ಇಂದಿನ ಬಿಡುವಿಲ್ಲದ ಜೀವನ ಶೈಲಿ, ಒತ್ತಡ, ಹೊಂದಾಣಿಕೆ ಕೊರತೆ, ಆರ್ಥಿಕ ಸ್ವಾತಂತ್ರ್ಯ ಹೀಗೆ ಹಲವು ಕಾರಣಗಳಿಂದ ದಿನಬೆಳಗಾದರೆ ವಿಚ್ಛೇದನ ಪ್ರಕರಣಗಳನ್ನು ನೋಡುತ್ತೇವೆ. ಈ ಮಧ್ಯೆಯೇ ʼಸ್ಲೀಪಿಂಗ್ ಡಿವೋರ್ಸ್ʼ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇದರಲ್ಲಿ ದಂಪತಿಗಳು ತಮ್ಮ ಅಗತ್ಯಗಳು ಮತ್ತು ಆರಾಮಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿ ಮಲಗಲು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ ʼಸ್ಲೀಪಿಂಗ್ ಡಿವೋರ್ಸ್ʼ ಪಡೆಯುವವರಲ್ಲಿ ಭಾರತೀಯರು ಮುಂದಿದ್ದಾರೆ. ಹಾಗಾದ್ರೆ ಸ್ಲೀಪಿಂಗ್ ವಿಚ್ಛೇದನಕ್ಕೆ ಕಾರಣಗಳೇನು? ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಏನಿದು ಸ್ಲೀಪ್ ಡಿವೋರ್ಸ್?
ನಿದ್ರಾ ವಿಚ್ಛೇದನವು, ದಂಪತಿಗಳು ತಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಪ್ರತ್ಯೇಕವಾಗಿ ಮಲಗುವುದನ್ನು ಆಯ್ಕೆ ಮಾಡುವ ಪರ್ಯಾಯ ವಿಧಾನವಾಗಿದೆ. ಇದು ಬೇರೆ ಬೇರೆ ಹಾಸಿಗೆಗಳಲ್ಲಿ ಮಲಗುವುದು, ಬೇರೆ ಕೋಣೆಯಲ್ಲಿ ಮಲಗುವುದು ಅಥವಾ ವಿಭಿನ್ನ ವೇಳಾಪಟ್ಟಿಗಳಲ್ಲಿ ಮಲಗುವುದಾಗಿದೆ. ಇದರರ್ಥ ಗಂಡ ಹೆಂಡತಿ ಮಧ್ಯೆ ಸಮಸ್ಯೆ ಇದೆ ಎಂಬುದಲ್ಲ. ಗೊರಕೆ ಸಮಸ್ಯೆ, ವಿಭಿನ್ನ ನಿದ್ರೆಯ ಆದ್ಯತೆಗಳಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಅನೇಕ ದಂಪತಿಗಳು ಈ ವಿಧಾನವನ್ನು ಪಾಲಿಸುತ್ತಿದ್ದಾರೆ. ಪ್ರತ್ಯೇಕವಾಗಿ ಮಲಗುವುದು ಪತಿ ಪತ್ನಿಯರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ ಎನ್ನುವುದನ್ನು ಅಧ್ಯಯನವು ಹೇಳುತ್ತದೆ.
ಸ್ಲೀಪ್ ಡಿವೋರ್ಸ್ ನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
ರೆಸ್‌ಮೆಡ್‌ನ 2025 ರ ಜಾಗತಿಕ ನಿದ್ರೆಯ ಸಮೀಕ್ಷೆಯ ಪ್ರಕಾರ, ನಿದ್ರೆ ವಿಚ್ಛೇದನದಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ 78% ರಷ್ಟು ದಂಪತಿಗಳು ಸ್ಲೀಪ್ ಡಿವೋರ್ಸ್ ಪ್ರವೃತ್ತಿಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇನ್ನು ಉಳಿದಂತೆ ಚೀನಾದಲ್ಲಿ 67% ಮತ್ತು ದಕ್ಷಿಣ ಕೊರಿಯಾ 65% ರಷ್ಟು ದಂಪತಿಗಳು ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಈ ಸಮೀಕ್ಷೆಗೆ 13 ದೇಶಗಳಲ್ಲಿ 30,000 ಕ್ಕೂ ಹೆಚ್ಚು ಜನರನ್ನು ಒಳಪಡಿಸಲಾಗಿದ್ದು, ಈ ಸಮೀಕ್ಷೆಯು ಜಾಗತಿಕ ನಿದ್ರೆಯ ಬಿಕ್ಕಟ್ಟನ್ನು ಬಹಿರಂಗಪಡಿಸಿದೆ. ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ 50% ರಷ್ಟು ದಂಪತಿಗಳು ಒಟ್ಟಿಗೆ ಮಲಗಲು ಇಷ್ಟ ಪಟ್ಟರೆ, ಇನ್ನು 50% ರಷ್ಟು ಪ್ರತ್ಯೇಕವಾಗಿ ಮಲಗಲು ಇಷ್ಟಪಡುತ್ತಾರೆ ಎನ್ನಲಾಗಿದೆ.
2023ರಲ್ಲಿ ಎಎಎಸ್ಎಂ ಸಂಸ್ಥೆಯು ನಿದ್ರೆಯ ಆದ್ಯತೆ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, 42% ಅಮೆರಿಕನ್ನರು ತಮ್ಮ ಸಂಗಾತಿಗಾಗಿ ತಮ್ಮ ನಿದ್ರೆಯ ದಿನಚರಿಯನ್ನು ಅಡ್ಜಸ್ಟ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಪುರುಷರು (25%) ಮಹಿಳೆಯರಿಗಿಂತ (8%) ಸೈಲೆಂಟ್ ಅಲಾರಂ ಬಳಸುವ ಸಾಧ್ಯತೆ ಮೂರು ಪಟ್ಟು ಹೆಚ್ಚು. 33% ವಯಸ್ಕರು ತಮ್ಮ ಸಂಗಾತಿಯ ವೇಳಾಪಟ್ಟಿಗೆ ಹೊಂದಿಕೆಯಾಗುವಂತೆ ತಮ್ಮ ನಿದ್ರೆಯ ಸಮಯವನ್ನು ಬದಲಾಯಿಸುತ್ತಾರೆ ಎನ್ನಲಾಗಿದೆ. 60% ವಯಸ್ಕರು (55-64) ತಮ್ಮ ಸಂಗಾತಿಗಾಗಿ ತಮ್ಮ ನಿದ್ರೆಯ ದಿನಚರಿಯನ್ನು ಬದಲಾಯಿಸುವುದಿಲ್ಲ. 40% ಯುವಕರು (27-42) ಬಯಸಿದ್ದಕ್ಕಿಂತ ಮುಂಚಿತವಾಗಿ ಅಥವಾ ನಂತರ ಮಲಗುತ್ತಾರೆ. 24% ಜನರು ಸಾಂದರ್ಭಿಕವಾಗಿ ಮತ್ತೊಂದು ಕೋಣೆಯಲ್ಲಿ ಮಲಗುತ್ತಾರೆ.
ನಿದ್ರಾಭಂಗಕ್ಕೆ ಪ್ರಮುಖ ಕಾರಣಗಳೇನು?
ನಿದ್ರಾಭಂಗಕ್ಕೆ ಸಾಮಾನ್ಯ ಕಾರಣಗಳಲ್ಲಿ ಸಂಗಾತಿಯ ಗೊರಕೆ, 32% ರಷ್ಟು ಜೋರಾಗಿ ಉಸಿರಾಡುವುದು, 12% ರಷ್ಟು ಚಡಪಡಿಕೆ, 12% ರಷ್ಟು ಹೊಂದಿಕೆಯಾಗದ ನಿದ್ರೆಯ ವೇಳಾಪಟ್ಟಿಗಳು ಹಾಗೂ 8% ರಷ್ಟು ರಾತ್ರಿ ಹಾಸಿಗೆಯ ಮೇಲೆ ತಮ್ಮ ಹೆಚ್ಚು ಸಮಯ ಪರದೆಯಲ್ಲೇ ಕಳೆಯುವುದು ಸೇರಿವೆ. ಈ ಕಾರಣಗಳಿಂದಲೇ ಹೆಚ್ಚಿನವರು ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ನಿದ್ರೆ ಸರಿಯಾಗಿ ಆಗದಿರಲು 69% ರಷ್ಟು ಭಾರತೀಯರಿಗೆ ಒತ್ತಡವು ಪ್ರಮುಖ ಕಾರಣವಾಗಿದೆ. ಇನ್ನು ಉಳಿದಂತೆ ದಕ್ಷಿಣ ಕೊರಿಯಾ, ಥೈಲ್ಯಾಂಡ್, ಸಿಂಗಾಪುರ ಮತ್ತು ಜರ್ಮನಿ ಪ್ರಮುಖ ದೇಶಗಳಲ್ಲಿ ಒತ್ತಡವು ನಿದ್ರಾಭಂಗಕ್ಕೆ ಪ್ರಮುಖ ಕಾರಣವೆಂದು ವರದಿಗಳು ತಿಳಿಸಿವೆ.
ಸ್ಲೀಪ್ ಡಿವೋರ್ಸ್‌ನಿಂದಾಗುವ ಪ್ರಯೋಜನಗಳೇನು?
ನಿದ್ರಾ ವಿಚ್ಛೇದನದಿಂದ ಹಲವಾರು ಪ್ರಯೋಜನಗಳಿವೆ. ಒಬ್ಬರಿಂದ ಇನ್ನೊಬ್ಬರ ನಿದ್ರೆಗೆ ಸಮಸ್ಯೆಯಾಗುವಲ್ಲಿ ಈ ನಿದ್ರಾ ವಿಚ್ಛೇದನವು ಅವರಿಗೆ ಒಳ್ಳೆಯ ನಿದ್ರೆಯನ್ನು ಮಾಡಲು ಸಹಾಯ ಮಾಡುತ್ತದೆ ಎನ್ನುವುದು ಇದನ್ನು ಪ್ರಯತ್ನಿಸಿದವರ ಅಭಿಪ್ರಾಯ. ಹಾಗಾದರೆ ಇದರಿಂದಾಗುವ ಪ್ರಯೋಜನಗಳು ಯಾವುವು?
ಉತ್ತಮ ನಿದ್ರೆಯ ಗುಣಮಟ್ಟ:
ಗೊರಕೆ, ಉರುಳಾಡುವುದು, ತಿರುಗುವುದು ಅಥವಾ ವಿಭಿನ್ನ ನಿದ್ರೆಯ ವೇಳಾಪಟ್ಟಿಗಳಿದ್ದಾಗ ಈ ನಿದ್ರಾ ವಿಚ್ಛೇದನವು ಚೆನ್ನಾಗಿ ನಿದ್ರಿಸಲು ಮತ್ತು ಗುಣಮಟ್ಟದ ನಿದ್ರೆಯನ್ನು ಹೊಂದಲು ಪತಿ ಪತ್ನಿಯರಿಗೆ ಸಹಾಯ ಮಾಡುತ್ತದೆ.
ಸುಧಾರಿತ ಆರೋಗ್ಯ:
ಕಡಿಮೆ ನಿದ್ರೆಯು ಒತ್ತಡ, ತೂಕ ಹೆಚ್ಚಳ, ಹೃದ್ರೋಗ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಾಕಷ್ಟು ವಿಶ್ರಾಂತಿ ಪಡೆಯುವುದು, ಗುಣಮಟ್ಟದ ನಿದ್ರೆಯನ್ನು ಮಾಡುವುದು ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ.
ಸಂಬಂಧ ಸುಧಾರಣೆ:
ಚೆನ್ನಾಗಿ ವಿಶ್ರಾಂತಿ ಪಡೆದ ದಂಪತಿಗಳು ಕಡಿಮೆ ಕಿರಿಕಿರಿಗೆ ಒಳಗಾಗುತ್ತಾರೆ ಮತ್ತು ಪರಸ್ಪರ ಹೆಚ್ಚು ತಾಳ್ಮೆಯಿಂದಿರುತ್ತಾರೆ. ದೈಹಿಕವಾಗಿ ಹಾಸಿಗೆಯನ್ನು ಹಂಚಿಕೊಳ್ಳುವುದಕ್ಕಿಂತ, ಯಾವುದೇ ಕಿರಿಕಿರಿಯಿಲ್ಲದೆ ಗುಣಮಟ್ಟದ ಸಮಯವನ್ನು ಕಳೆಯುವುದು ಕೂಡ ಮುಖ್ಯ.
ವೈಯಕ್ತೀಕರಿಸಿದ ನಿದ್ರೆಯ ವಾತಾವರಣ:
ಕೋಣೆಯ ತಾಪಮಾನ, ಬೆಳಕಿನ ವಿಷಯದಲ್ಲಿ ಕಿತ್ತಾಟ ಇರುವುದಿಲ್ಲ. ಮಲಗುವ ಸಮಯದ ಅಭ್ಯಾಸಗಳಲ್ಲಿ (ಓದುವುದು, ಟಿವಿ ನೋಡುವುದು, ಮೊಬೈಲ್ ಬಳಸುವುದು ಇತ್ಯಾದಿ) ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ.
ಶಿಫ್ಟ್ ಕೆಲಸಕ್ಕೆ ಸಹಾಯ:
ಒಬ್ಬ ಸಂಗಾತಿಯು ತಡರಾತ್ರಿ ಅಥವಾ ಮುಂಜಾನೆ ಕೆಲಸ ಮಾಡಿದರೆ, ಪ್ರತ್ಯೇಕ ಮಲಗುವ ಆಯ್ಕೆಗಳು ಒಬ್ಬರಿಂದ ಇನ್ನೊಬ್ಬರ ನಿದ್ರೆಗಾಗುವ ತೊಂದರೆಯನ್ನು ತಡೆಯುತ್ತವೆ.
ಯಾರೆಲ್ಲಾ ಸ್ಲೀಪ್ ಡಿವೋರ್ಸ್ ಪಡೆಯಬಹುದು?
ಸಂಗಾತಿಗಳಲ್ಲಿ ಒಬ್ಬರು ಇಲ್ಲವೇ ಇಬ್ಬರೂ ಕೂಡ ಸರಿಯಾಗಿ ನಿದ್ರಿಸಲಾಗದಿದ್ದರೆ, ನಿರಂತರವಾಗಿ ಕಿರಿಕಿರಿ ಅನುಭವಿಸುತ್ತಿದ್ದರೆ ಇಲ್ಲವೇ ತೀವ್ರ ಆಯಾಸದ ಅನುಭವಕ್ಕೊಳಪಟ್ಟಿದ್ದರೆ ಸ್ಲೀಪ್ ಡಿವೋರ್ಸ್ ಬಗ್ಗೆ ಯೋಚಿಸಬಹುದು. ನಿದ್ರೆಯ ಸಮಸ್ಯೆಗಳು ಬಿಟ್ಟೂ ಬಿಡದೆ ಕಾಡುತ್ತಿದೆ ಎಂದಾದಲ್ಲಿ ಪ್ರತ್ಯೇಕವಾಗಿ ಮಲಗುವ ಬಗ್ಗೆ ಯೋಚಿಸಬಹುದು. ಒಟ್ಟಾರೆ ಈ ಟ್ರೆಂಡ್‌ನ ಮೂಲ ಉದ್ದೇಶ ಗುಣಮಟ್ಟದ ನಿದ್ರೆಯನ್ನು ಹೊಂದುವುದಾಗಿದೆ. ತಾವು ಸುಖವಾಗಿ, ಶಾಂತವಾಗಿ ಯಾವುದೇ ಅಡೆತಡೆಗಳಿಲ್ಲದೆ ನಿದ್ರಿಸಬೇಕು ಎಂಬುದೇ ಈ ಟ್ರೆಂಡ್‌ನ ಮೂಲ ಉದ್ದೇಶ.