ಲೀಡ್ಸ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ (Test Match) 2ನೇ ದಿನ ಯುವ ನಾಯಕ ಶುಭಮನ್ ಗಿಲ್, ರಿಷಬ್ ಪಂತ್ (Rishabh Pant) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮೊದಲ ಇನ್ನೀಂಗ್ಸ್ನಲ್ಲಿ 471 ರನ್ ಪೇರಿಸಿತು. ಆದ್ರೆ, ಇದಕ್ಕೆ ಇಂಗ್ಲೆಂಡ್ ಕೂಡ ತಿರುಗೇಟು ನೀಡಿದೆ.
ವೇಗಿ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಯ ಹೊರತಾಗಿಯೂ 3 ವಿಕೆಟ್ಗೆ 209 ರನ್ ಗಳಿಸಿ ಸುಸ್ಥಿತಿಯಲ್ಲಿದೆ. ಮೊದಲ ಓವರ್ನ 4ನೇ ಎಸೆತದಲ್ಲಿಯೇ ಇಂಗ್ಲೆಂಡ್ನ ಆರಂಭಿಕ ಬ್ಯಾಟರ್ ಜಾಕ್ ಕ್ರಾವ್ಲಿ (Zak Crawley), ಕರುಣ್ ನಾಯರ್ಗೆ ಸ್ಲಿಪ್ ಕ್ಯಾಚಿತ್ತು ನಿರ್ಗಮಿಸಿದರು. ಆದ್ರೆ 2ನೇ ವಿಕೆಟ್ಗೆ ಜೊತೆಗೂಡಿದ ಒಲ್ಲಿ ಪೋಪ್ ಹಾಗೂ ಬೆನ್ ಡಕೆಟ್ ಶತಕದ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಡಕೆಟ್ ಔಟಾದ ಬಳಿಕ ಕ್ರೀಸ್ಗಿಳಿದ ಜೋ ರೂಟ್ (Joe Root) ಬೃಹತ್ ಮೊತ್ತ ಸಿಡಿಸುವ ನಿರೀಕ್ಷೆ ಹುಟ್ಟಿಸಿದ್ದರು. ಆದ್ರೆ ಇವರ ಆಟಕ್ಕೂ ಬುಮ್ರಾ ಬ್ರೇಕ್ ಹಾಕಿದ್ರು. ಇದನ್ನೂ ಓದಿ: 41 ರನ್ಗಳಿಗೆ 7 ವಿಕೆಟ್ ಪತನ – 500 ರನ್ ಗಡಿಯಲ್ಲಿ ಭಾರತಕ್ಕೆ ಬಿಗ್ ಶಾಕ್!
ಒಂದೆಡೆ ರನ್ ಪೇರಿಸುತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದ ಬುಮ್ರಾ ಅವರು, ಕ್ರಾವ್ಲಿ, ಡಕೆಟ್ ಹಾಗೂ ರೂಟ್ ಅವರಿಗೆ ಪೆವಿಲಿಯನ್ ರೂಟ್ ತೋರಿಸಿದರು. ಆದ್ರೆ ಇತ್ತ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಒಲ್ಲಿ ಪೋಪ್ 100 ರನ್ (131 ಎಸೆತ, 13 ಬೌಂಡರಿ) ಗಳಿಸಿ ಕ್ರೀಸ್ನಲ್ಲಿದ್ದಾರೆ. ಇನ್ನೂ 12 ಎಸೆತಗಳಲ್ಲಿ ಶೂನ್ಯ ಸುತ್ತಿರುವ ಹ್ಯಾರಿ ಬ್ರೂಕ್ ಸಹ ಕ್ರೀಸ್ನಲ್ಲಿದ್ದು ಇಂದು 3ನೇ ದಿನದ ಆಟ ಆರಂಭಿಸಲಿದ್ದಾರೆ. ಇದನ್ನೂ ಓದಿ: ಪಲ್ಟಿ ಹೊಡೆದು ಪಂತ್ ಶತಕ ಸಂಭ್ರಮ – ಧೋನಿ ರೆಕಾರ್ಡ್ ಬ್ರೇಕ್
ಪಂತ್-ಗಿಲ್ ದ್ವಿಶತಕದ ಜೊತೆಯಾಟ
ಶುಕ್ರವಾರ ಅರ್ಧಶತಕ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ರಿಷಬ್ ಪಂತ್ ಶನಿವಾರ ಸ್ಪೋಟಕ ಪ್ರದರ್ಶನಕ್ಕಿಳಿದು ಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಲು ಕಾರಣರಾದರು. ಆ ಮೂಲಕ ಭಾರತ ತಂಡದ ಒಟ್ಟು ಮೂವರು ಬ್ಯಾಟರ್ಗಳು ಶತಕ ಗಳಿಸಿ ಗಮನ ಸೆಳೆದಂತಾಗಿದೆ. ಮೊದಲ ದಿನದಾಟದಂದು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭಮನ್ ಗಿಲ್ ಶತಕ ದಾಖಲಿಸಿದ್ದರು. ಜೈಸ್ವಾಲ್ 159 ಎಸೆತಗಳಲ್ಲಿ 101 ರನ್ ಗಳಿಸಿದ್ರೆ, ಗಿಲ್ 227 ಎಸೆತಗಳಲ್ಲಿ 147 ರನ್ ಗಳಿಸಿದರು. ಪಂತ್ 178 ಎಸೆತಗಳಿಂದ 134 ರನ್ ಸಿಡಿಸಿ ಟೀಕಾಕಾರರಿಗೆ ತಕ್ಕ ಪ್ರತ್ಯುತ್ತರ ನೀಡಿದರು.
2ನೇ ದಿನ ಕ್ರೀಸ್ ಆರಂಭಿಸಿದ ಟೀಂ ಇಂಡಿಯಾ ಗಿಲ್-ಪಂತ್ ದ್ವಿಶತಕದ ಜೊತೆಯಾಟದೊಂದಿಗೆ ತಂಡಕ್ಕೆ ಚೇತರಿಕೆ ನೀಡಿತ್ತು. ಕೊನೆಯ 41 ರನ್ಗಳಿಗೆ 7 ವಿಕೆಟ್ ಕಳೆದುಕೊಳ್ಳುವ ಮೂಲಕ 471 ರನ್ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: England vs India, 1st Test: ಇಂಗ್ಲೆಂಡ್ ನೆಲದಲ್ಲಿ ಮೊದಲ ಪಂದ್ಯದಲ್ಲೇ ಜೈಸ್ವಾಲ್, ಗಿಲ್ ಶತಕದ ಸಾಧನೆ
ಶುಬ್ಮನ್ ಗಿಲ್ ಮತ್ತು ರಿಷಬ್ ಪಂತ್ ನಾಲ್ಕನೇ ವಿಕೆಟ್ಗೆ 209 ರನ್ಗಳ ಪಾಲುದಾರಿಕೆ ನೀಡಿ ತಂಡವನ್ನು ಸುಸ್ಥಿತಿಗೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಅವರಿಬ್ಬರ ವಿಕೆಟ್ಗಳು ಪತನಗೊಂಡ ಬಳಿಕ ಭಾರತ ತಂಡ ನಾಟಕೀಯವಾಗಿ ಕುಸಿತ ಕಂಡಿತು. 28 ರನ್ಗಳ ಅಂತರದಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಭಾರತ ಕಳೆದುಕೊಂಡು ಮೊದಲ ಇನಿಂಗ್ಸ್ ಕೊನೆಗೊಳಿಸಿತು.
ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕರುಣ್ ನಾಯರ್ ಶೂನ್ಯಕ್ಕೆ ತುತ್ತಾದ್ರೆ, ಜಸ್ಪ್ರೀತ್ ಬುಮ್ರಾ ಕೂಡ ಶೂನ್ಯ ಸುತ್ತಿದರು. ರವೀಂದ್ರ ಜಡೇಜಾ 11 ರನ್ ಗಳಿಸಿದ್ರೆ ಉಳಿದವರು ಒಂದಂಕಿ ಮೊತ್ತಕ್ಕೆ ಔಟಾದರು. ಇದನ್ನೂ ಓದಿ: England vs India 1st Test – ಭಾರತಕ್ಕೆ 2 ಬಾರಿ 5 ರನ್!
ಸಂಕ್ಷಿಪ್ತ ಸ್ಕೋರ್
ಭಾರತ: ಮೊದಲ ಇನಿಂಗ್ಸ್ 113 ಓವರ್ಗಳಲ್ಲಿ 471 ರನ್
ಇಂಗ್ಲೆಂಡ್: ಮೊದಲ ಇನಿಂಗ್ಸ್ 49 ಓವರ್ಗಳಲ್ಲಿ 3 ವಿಕೆಟ್ಗೆ 209 ರನ್