ನವದೆಹಲಿ: ಪಾಕಿಸ್ತಾನವು ಜೋಧ್‍ಪುರ-ಕರಾಚಿಯನ್ನು ಸಂಪರ್ಕಿಸುವ ಥಾರ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಭಾರತ ಜೋಧ್‍ಪುರ-ಮುನಾಬಾವೊ ಸಂಪರ್ಕಿಸುವ ಥಾರ್ ಲಿಂಕ್ ಎಕ್ಸ್‌ಪ್ರೆಸ್ ಅನ್ನು ರದ್ದುಗೊಳಿಸಿದೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ನಿರ್ಧಾರ ಪಾಕಿಸ್ತಾನವನ್ನು ವಿಚಲಿತಗೊಳಿಸಿದ್ದು, ಎರಡೂ ರಾಷ್ಟ್ರಗಳ ಸಂಬಂಧಗಳಲ್ಲಿ ಮತ್ತಷ್ಟು ಬಿರುಕು ಕಾಣಿಸಿಕೊಂಡಿದೆ. ಪಾಕಿಸ್ತಾನ ಜೋಧ್‍ಪುರ-ಕರಾಚಿಯನ್ನು ಸಂಪರ್ಕಿಸುವ ಥಾರ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಿದ್ದರೆ, ಭಾರತ ಈಗ ಜೋಧ್‍ಪುರ-ಮುನಾಬಾವೊ ಸಂಪರ್ಕಿಸುವ ಥಾರ್ ಲಿಂಕ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಬ್ರೇಕ್ ಹಾಕಿದೆ.
Advertisement
ಮುಂದಿನ ಆದೇಶದವರೆಗೆ, ‘ಭಗತ್ ಕಿ ಕೋಥಿ-ಮುನಾಬಾವೊ-ಭಗತ್ ಕಿ ಕೋಥಿ’ ಮತ್ತು ‘ಮುನಾಬಾವೊ- ಜೀರೋ ಪಾಯಿಂಟ್-ಮುನಾಬಾವೊ’ ಥಾರ್ ಎಕ್ಸ್‌ಪ್ರೆಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವಾಯುವ್ಯ ರೈಲ್ವೆ ವಕ್ತಾರ ಅಭಯ್ ಶರ್ಮಾ ಅವರು ತಿಳಿಸಿದ್ದಾರೆ.
Advertisement
Advertisement
ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಆಗಸ್ಟ್ 9ರಂದು ಹೊರಡುವ ರೈಲು ಜೋಧ್‍ಪುರಕ್ಕೆ ಸಂಚರಿಸುವ ಕೊನೆಯ ರೈಲಾಗಿದೆ ಎಂದು ಇಸ್ಲಾಮಾಬಾದ್‍ನಲ್ಲಿ ಘೋಷಿಸಿದ್ದರು. ಅಲ್ಲದೆ ಅಂದು ಸುಮಾರು 45 ಜನರು ಪಾಕಿಸ್ತಾನಕ್ಕೆ ಹೋಗಲು ಟಿಕೆಟ್ ಕಾಯ್ದಿರಿಸಿದ್ದರು ಎಂದು ಎನ್‍ಡಬ್ಲ್ಯುಆರ್ ವಕ್ತಾರರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
Advertisement
ಅಲ್ಲದೆ ಜಮ್ಮು-ಕಾಶ್ಮೀರ ವಿಚಾರಕ್ಕೆ ಕಳೆದ ಗುರುವಾರ ಪಾಕಿಸ್ತಾನವು ಸಂಜೋತಾ ಎಕ್ಸ್‌ಪ್ರೆಸ್ ಸಂಚಾರವನ್ನು ನಿಲ್ಲಿಸಿತ್ತು. ಹೀಗಾಗಿ ಕಳೆದ ವಾರ ದೆಹಲಿಯಿಂದ ಪಂಜಾಬಿನ ಅಟ್ಟಾರಿಗೆ ಸಂಪರ್ಕ ಕಲ್ಪಿಸುವ ಸಂಜೋತಾ ಲಿಂಕ್ ಎಕ್ಸ್‌ಪ್ರೆಸ್ ಅನ್ನು ಭಾರತೀಯ ರೈಲ್ವೇ ಇಲಾಖೆ ಸ್ಥಗಿತಗೊಳಿಸಿತ್ತು.