ಹರಾರೆ: ಅಭಿಷೇಕ್ ಶರ್ಮಾ (Abhishek Sharma) ಸ್ಫೋಟಕ ಶತಕ, ರುತುರಾಜ್ ಗಾಯಕ್ವಾಡ್ , ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು (Team India) ಜಿಂಬಾಬ್ವೆ ವಿರುದ್ಧ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಇಲ್ಲಿನ ಹರಾರೆ ಸ್ಫೋರ್ಟ್ ಕ್ಲಬ್ ಮೈದಾನದಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಸಿಡಿಸಿತ್ತು. 235 ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದ ಜಿಂಬಾಬ್ವೆ 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಹ್ಯಾಟ್ರಿಕ್ ಸಿಕ್ಸರ್ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್ ಶರ್ಮಾ!
Advertisement
Advertisement
ಚೇಸಿಂಗ್ ಆರಂಭಿಸಿದ ಜಿಂಬಾಬ್ವೆ ಮೊದಲ ಓವರ್‌ನಿಂದಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 2ನೇ ವಿಕೆಟ್‌ಗೆ 15 ಎಸೆತಗಳಲ್ಲಿ 36 ರನ್‌ಗಳ ಸ್ಫೋಟಕ ಜೊತೆಯಾಟ ನಂತರ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಲು ವಿಫಲರಾದರು. ಅವೇಶ್ ಖಾನ್, ಮುಕೇಶ್ ಕುಮಾರ್ (Mukesh Kumar) ಬೌಲಿಂಗ್ ಪ್ರಹಾರಕ್ಕೆ ಜಿಂಬಾಬ್ವೆ ಬ್ಯಾಟರ್‌ಗಳು ಮಕಾಡೆ ಮಲಗಿದರು. ಅಂತಿಮವಾಗಿ ಭಾರತ 100 ರನ್‌ಗಳ ಗೆಲುವು ಸಾಧಿಸಿತು.
Advertisement
Advertisement
ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 43 ರನ್, ಬ್ರಿಯಾನ್ ಬೆನೆಟ್ (Brian Bennett) 26 ರನ್, ಲ್ಯೂಕ್ ಜೊಂಗ್ವೆ 33 ರನ್ ಗಳಿಸಿದರು. ಇನ್ನೂ ಮಾರಕ ಬೌಲಿಂಗ್ ದಾಳಿ ನಡೆಸಿದ ಮುಕೇಶ್ ಕುಮಾರ್ ಮತ್ತು ಅವೇಶ್ ಖಾನ್ ತಲಾ 3 ವಿಕೆಟ್ ಕಿತ್ತರೆ, ರವಿ ಬಿಷ್ಣೋಯಿ 2 ವಿಕೆಟ್, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು. ಇದನ್ನೂ ಓದಿ: ಮುಂಬೈನಲ್ಲಿ ದೇಶದ 2ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಪ್ಲ್ಯಾನ್!
ಚೊಚ್ಚಲ ಸರಣಿಯಲ್ಲೇ ಬೆಂಕಿ ಶತಕ:
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ, 234 ರನ್ ಬಾರಿಸಿತ್ತು. ಐಪಿಎಲ್ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನಾಡುತ್ತಿರುವ ಪಂಜಾಬ್ ಮೂಲದ ಅಭಿಷೇಕ್ ಶರ್ಮಾ ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಮೊದಲ 33 ಎಸೆತಗಳಲ್ಲಿ 50 ರನ್ ಬಾರಿಸಿದ್ದ ಅಭಿ, ಮುಂದಿನ 13 ಎಸೆತಗಳಲ್ಲಿ 50 ರನ್ ಚಚ್ಚಿ ಶತಕ ಪೂರೈಸಿದ್ದಾರೆ. ಇದರಲ್ಲಿ 8 ಸಿಕ್ಸರ್, 7 ಬೌಂಡರಿಗಳೂ ಸೇರಿವೆ.
ಮಿಂಚಿದ ರಿಂಕು, ರುತು:
ಇತ್ತ ಅಭಿಷೇಕ್ ಶರ್ಮಾ ಶತಕ ಸಿಡಿಸಿ ಪೆವಿಲಿಯನ್ ಹಾದಿ ಹಿಡಿಯುತ್ತಿದ್ದಂತೆ ಜೊತೆಗೂಡಿದ ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್ ಜೋಡಿ ಬ್ಯಾಟಿಂಗ್ ಅಬ್ಬರ ಮುಂದುವರಿಸಿತು. ಮುರಿಯದ 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 87 ರನ್ ಚಚ್ಚಿತು. ಇದರಿಂದ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರುತುರಾಜ್ 47 ಎಸೆತಗಳಲ್ಲಿ 77 ರನ್ (1 ಸಿಕ್ಸರ್, 11 ಬೌಂಡರಿ) ಚಚ್ಚಿದರೆ, ರಿಂಕು ಸಿಂಗ್ ಸ್ಫೋಟಕ 48 ರನ್ (22 ಎಸೆತ, 5 ಸಿಕ್ಸರ್, 2 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ನಾಯಕ ಶುಭಮನ್ ಗಿಲ್ 2 ರನ್ ಗಳಿಸಿದರು.