‍ಗೆ ಮುಂದಾದ ರಾಹುಲ್ 62 ರನ್ (41 ಎಸೆತ, 6 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಈ ಮೊದಲು ಕೊಹ್ಲಿ ಜೊತೆ ಮೊದಲ ವಿಕೆಟ್‍ಗೆ 199 ರನ್ (76 ಎಸೆತ) ಜೊತೆಯಾಟವಾಡಿದರು. ಆ ಬಳಿಕ ಬಂದ ಸೂರ್ಯಕುಮಾರ್ ಒಂದು ಸಿಕ್ಸ್‌ಗೆ ಸುಸ್ತಾಗಿ ವಿಕೆಟ್ ಕಳೆದುಕೊಂಡರು.

VIRAT KOHLI 6

ಕೊಹ್ಲಿ ಚೊಚ್ಚಲ ಟಿ20 ಶತಕ:
ಒಂದು ಕಡೆ ಪಟಪಟನೇ ಎರಡು ವಿಕೆಟ್ ಬಿದ್ದರೆ, ಇತ್ತ ಕೊಹ್ಲಿ ಪಟಾಕಿಯಂತೆ ಸಿಡಿಯಲಾರಂಭಿಸಿದರು. ಸಿಕ್ಕಸಿಕ್ಕ ಎಸೆತಗಳಿಗೆ ರೊಚ್ಚಿಗೆದ್ದು ಹೊಡೆಯಲಾರಂಭಿಸಿದ ಕೊಹ್ಲಿ ನೋಡನೋಡುತ್ತಿದ್ದಂತೆ 2 ವರ್ಷ 9 ತಿಂಗಳ ಶತಕದ ಬರ ನೀಗಿಸಿಕೊಂಡರು. ಭರ್ಜರಿ ಶತಕದ ಬಳಿಕವೂ ಆಡಿ ಭರ್ತಿ 20 ಓವರ್‌ಗಳ ಬಳಿಕ ಅಜೇಯ 122 ರನ್ (61 ಎಸೆತ, 12 ಬೌಂಡರಿ, 6 ಸಿಕ್ಸ್) ಚಚ್ಚಿ ಬಿಸಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಪಂತ್ 20 ರನ್ (16 ಎಸೆತ, 3 ಬೌಂಡರಿ) ಬಾರಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ಭಾರತ 2 ವಿಕೆಟ್‍ನಷ್ಟಕ್ಕೆ 212 ರನ್‍ಗಳ ಬೃಹತ್ ಮೊತ್ತ ಪೇರಿಸಿತು.

ರನ್ ಏರಿದ್ದು ಹೇಗೆ:
35 ಎಸೆತ 50 ರನ್
68 ಎಸೆತ 100 ರನ್
99 ಎಸೆತ 150 ರನ್
115 ಎಸೆತ 200 ರನ್
120 ಎಸೆತ 212 ರನ್

Live Tv
[brid partner=56869869 player=32851 video=960834 autoplay=true]

Share This Article