ವೆಲ್ಲಿಂಗ್ಟನ್: ಟಾಮ್‌ಲ್ಯಾಥಮ್ (Tom Latham) ಭರ್ಜರಿ ಶತಕ ಹಾಗೂ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅರ್ಧಶತಕದ ನೆರವಿನಿಂದ ಕಿವೀಸ್ ಪಡೆ ಟೀಂ ಇಂಡಿಯಾ (Team India) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (New Zealand) ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಕ್ರೀಸ್‌ಗಿಳಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತ್ತು. 307 ರನ್ ಗುರಿ ಬೆನ್ನತ್ತಿದ ಆತಿಥೇಯ ನ್ಯೂಜಿಲೆಂಡ್ ತಂಡ 47.1 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 309 ರನ್ ಗಳಿಸಿ ಗೆಲುವು ಸಾಧಿಸಿತು.
Advertisement
Advertisement
ಕಿವೀಸ್‌ಗೆ ಆರಂಭಿಕ ಆಘಾತ:
ಕಿವೀಸ್ ಪಡೆಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ಡಿವೋನ್ ಕಾನ್ವೆ ಮತ್ತು ಫಿನ್ ಅಲೆನ್ ಅತೀ ಬೇಗನೆ ಪೆವಿಲಿಯನ್ ಸೇರಿದರು. 7.3 ಓವರ್‌ನಲ್ಲಿ ಮೊದಲ ವಿಕೆಟ್ ಜೊತೆಯಾಟಕ್ಕೆ ಕೇವಲ 35 ರನ್ ದಾಖಲಿಸಿತ್ತು. ಫಿನ್ ಅಲೆನ್ 25 ಎಸೆತಗಳಲ್ಲಿ 25 ರನ್ ಗಳಿಸಿದ್ರೆ, ಡಿವೋನ್ ಕಾನ್ವೆ 42 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು.
Advertisement
ಈ ವೇಳೆ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಆಸರೆಯಾದರು. ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿ ಜವಾಬ್ದಾರಿಯುತ ಅರ್ಧ ಶತಕ ಸಿಡಿಸಿದ್ರು. ಅವರೊಂದಿಗೆ ಜೊತೆಯಾದ ಟಾಮ್ ಲ್ಯಾಥಮ್ ಭರ್ಜರಿ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಬೌಲರ್‌ಗಳ ದಾಳಿಯನ್ನ ಧೂಳಿಪಟ ಮಾಡಿ, ಕಿವೀಸ್ ಪಡೆಗೆ ಗೆಲುವು ತಂದುಕೊಟ್ಟರು.
Advertisement
ಶತಕ ವಂಚಿತ ನಾಯಕ, ಲ್ಯಾಥಮ್ ಬ್ಯಾಟಿಂಗ್ ಮಿಂಚಿಂಗ್:
2ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೊನೆಯವರೆಗೂ ಹೋರಾಡಿದ ಕೇನ್ ವಿಲಿಯಮ್ಸನ್ ಕೊನೆಗೂ ಶತಕ ವಂಚಿತರಾದರು. 98 ಎಸೆತಗಳಲ್ಲಿ 94 ರನ್ (7 ಬೌಂಡರಿ, 1 ಸಿಕ್ಸರ್) ಸಿಡಿಸಿ ಜಯದ ಹಾದಿಗೆ ತಲುಪಿಸಿದ್ರು. ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಟಾಮ್‌ಲ್ಯಾಥಮ್ 104 ಎಸೆತಗಳಲ್ಲಿ 145 ಎನ್ ಪೇರಿಸಿ, ಟೀಂ ಇಂಡಿಯಾ ಬೌಲರ್‌ಗಳನ್ನು ಬೆಂಡೆತ್ತಿದರು. ಬರೋಬ್ಬರಿ 19 ಬೌಂಡರಿ, 5 ಸಿಕ್ಸರ್ ಸಿಡಿಸಿ ತಂಡಕ್ಕೆ ಆಸರೆಯಾದರು. ಪರಿಣಾಮ ಕಿವೀಸ್ ಪಡೆ 7 ವಿಕೆಟ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.
ಟೀಂ ಇಂಡಿಯಾ ಪರ ಉಮ್ರಾನ್ ಮಲಿಕ್ 2 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.
ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಸವಾಲಿನ ಗುರಿ ನೀಡಿತ್ತು. ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಜೊತೆಯಾಟಕ್ಕೆ 23.1 ಓವರ್‌ಗಳಲ್ಲಿ 124 ರನ್ ಗಳಿಸಿದರು.
ಶಿಖರ್, ಗಿಲ್, ಅಯ್ಯರ್ ಹೋರಾಟ ವ್ಯರ್ಥ:
ಶಿಖರ್ ಧವನ್ (ShikharDhawan) 77 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 72 ರನ್ ಸಿಡಿಸಿದರೆ, ಗಿಲ್ 65 ಎಸೆತಗಳಲ್ಲಿ 50 ರನ್(1 ಬೌಂಡರಿ, 3 ಸಿಕ್ಸರ್) ಗಳಿಸಿ, ಲಾಕಿ ಫರ್ಗುಸನ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗಿಳಿದ ರಿಷಭ್ ಪಂತ್ 23 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇನ್ನೂ ಈ ಪಂದ್ಯದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ (Suryakumar Yadav) ಕೇವಲ 4 ರನ್ ಬಾರಿಸಿ ಲಾಕಿ ಫರ್ಗುಸನ್‌ಗೆ ವಿಕೆಟ್ ಒಪ್ಪಿಸಿದರು. ಶಾರ್ದುಲ್ ಠಾಕುರ್ 1 ರನ್ ಗಳಿಸಿದರು.
ಶ್ರೇಯಸ್ ಭರ್ಜರಿ ಬ್ಯಾಟಿಂಗ್:
ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ಮಿಂಚಿನ ದಾಳಿ ನಡೆಸಿದ ಶ್ರೇಯಸ್ ಅಯ್ಯರ್ (Shreyas Iyer) ಕಿವೀಸ್ ಪಡೆಯ ಬೌಲರ್‌ಗಳನ್ನು ಬೆಂಡೆತ್ತಿದರು. ಈ ವೇಳೆ ಸಂಜು ಸ್ಯಾಮ್ಸನ್ ಸಹ ಜೊತೆಯಾಗಿ, 94 ರನ್‌ಗಳ ಜೊತೆಯಾಟ ನೀಡಿದರು. ಶ್ರೇಯಸ್ 76 ಎಸೆತಗಳಲ್ಲಿ 80 ರನ್ (4 ಬೌಂಡರಿ, 4 ಸಿಕ್ಸರ್) ಚಚ್ಚಿದರೆ, ಸ್ಯಾಮ್ಸನ್ 36 ರನ್‌ಗಳಿಸಿದರು. ತಂಡದ ಮೊತ್ತ 254 ರನ್‌ಗಳಾಗಿದ್ದಾಗ 36 ರನ್ ಗಳಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಸಿಕ್ಸ್ ಸಿಡಿಸುವ ಬರದಲ್ಲಿ ಕ್ಯಾಚ್ ನೀಡಿ ಔಟಾದರು.
ಕೊನೆಯಲ್ಲಿ ವಾಷಿಂಗ್ಟನ್ ಅಬ್ಬರ:
ಕೊನೆಯಲ್ಲಿ ಕಣಕ್ಕಿಳಿದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸಿಕ್ಸ್, ಬೌಂಡರಿ ಸಿಡಿಸಿದ್ರು. ಕೇವಲ 16 ಎಸೆತಗಳಲ್ಲಿ 37 ರನ್ (3 ಸಿಕ್ಸರ್, 3 ಬೌಂಡರಿ) ಚಚ್ಚಿದರು. ಕೊನೆಗೆ ಭಾರತ 7 ವಿಕೆಟ್ ನಷ್ಟಕ್ಕೆ 306 ರನ್ ಕಲೆಹಾಕಿತು.
ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಆಡಮ್ ಮಿಲ್ನೆ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.