ಟ್ರಿನಿನಾಡ್: ನಾಯಕ ರೋಹಿತ್ ಶರ್ಮಾರ ಆಕರ್ಷಕ ಅರ್ಧಶತಕ ಹಾಗೂ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಟಿ20 ಸರಣಿಯ ಮೊದಲ ಪಂದ್ಯದಲ್ಲೇ ವೆಸ್ಟ್ ಇಂಡೀಸ್ ವಿರುದ್ಧ 68 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಥಿತೇಯ ವೆಸ್ಟ್‌ಇಂಡೀಸ್‌ಗೆ ತವರಿನಲ್ಲೇ ವೈಟ್‌ವಾಶ್ ಮಾಡಿದ ಟೀಂ ಇಂಡಿಯಾ, ಜಯದ ಅಬ್ಬರ ಮುಂದುವರಿಸಿದೆ.
Advertisement
Advertisement
ಇಲ್ಲಿನ ಬ್ರಯಾನ್ ಲಾರಾ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 190 ರನ್‌ಗಳಿಸಿ ಆಥಿತೇಯರಿಗೆ 191 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಗಿ ಭಾರತದ ಎದುರು ಮಂಡಿಯೂರಿತು.
Advertisement
Advertisement
ಟಾಸ್ ಸೋತು ನಂತರ ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡವು ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತು. ಪವರ್ ಪ್ಲೇ ಮುಗಿಯುವ ಹೊತ್ತಿಗೆ ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳನ್ನು ಕಸಿದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಕೈಲ್ ಮೇಯರ್ಸ್ ಹಾಗೂ ಶಮರ್ ಬ್ರೂಕ್ಸ್ ಸ್ಥಿರವಾಗಿ ನಿಲ್ಲಲಿಲ್ಲ. ಕೈಲ್ ಮೇಯರ್ಸ್ 6 ಎಸೆತಗಳಲ್ಲಿ 15 ರನ್ ಗಳಿಸಿದರೆ, ಬ್ರೂಕ್ಸ್ 15 ಎಸೆತಗಳಲ್ಲಿ 20 ರನ್‌ಗಳನ್ನು ಗಳಿಸಿ ಪೆವಿಲಿಯನ್ ಸೇರಿದರು.
2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಭರವಸೆಯ ಆಟಗಾರ ಜೇಸನ್ ಹೋಲ್ಡರ್ 4 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದರು. ಉತ್ತಮ ಬ್ಯಾಟಿಂಗ್ ನಿರೀಕ್ಷೆಯಲ್ಲಿದ್ದ ನಾಯಕ ನಿಕೋಲಸ್ ಪೂರನ್ 18ರನ್ ಗಳಿಸಿದರೆ, ರೋವ್ಮನ್ ಪೊವೆಲ್ ಹಾಗೂ ಶಿಮ್ರಾನ್ ಹೆಟ್ಮೆಯರ್ ತಲಾ 14 ರನ್ ಗಳಿಸಿ ಔಟಾದರು. 11 ಓವರ್ ಪೂರೈಸುವ ಹೊತ್ತಿಗೆ 82 ರನ್‌ಗಳನ್ನು ಗಳಿಸಿದ್ದ ವೆಸ್ಟ್ ಇಂಡೀಸ್ 5 ವಿಕೆಟ್‌ಗಳನ್ನು ಕಳೆದುಕೊಂಡು ಬಹುತೇಕ ಸೋಲಿನ ಹಾದಿಯನ್ನು ಕಂಡಿತ್ತು. ಪ್ರಮುಖ ಬ್ಯಾಟರ್‌ಗಳ ಬ್ಯಾಟಿಂಗ್ ವೈಫಲ್ಯದಿಂದ ವೆಸ್ಟ್ ಇಂಡೀಸ್ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಸೋಲಿನ ರುಚಿ ಕಂಡಿತು.
ವಿಂಡೀಸ್ ಪರ ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರೆ, ಒಬೆಡ್ ಮೆಕಾಯ್, ಜೇಸನ್ ಹೋಲ್ಡರ್, ಅಕೀಲ್ ಹೊಸೈನ್, ಕೀಮೋ ಪೌಲ್ ತಲಾ ಒಂದೊಂದು ವಿಕೆಟ್ ಪಡೆದರು.
ಟೀಂ ಇಂಡಿಯಾ ಅಬ್ಬರ: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ ಕೇವಲ 4.4 ಓವರ್‌ಗಳಲ್ಲೇ 44 ರನ್ ಕಲೆಹಾಕಿದರು. ಇದೇ ವೇಳೆ 24 ರನ್‌ಗಳಿಸಿದ್ದ ಸೂರ್ಯಕುಮಾರ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ನಂತರದಲ್ಲಿ ಕ್ರೀಸ್‌ಗಿಳಿದ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ನಿರ್ಗಮಿಸಿದರೆ, ರಿಷಭ್ ಪಂತ್ 14 ರನ್, ಹಾರ್ದಿಕ್ ಪಾಂಡ್ಯ 1 ರನ್ ಹಾಗೂ ರವೀಂದ್ರ ಜಡೇಜಾ 16 ರನ್‌ಗಳಿಸಿದರು. ಭರವಸೆಯ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಕೊನೆಯಲ್ಲಿ ಬಂದ ದಿನೇಶ್ ಕಾರ್ತಿಕ್ ನಾಯಕ ರೋಹಿತ್ ಶರ್ಮಾಗೆ ಜೊತೆಯಾದರು.
ಹಿಟ್ ಮ್ಯಾನ್ ರೋಹಿತ್, ಡಿಕೆ ಬ್ಯಾಟಿಂಗ್ ಅಬ್ಬರ: ನಾಯಕನ ಆಟವಾಡಿದ ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್ (7 ಬೌಂಡರಿ, 2 ಸಿಕ್ಸರ್) ಬಾರಿಸಿದರೆ, ದಿನೇಶ್ ಕಾರ್ತಿಕ್ ಕೇವಲ 19 ಎಸೆತಗಳಲ್ಲಿ 41 ರನ್(4 ಬೌಂಡರಿ, 2 ಸಿಕ್ಸರ್) ಸಿಡಿಸಿ ವೆಸ್ಟ್ ಇಂಡೀಸ್ ಬೌಲರ್‌ಗಳ ಬೆವರಿಳಿಸಿದರು.
ಕೊನೆಯಲ್ಲಿ ದಿನೇಶ್ ಕಾರ್ತಿಕ್ ಹಾಗೂ ರವಿಚಂದ್ರನ್ ಅಶ್ಚಿನ್ ಅವರ ಬಿರುಸಿನ ಆಟದಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 190 ರನ್ ಚಚ್ಚಿತ್ತು. ಇವರಿಬ್ಬರು 7ನೇ ವಿಕೆಟ್‌ಗೆ 24 ಎಸೆತಗಳಲ್ಲಿ 52 ರನ್ ಕಲೆಹಾಕಿದರು. ದಿನೇಶ್ 19 ಎಸೆತಗಳಲ್ಲಿ 41 ರನ್ ಬಾರಿಸಿದರೆ, ಅವರಿಗೆ ಅಶ್ವಿನ್ 13 ರನ್ ಗಳಿಸಿ, ಅಜೇರಾಗುಳಿದರು.
ಟೀಂ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್, ರವಿ ಬಿಷ್ನೋಯ್, ಅರ್ಶ್‌ದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ರವಿಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ತಲಾ ಒಂದೊಂದು ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿಗೆ ನೆರವಾದರು.
ರನ್ ಏರಿದ್ದು ಹೇಗೆ?
42 ಎಸೆತ, 50 ರನ್
69 ಎಸೆತ, 100 ರನ್
105 ಎಸೆತ, 150 ಎನ್
120 ಎಸೆತ, 190 ರನ್