ಟೀಂ ಇಂಡಿಯಾಗೆ ಆಸರೆಯಾದ ಪೂಜಾರ, ಕೊಹ್ಲಿ ಜೋಡಿ – ಸವಾಲಿನ ಮೊತ್ತದತ್ತ ತಂಡ

Public TV
2 Min Read
kohli pujra

ಅಡಿಲೆಡ್: ಒವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಸಮಯೋಚಿತ ಆಟ ಪ್ರದರ್ಶಿಸಿದ್ದು, ಪರಿಣಾಮವಾಗಿ ತಂಡ 2ನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ 166 ರನ್ ಮುನ್ನಡೆಯೊಂದಿಗೆ 3ನೇ ದಿನದಾಟವನ್ನು ಅಂತ್ಯಗೊಳಿಸಿದೆ.

ಮಳೆಯಿಂದ ತಡವಾಗಿ ಆರಂಭವಾದ 3ನೇ ದಿನದಾಟದಲ್ಲಿ ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್ ನಲ್ಲಿ 235 ರನ್ ಗಳಿಗೆ ಕಟ್ಟಿಹಾಕಲು ಟೀಂ ಇಂಡಿಯಾ ಯಶಸ್ವಿಯಾಯಿತು. ಇದರೊಂದಿಗೆ ಭಾರತ 15 ರನ್‍ಗಳ ಅಲ್ಪ ಮುನ್ನಡೆಯಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿತು. ತಂಡದ ಪರ ಆರಂಭಿಕ ಮುರಳಿ ವಿಜಯ್ ಹಾಗೂ ಕೆಎಲ್ ರಾಹುಲ್ ಜೋಡಿ ಮೊದಲ ವಿಕೆಟ್‍ಗೆ 63 ರನ್ ಗಳ ಅರ್ಧಶತಕದ ಜೊತೆಯಾಟ ನೀಡಿ ಉತ್ತಮ ಆರಂಭ ನೀಡಿತು. ಆದರೆ ಈ ವೇಳೆ 18 ರನ್ ಗಳಿಸಿದ್ದ ಮುರಳಿ ವಿಜಯ್, ಸ್ಟಾರ್ಕ್‌ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 44 ರನ್ (1 ಸಿಕ್ಸರ್, 3 ಬೌಂಡರಿ) ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಾಹುಲ್ ವಿಕೆಟ್ ಪಡೆದ ಜೋಶ್ ಹ್ಯಾಜಲ್‍ವುಡ್ ತಂಡಕ್ಕೆ ಆಘಾತ ನೀಡಿದರು.

ಈ ಹಂತದಲ್ಲಿ ಒಂದಾದ ವಿರಾಟ್ ಕೊಹ್ಲಿ, ಮೊದಲ ಇನ್ನಿಂಗ್ಸ್ ಶತಕ ವೀರ ಚೇತೇಶ್ವರ ಪೂಜಾರ ಜೋಡಿ ಆಸೀಸ್ ಬೌಲರ್ ಗಳನ್ನು ನಿಧಾನವಾಗಿ ದಂಡಿಸಲು ಆರಂಭಿಸಿದರು. ಈ ಮಧ್ಯೆ ಪೂಜಾರರನ್ನ ಅಂಪೈರ್ 2 ಬಾರಿ ಔಟ್ ಎಂದು ತೀರ್ಪು ನೀಡಿದರು. ಆದರೆ ಡಿಆರ್ ಎಸ್ ಮನವಿಯ ನೆರವಿನಿಂದ ಪೂಜಾರ ಔಟಾಗದೆ ಉಳಿದರು. 3ನೇ ವಿಕೆಟ್‍ಗೆ 71 ರನ್ ಗಳ ಮಹತ್ವದ ಜೊತೆಯಾಟ ನೀಡಿ ಆಸೀಸ್ ಮುಳುವಾಗುವ ಸೂಚನೆ ನೀಡಿದ ಈ ಜೋಡಿಯನ್ನು ಲಯನ್ ಬೇರ್ಪಡಿಸಲು ಯಶಸ್ವಿಯಾದರು. 2ನೇ ಇನ್ನಿಂಗ್ಸ್ ನಲ್ಲಿ 104 ಎಸೆತಗಳನ್ನು ಎದರುಸಿದ ನಾಯಕ ವಿರಾಟ್ ಕೊಹ್ಲಿ 3 ಬೌಂಡರಿ ಸಿಡಿಸಿ 34 ರನ್ ಗಳಿಸಿ ಔಟಾದರು. ಇತ್ತ 127 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 40 ರನ್ ಸಿಡಿಸಿರುವ ಪೂಜಾರ ಹಾಗೂ 1 ರನ್ ಗಳಿಸಿರುವ ರಹಾನೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ಆಸೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ

ಇದಕ್ಕೂ ಮುನ್ನ 3ನೇ ದಿನದಾಟದಲ್ಲಿ ಎರಡೆರಡು ಬಾರಿ ಮಳೆ ಕಾಟ ನೀಡಿತು. ಆದ್ರು ಟೀಂ ಇಂಡಿಯಾ ಬೌಲರ್ ಉತ್ತಮ ಬೌಲಿಂಗ್ ದಾಳಿ ನಡೆಸಿದರು. 2ನೇ ದಿನದಾಟದಲ್ಲಿ ತಂಡಕ್ಕೆ ತಲೆ ನೋವಾಗಿದ್ದ ಟ್ರಾವಿಸ್ ಹೆಡ್ (71 ರನ್) ವಿಕೆಟ್ ಪಡೆಯಲು ಶಮಿ ಯಶಸ್ವಿಯಾದರು. ಮಿಚೆಲ್ ಸ್ಟಾರ್ಕ್ (15), ಜೋಶ್ ಹ್ಯಾಜಲ್‍ವುಡ್ (0) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‍ಗೆ ಸೇರಿದರು. 24 ರನ್ ಗಳಿಸಿದ ನಥನ್ ಲಯನ್ ಅಜೇಯರಾಗಿ ಉಳಿಸಿದರು. ಟೀಂ ಇಂಡಿಯಾ ಪರ ಶಮಿ, ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಬುಮ್ರಾ ಹಾಗೂ ಅಶ್ವಿನ್ ತಲಾ 3 ವಿಕೆಟ್ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *