Connect with us

Cricket

ಬುಮ್ರಾ, ಧವನ್ ಬ್ಯಾಕ್, ರೋಹಿತ್‍ಗೆ ವಿಶ್ರಾಂತಿ – ಲಂಕಾ, ಆಸಿಸ್ ಸರಣಿಗೆ ಭಾರತ ಆಟಗಾರ ಪಟ್ಟಿ ಬಿಡುಗಡೆ

Published

on

ನವದೆಹಲಿ: ಮುಂಬರುವ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ-20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಇಂದು ಆಯ್ಕೆ ಮಾಡಿದ್ದು, ಕಳೆದ ನಾಲ್ಕು ತಿಂಗಳಿಂದ ತಂಡದಿಂದ ಹೊರಗಡೆಯಿದ್ದ ಬೌಲರ್ ಜಸ್ಪ್ರಿತ್ ಬುಮ್ರಾ ಅವರು ಭಾರತದ ತಂಡಕ್ಕೆ ವಾಪಸ್ ಆಗಿದ್ದಾರೆ.

ಬುಮ್ರಾ ಅವರ ಜೊತೆಗೆ ಕಳೆದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಟಿ-20 ಮತ್ತು ಏಕದಿನ ಎರಡು ತಂಡಗಳಿಗೆ ಮರಳಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಸಿಡಿಸಿರುವ ರೋಹಿತ್ ಶರ್ಮಾ ಅವರಿಗೆ ಶ್ರೀಲಂಕಾ ವಿರುದ್ಧದ ಟಿ-20 ಸರಣಿಗೆ ರೆಸ್ಟ್ ನೀಡಲಾಗಿದೆ. ಇವರ ಜೊತೆಗೆ ವೇಗಿ ಮೊಹಮ್ಮದ್ ಶಮಿ ಅವರಿಗೂ ರೆಸ್ಟ್ ನೀಡಲಾಗಿದೆ.

ಬೆನ್ನು ನೋವಿನ ಸಮಸ್ಯೆಯಿಂದ ಶಸ್ತ್ರಚಿಕೆತ್ಸೆಗೆ ಒಳಗಾಗಿದ್ದ ಬುಮ್ರಾ ಅವರು ನಾಲ್ಕು ತಿಂಗಳ ನಂತರ ಭಾರತ ತಂಡಕ್ಕೆ ವಪಾಸ್ ಆಗಿದ್ದಾರೆ. ಅವರು ಕಳೆದ ಆಗಸ್ಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದಾದ ನಂತರ ವಿಶಾಖಪಟ್ಟಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನೆಟ್‍ನಲ್ಲಿ ಬೌಲಿಂಗ್ ಮಾಡಿ ತಮ್ಮ ಫಿಟ್ನೆಸ್ ಸಾಬೀತು ಮಾಡಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದ ಶಿಖರ್ ಧವನ್ ಅವರು ಮತ್ತೆ ತಂಡಕ್ಕೆ ಮರಳಿದ್ದಾರೆ. ಈ ವರ್ಷ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಭಾರತವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರಿಗೆ ಕೊಂಚ ಬ್ರೇಕ್ ನೀಡಲಾಗಿದ್ದು, ಎಂದಿನಂತೆ ನಾಯಕ ಕೊಹ್ಲಿ ಜನವರಿ 5 ರಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ 3 ಟಿ-20 ಸರಣಿ ಮತ್ತು ಜನವರಿ 14 ರಿಂದ ಆರಂಭವಾಗುವ ಆಸ್ಟ್ರೇಲಿಯಾದ ವಿರುದ್ಧದ 3 ಏಕದಿನ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.

ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯು ನವದೆಹಲಿಯಲ್ಲಿ ಈ ಎರಡು ಸರಣಿಗೆ ಆಟಗಾರರನ್ನು ಆಯ್ಕೆ ಮಾಡಿದೆ. ಸಭೆಯ ನಂತರ ಮಾತನಾಡಿದ ಎಂಎಸ್‍ಕೆ ಪ್ರಸಾದ್ ರಿಷಭ್ ಪಂತ್ ಅವರಿಗೆ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಸುಧಾರಿಸಲು ಒಳ್ಳೆಯ ವಿಕೆಟ್ ಕೀಪಿಂಗ್ ಕೋಚ್ ಅನ್ನು ನೇಮಕ ಮಾಡಲಾಗುತ್ತದೆ. ಅವರು ಕೀಪಿಂಗ್ ಅಲ್ಲಿ ಸ್ವಲ್ಪ ಸುಧಾರಿಸಬೇಕಿದೆ ಹಾಗಾಗಿ ತಜ್ಞ ತರಬೇತುದಾರನನ್ನು ನೇಮಕ ಮಾಡುತ್ತೇವೆ ಎಂದು ತಿಳಿಸಿದರು.

ಶ್ರೀಲಂಕಾ ಟಿ-20 ಸರಣಿ:
ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಿವಂ ದುಬೆ, ಯುಜ್ವೇಂದ್ರ ಚಹಲ್, ಕುಲದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್.

ಆಸ್ಟ್ರೇಲಿಯಾ ಏಕದಿನ ಸರಣಿ:
ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದಾರ್ ಜಾಧವ್, ಶಿವಂ ದುಬೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಹಲ್, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಜಸ್ಪ್ರಿತ್ ಬುಮ್ರಾ.

Click to comment

Leave a Reply

Your email address will not be published. Required fields are marked *