ಜಮೈಕಾ: ಬುಧವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯವನ್ನು ಇಂಡಿಯಾ 6 ವಿಕೆಟ್ ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು 2 -0 ಅಂತರದಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 99 ಎಸೆತಗಳಲ್ಲಿ 14 ಬೌಂಡರಿಯೊಂದಿಗೆ ಭರ್ಜರಿ 114 ರನ್ ಸಿಡಿಸಿದ ಕೊಹ್ಲಿ ತನ್ನ ಏಕದಿನ ವೃತ್ತಿ ಜೀವನದ 43 ಶತಕ ಸಿಡಿಸಿದರು. ಇದರ ಜೊತೆಗೆ ಒಂದು ದಶಕದಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿನಲ್ಲಿ 20 ಸಾವಿರ ರನ್ ಹೊಡೆದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.
Advertisement
Advertisement
ಕೊಹ್ಲಿ ಅವರನ್ನು ಬಿಟ್ಟರೆ ಒಂದು ದಶಕದಲ್ಲಿ ಹೆಚ್ಚು ರನ್ ಹೊಡೆದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 18,962 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಲ್‍ರೌಂಡರ್ ಜ್ಯಾಕ್ ಕಾಲಿಸ್ 16,777 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಆಟಗಾರರಾದ ಮಹೇಲಾ ಜಯವರ್ಧನೆ (16,304 ರನ್), ಕುಮಾರ್ ಸಂಗಕ್ಕಾರ (15,999 ರನ್), ಸಚಿನ್ ತೆಂಡೂಲ್ಕರ್ (15,962 ರನ್), ರಾಹುಲ್ ದ್ರಾವಿಡ್ (15,853 ರನ್) ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ (15,185 ರನ್) ಬಾರಿಸಿ ನಂತರದ ಸ್ಥಾನದಲ್ಲಿ ಇದ್ದಾರೆ.
Advertisement
Advertisement
ಇದರ ಜೊತೆಗೆ ಒಂದು ತಂಡದ ವಿರುದ್ಧ ಹೆಚ್ಚು ಶತಕ ಸಿಡಿಸಿರುವ ದಾಖಲೆಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಜೊತೆ ಕೊಹ್ಲಿ ಸಮಬಲ ಸಾಧಿಸಿದ್ದಾರೆ. ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಒಂದೇ ತಂಡದ ವಿರುದ್ಧ 9 ಶತಕ ಸಿಡಿಸಿದ್ದಾರೆ. ಆದರಂತೆ ಸಚಿನ್ ಕೂಡ ಆಸ್ಟ್ರೇಲಿಯಾ ತಂಡದ ವಿರುದ್ಧ 9 ಶತಕ ಸಿಡಿಸಿದ್ದರು. ಕೊಹ್ಲಿ ಈಗಾಗಲೇ ಏಕದಿನ ಪಂದ್ಯಗಳಲ್ಲಿ 43 ಶತಕ ಸಿಡಿಸಿದ್ದು, ಇನ್ನೊಂದು ಶತಕ ಸಿಡಿಸಿದರೆ ನಾಯಕನಾಗಿ ರಿಕಿ ಪಾಂಟಿಂಗ್ ಸಿಡಿಸಿದ ಅತೀ ಹೆಚ್ಚು ಶತಕಗಳ ದಾಖಲೆಯಲ್ಲಿ ಸಮಬಲ ಸಾಧಿಸಲಿದ್ದಾರೆ.
ಕೊಹ್ಲಿ ಈ ಸಾಧನೆಯ ಜೊತೆಗೆ ವಿಂಡೀಸ್ ವಿರುದ್ಧವೇ ಮತ್ತೊಂದು ದಾಖಲೆ ಬರೆದಿದ್ದಾರೆ. ವಿಂಡೀಸ್ ವಿರುದ್ಧ ಅತಿ ಹೆಚ್ಚು ರನ್(1931*)ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ.
ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಬಲದಿಂದ ಭಾರತ 6 ವಿಕೆಟ್ ಗಳ ಜಯ ಸಾಧಿಸಿತು. ಇದರ ಜೊತೆಗೆ 3 ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು. ಮಳೆಯಿಂದಾಗಿ 35 ಓವರ್ ಗಳಿಗೆ ಕಡಿತಗೊಂಡಿದ್ದರಿಂದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಕ್ರಿಸ್ ಗೇಲ್ ಅವರ ಅರ್ಧಶತಕದ ನೆರೆವಿನಿಂದ 7 ವಿಕೆಟ್ ನಷ್ಟಕ್ಕೆ 240 ರನ್ ಸೇರಿಸಿತು.
ಇದನ್ನು ಬೆನ್ನಟ್ಟಿದ ಭಾರತ ಅರಂಭಿಕ ಅಘಾತ ಅನುಭವಿಸಿತು. 10 ರನ್ ಗಳಿಸಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಬೇಗನೇ ಔಟ್ ಆದರು. ಅವರ ಬೆನ್ನಲ್ಲೇ 36 ರನ್ ಗಳಿಸಿದ ಶಿಖರ್ ಧವನ್ ಔಟ್ ಆದರು. ವಿಕೆಟ್ ಕೀಪರ್ ರಿಷಬ್ ಪಂತ್ ಡಕ್ ಔಟ್ ಆದ ನಂತರ ಜೊತೆಯಾದ ಕೊಹ್ಲಿ ಮತ್ತು ಅಯ್ಯರ್ 120 ರನ್‍ಗಳ ಶತಕದ ಜೊತೆಯಾಟವಾಡಿದರು. ಇದರಲ್ಲಿ ಕೊಹ್ಲಿ 99 ಎಸೆತಗಳಲ್ಲಿ 14 ಬೌಂಡರಿ ಜೊತೆಗೆ 114 ರನ್ ಸಿಡಿಸಿದರೆ ಕೊಹ್ಲಿಗೆ ಉತ್ತಮ ಸಾಥ್ ಕೊಟ್ಟ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ನೊಂದಿಗೆ 65 ರನ್ ಸಿಡಿಸಿ ಭಾರತವನ್ನು ಗೆಲುವಿನ ದಡಕ್ಕೆ ಸೇರಿಸಿದರು.