ಭಾರತಕ್ಕೆ (India) ಗಡಿ ಭಾಗಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕಾಟ ಹೆಚ್ಚಾಗಿದೆ. ಗಡಿಯಲ್ಲಿ ಭದ್ರತೆ ಹೆಚ್ಚಿಸಿಕೊಳ್ಳಲು ಸುಧಾರಿತ ಯುದ್ಧೋಪಕರಣಗಳನ್ನು ದೇಶ ಅಭಿವೃದ್ಧಿಪಡಿಸುತ್ತಿದೆ. ತನ್ನ ಸೇನಾ ಸಾಮರ್ಥ್ಯದ ಮೂಲಕ ಮಗ್ಗುಲು ಮುಳ್ಳಾಗಿರುವವರನ್ನು ಹಿಮ್ಮೆಟ್ಟಿಸಲು ಅವಿರತ ಶ್ರಮಿಸುತ್ತಿದೆ. ರಷ್ಯಾ-ಉಕ್ರೇನ್ (Russia-Ukraine War) ಯುದ್ಧದಿಂದ ಭಾರತ ಸಾಕಷ್ಟು ಪಾಠ ಕಲಿತಿದೆ. ನಮ್ಮ ನೆರೆ-ಹೊರೆಯವರೇ ಹೇಗೆ ನಮಗೆ ಅಪಾಯ ಎಂಬುದಕ್ಕೆ ಈ ಎರಡು ರಾಷ್ಟ್ರಗಳ ನಡುವಿನ ಯುದ್ಧವೇ ಸ್ಪಷ್ಟ ನಿದರ್ಶನ. ಇದರಿಂದ ಎಚ್ಚೆತ್ತುಕೊಂಡಿರುವ ಭಾರತ ಗಡಿ ಭಾಗಗಳಲ್ಲಿ ಹೈಅಲರ್ಟ್ ಆಗಿದೆ. ಪೂರ್ವ ಲಡಾಖ್‌ನಲ್ಲಿ ಚೀನಾ ಸೈನಿಕರ ಉಪಟಳವನ್ನು ನಿಯಂತ್ರಿಸಲು ಭಾರತ ‘ಮೌಂಟೆನ್ ಟ್ಯಾಂಕ್’ ಅಭಿವೃದ್ಧಿಪಡಿಸಿದೆ. ಈಗ ಸೇನೆಗೆ ಆನೆ ಬಲ ಬಂದಂತಾಗಿದೆ.
ಏನಿದು ಮೌಂಟೆನ್ ಟ್ಯಾಂಕ್? ಇದರ ವಿಶೇಷತೆಗಳೇನು? ಇದು ಸ್ವದೇಶಿ ನಿರ್ಮಿತವೇ? ಶತ್ರುಗಳನ್ನು ಬಗ್ಗುಬಡಿಯಲು ಎಷ್ಟು ಸಮರ್ಥವಾಗಿದೆ? ಪೂರ್ವ ಲಡಾಖ್‌ನಲ್ಲಿ ನಿಯೋಜನೆ ಏಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ವಿವರ. ಇದನ್ನೂ ಓದಿ: ಸಿಖ್ಖರ ವಿರುದ್ಧ ಹೇಳಿಕೆಗೆ ತೀವ್ರ ಆಕ್ಷೇಪ – ರಾಹುಲ್ ಗಾಂಧಿ ವಿರುದ್ಧ 3 ಎಫ್‌ಐಆರ್
Advertisement
Advertisement
ಭಾರತ-ಚೀನಾ ‘ಲಡಾಖ್’ ಬಿಕ್ಕಟ್ಟು ಏನು?
ಯುದ್ಧ ಟ್ಯಾಂಕರ್ ಬಗ್ಗೆ ತಿಳಿಯುವ ಮುನ್ನ ನಾವು ಭಾರತ-ಚೀನಾ (India-China) ಗಡಿ ಬಿಕ್ಕಟ್ಟಿನ ಹಿನ್ನೆಲೆ ತಿಳಿಯಬೇಕಿದೆ. ಸ್ವಾತಂತ್ರ್ಯಾನಂತರ ಭಾರತದ ಸುತ್ತಲ ಗಡಿಯು ಬಗೆಹರಿಯದ ಸಮಸ್ಯೆಯಾಗಿದೆ. ಅದರಲ್ಲೂ ಲಡಾಖ್‌ನಲ್ಲಿ ಚೀನಾ ಆಗಾಗ್ಗೆ ಕ್ಯಾತೆ ತೆಗೆಯುತ್ತಿರುತ್ತದೆ. ಲಡಾಖ್ ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ಸೇರಿಲ್ಲ. ಸ್ವಾತಂತ್ರ್ಯ ಬಂದ ನಂತರ ರೂಪಿಸಲಾದ ಗಡಿಗಳನ್ನು ಚೀನಾ ಒಪ್ಪಿಕೊಂಡಿಲ್ಲ. ಈಗಲೂ ಪೂರ್ವ ಲಡಾಖ್‌ನ 60,000 ಚದರ ಕಿ.ಮೀ.ಗಿಂತಲೂ ತನ್ನದೆಂದು ಡ್ರ್ಯಾಗನ್ ರಾಷ್ಟ್ರ ಹೇಳುತ್ತಿದೆ. 1962ರ ಯುದ್ಧದ ನಂತರ ಎರಡೂ ದೇಶಗಳ ಸೈನಿಕರು ಕದನ ವಿರಾಮ ರೇಖೆ ಘೋಷಿಸಿಕೊಂಡರು. ಅದೇ ‘ವಾಸ್ತವ ನಿಯಂತ್ರಣ ರೇಖೆ’. 2020ರಲ್ಲಿ ಈ ರೇಖೆಯನ್ನು ಬದಲಿಸಲು ಚೀನಾ ಮುಂದಾಯಿತು. ಪರಿಣಾಮವಾಗಿ ಗಲ್ವಾನ್, ಪ್ಯಾಂಗಾಂಗ್ ಸರೋವರದ ಬಳಿಕ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷವೂ ನಡೆಯಿತು. ಚೀನಾ ಈಗಲೂ ಹಂತಹಂತವಾಗಿ ಲಡಾಖ್ ಅನ್ನು ಮುತ್ತುತ್ತಿದೆ. ಹೀಗಾಗಿ ಗಡಿ ಭಾಗದಲ್ಲಿ ಭಾರತ ಸೇನಾ ಭದ್ರತೆ ಹೆಚ್ಚಿಸಲು ಕ್ರಮವಹಿಸಿದೆ.
Advertisement
26 ಗಸ್ತು ಠಾಣೆಗಳನ್ನು ಕಳೆದುಕೊಂಡಿದೆ ಭಾರತ
ಲಡಾಖ್‌ನಲ್ಲಿ ಇರುವ ವಾಸ್ತವ ಗಡಿ ರೇಖೆ (ಎಲ್‌ಎಸಿ) ಉದ್ದಕ್ಕೂ 65 ಗಸ್ತು ಠಾಣೆಗಳನ್ನು ಭಾರತ ಹೊಂದಿತ್ತು. ಅವುಗಳ ಪೈಕಿ ಈಗ 26 ಗಸ್ತು ಠಾಣೆಗಳನ್ನು ಭಾರತ ಕಳೆದುಕೊಂಡಿದೆ. ಈ ಭಾಗಗಳಲ್ಲಿ ಸೇನೆಯು ಗಸ್ತು ತಿರುಗದೇ ಇರುವುದು ಮತ್ತು ಜನರೂ ಅತ್ತ ಸುಳಿಯದಂತೆ ನಿರ್ಬಂಧ ಹೇರಿರುವ ಕಾರಣ, ಆ ಗಸ್ತು ಠಾಣೆಗಳಿಗೆ ಮತ್ತೆ ಹೋಗಲು ಚೀನಾ ಸೇನೆ ಬಿಡುತ್ತಿಲ್ಲ. ಇದರಿಂದ ಭಾರತ 26 ಗಸ್ತು ಠಾಣೆಗಳನ್ನು ಕಳೆದುಕೊಳ್ಳುವಂತಾಗಿದೆ. ಇದನ್ನೂ ಓದಿ: Manipur | ಸಚಿವರ ಆಪ್ತ ಸಹಾಯಕನೇ ಕಿಡ್ನ್ಯಾಪ್ – ದುಷ್ಕರ್ಮಿಗಳ ಗುಂಪಿಗೆ ತೀವ್ರ ಶೋಧ
Advertisement
ಭಾರತೀಯ ಸೇನೆಗೆ ‘ಜೋರಾವರ್’ ಬಲ!
ಗಡಿಗಳಲ್ಲಿ ಶತ್ರುಗಳನ್ನು ಎದುರಿಸಲು ಭಾರತ ‘ಮೌಂಟೆನ್ ಟ್ಯಾಂಕ್’ (Mountain Tank) ಅಭಿವೃದ್ಧಿಪಡಿಸಿದೆ. ಪರ್ವತಗಳಂತಹ ಕಡಿದಾದ ಭಾಗಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಲಾರ್ಸೆನ್ ಮತ್ತು ಟೂಬ್ರೊ ಸಹಯೋಗದಲ್ಲಿ ಡಿಆರ್‌ಡಿಒ ಇದನ್ನು ಅಭಿವೃದ್ಧಿಪಡಿಸಿದೆ. ಪರ್ವತ ಪ್ರದೇಶಗಳಂತಹ ಭಾಗಗಳಲ್ಲಿ ಯುದ್ಧಕ್ಕಾಗಿ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಭಾರತದ ಮೊದಲ ಟ್ಯಾಂಕರ್ ಇದು. ಇದರ ಹೆಸರು ‘ಜೊರಾವರ್’. ಲಡಾಖ್‌ನ ಪರ್ವತ ಪ್ರದೇಶ ಭಾಗಗಳಲ್ಲಿ ಚೀನಾದೊಂದಿಗೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟನ್ನು ನಿರ್ವಹಿಸಲು ಇದನ್ನು ರೂಪಿಸಲಾಗಿದೆ. ಎತ್ತರದ ಪ್ರದೇಶಗಳಲ್ಲಿ ‘ಮೌಂಟೆನ್ ಟ್ಯಾಂಕ್’ ನಿಯೋಜನೆಗೆ ಸಿದ್ಧವಾಗಿದೆ.
‘ಜೊರಾವರ್’ ವಿಶೇಷತೆಗಳೇನು?
* ತೂಕ: ಟ್ಯಾಂಕ್ 25 ಟನ್ ತೂಗುತ್ತದೆ. ಇದು ಹಗುರವಾದ ಮತ್ತು ಪರ್ವತ ಭೂಪ್ರದೇಶದಲ್ಲಿ ಬಳಸಲು ಸೂಕ್ತವಾಗಿದೆ.
* ಚಲನಶೀಲತೆ: ಹೆಲಿಕಾಪ್ಟರ್‌ಗಳನ್ನು ಒಳಗೊಂಡಂತೆ ಇದನ್ನು ವಾಯುಯಾನದ ಮೂಲಕವೂ ಸಾಗಿಸಬಹುದು. ಇದು ತಲುಪಲು ಕಷ್ಟವಾದ ಪ್ರದೇಶಗಳಲ್ಲಿ ತ್ವರಿತವಾಗಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ.
* ವೇಗ: ನೆಲದಲ್ಲಿ ಗಂಟೆಗೆ ಸುಮಾರು 60 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
* ಶಸ್ತ್ರಾಸ್ತ್ರ: ‘ಜೊರಾವರ್’ (Zorawar) 105 ಮಿಲಿಮೀಟರ್ ಗನ್, ಮೆಷಿನ್ ಗನ್ ಮತ್ತು ಟ್ಯಾಂಕ್ ವಿರೋಧಿ ಮಾರ್ಗಸೂಚಿ ಕ್ಷಿಪಣಿಗಳ ವ್ಯವಸ್ಥೆಯನ್ನು ಹೊಂದಿದೆ.
ಅಭಿವೃದ್ಧಿಗೆ ಬೇಕಾಯ್ತು 3 ವರ್ಷ
ಜೊರಾವರ್ ಅಭಿವೃದ್ಧಿಗೆ ಸುಮಾರು ಮೂರು ವರ್ಷಗಳು ಬೇಕಾಯಿತು. ಪಂಜಾಬಿ ಭಾಷೆಯಲ್ಲಿ ಜೊರಾವರ್ ಎಂದರೆ ‘ಧೈರ್ಯಶಾಲಿ’. ಜಮ್ಮುವಿನ ಡೋಗ್ರಾ ರಾಜವಂಶದ ರಾಜಾ ಗುಲಾಬ್ ಸಿಂಗ್ ಸಂಸ್ಥಾನದಲ್ಲಿ ಸೇವೆ ಸಲ್ಲಿಸಿದ ಮತ್ತು ಲಡಾಖ್‌ನ್ನು ವಶಪಡಿಸಿಕೊಳ್ಳುವ ಮೂಲಕ ಡೋಗ್ರಾ ಪ್ರದೇಶವನ್ನು ವಿಸ್ತರಿಸಲು ಸಹಾಯ ಮಾಡಿದ್ದ ಮಿಲಿಟರಿ ನಾಯಕ ಜನರಲ್ ಜೊರಾವರ್ ಸಿಂಗ್ ಕಹ್ಲುರಿಯಾ ಅವರ ಹೆಸರನ್ನೇ ‘ಮೌಂಟೆನ್ ಟ್ಯಾಂಕ್’ಗೆ ಇಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಟ್ಯಾಂಕ್ ಸಂಪೂರ್ಣವಾಗಿ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಜಾರ್ಖಂಡ್‍ನಿಂದ ನೀರು ಜಾಸ್ತಿ ಬಿಟ್ಟಿದ್ದಕ್ಕೆ ಬಂಗಾಳದಲ್ಲಿ ಪ್ರವಾಹ: ಮಮತಾ ಆಕ್ರೋಶ
ಜೊರಾವರ್ ಯುದ್ಧ ಟ್ಯಾಂಕ್‌ನ ಪ್ರಾಥಮಿಕ ಪ್ರಯೋಗಗಳು ಯಶಸ್ವಿಯಾಗಿವೆ. ರಕ್ಷಣಾ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವಲ್ಲಿ ಭಾರತಕ್ಕೆ ಒಂದು ದೊಡ್ಡ ಹೆಜ್ಜೆಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೊಂದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಟ್ಯಾಂಕ್ ಮರುಭೂಮಿಯ ಭೂಪ್ರದೇಶದಲ್ಲಿ ನಡೆಸಿದ ಪ್ರಯೋಗಗಳಲ್ಲಿ ಟ್ಯಾಂಕ್ ಅಸಾಧಾರಣ ಕಾರ್ಯಕ್ಷಮತೆ ಪ್ರದರ್ಶಿಸಿತು. ಪರ್ವತಮಯ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ.
ಪರ್ವತ ಪ್ರದೇಶಗಳಲ್ಲಿ 350 ಯುದ್ಧ ಟ್ಯಾಂಕ್ ನಿಯೋಜಿಸಲು ಪ್ಲ್ಯಾನ್
ಭಾರತೀಯ ಸೇನೆಯು ಸುಮಾರು 350 ಜೊರಾವರ್ ಟ್ಯಾಂಕ್‌ಗಳನ್ನು ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ನಿಯೋಜಿಸಲು ಯೋಜಿಸಿದೆ. ಭಾರವಾದ ‘ಅರ್ಜುನ್ ಯುದ್ಧ ಟ್ಯಾಂಕ್’ಗಳಿಗೆ ಹೋಲಿಸಿದರೆ, ಜೊರಾವರ್ ಹೆಚ್ಚು ಹಗುರವಾಗಿರುತ್ತದೆ. ಗುಡ್ಡಗಾಡು ಪ್ರದೇಶಗಳಿಗೆ ಇದು ಹೆಚ್ಚು ಸೂಕ್ತವಾಗಿವೆ. ವಿಶೇಷವಾಗಿ ಲಡಾಖ್‌ನಂತಹ ಎತ್ತರದ ಪ್ರದೇಶಗಳಲ್ಲಿ ಸೇನೆಯು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಅರ್ಜುನ್ ಯುದ್ಧ ಟ್ಯಾಂಕ್ 58.5 ಟನ್ ತೂಕವಿದೆ. ಚೀನಾದೊಂದಿಗಿನ ಸಂಘರ್ಷದ ಸಂದರ್ಭದಲ್ಲಿ ಗುಡ್ಡಗಾಡು ಮತ್ತು ಎತ್ತರದ ಪ್ರದೇಶಗಳಲ್ಲಿ ಇದನ್ನು ಸಮರ್ಥವಾಗಿ ಬಳಸುವುದು ಕಷ್ಟ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಹಗುರವಾದ ಟ್ಯಾಂಕ್‌ನ ಅಗತ್ಯತೆ ಇದೆ ಎನಿಸಿತು.
ಕಾಲಕ್ಕೆ ತಕ್ಕಂತೆ ನವೀಕರಿಸುವ ವೈಶಿಷ್ಟ್ಯ
ಜೊರಾವರ್ ಮಾಡ್ಯುಲರ್ ವಿನ್ಯಾಸವನ್ನು ಹೊಂದಿದೆ. ಅಂದರೆ ಕಾಲಾನಂತರದಲ್ಲಿ ಹೊಸ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಅದನ್ನು ನವೀಕರಿಸಬಹುದು. ಯುದ್ಧದ ಅಗತ್ಯತೆಗಳು ಮತ್ತು ತಂತ್ರಜ್ಞಾನವು ವಿಕಸನಗೊಂಡಂತೆ ಟ್ಯಾಂಕ್ ಪ್ರಸ್ತುತವಾಗಿ ಉಳಿಯುತ್ತದೆ. ಎತ್ತರದ ಕೋನಗಳಲ್ಲಿ ಗುಂಡು ಹಾರಿಸುವ ಸಾಮರ್ಥ್ಯವನ್ನೂ ಹೊಂದಿದೆ. ಯುದ್ಧ ಟ್ಯಾಂಕ್ ಸೀಮಿತ ಫಿರಂಗಿ ಪಾತ್ರವನ್ನು ನಿರ್ವಹಿಸಬಲ್ಲದು. ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ಅಮೂಲ್ಯವಾದ ಆಸ್ತಿಯಾಗಿದೆ. ಇದನ್ನೂ ಓದಿ: ದಿಢೀರ್ ಬಾಯ್ತೆರೆದ ರಸ್ತೆ – ಮುಳುಗಿತು ನೀರಿನ ಟ್ಯಾಂಕರ್