– ಇದು ಅನ್ಯಾಯ ಎಂದು ಕರೆದ ಅಮೆರಿಕದ ಸೆನೆಟರ್‌ಗಳು
– ಟ್ರಂಪ್‌ಗೆ ಪತ್ರ ಬರೆದು ದೂರು ಸಲ್ಲಿಕೆ
ವಾಷಿಂಗ್ಟನ್: ಭಾರತದ ಮೇಲೆ ಅಮೆರಿಕ (USA) ಸುಂಕ ಸಮರ ಹಾಕಿದ ಬೆನ್ನಲ್ಲೇ ಭಾರತವೂ (India) ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಸುಂಕ (Tarrif) ವಿಧಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಭಾರತದ ಕೆಲ ವಸ್ತುಗಳಿಗೆ ಅಮೆರಿಕ ಈಗ 50% ಸುಂಕ ವಿಧಿಸಿದೆ. ಆದರೆ ಭಾರತವೂ ಅಮೆರಿಕದಿಂದ ಆಮದಾಗುವ ದ್ವಿದಳ ಧಾನ್ಯಗಳ ಮೇಲೆ 30% ಸುಂಕ ಹೇರಿದೆ.
ಇಬ್ಬರು ಅಮೇರಿಕನ್ ಸೆನೆಟರ್‌ಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಪತ್ರ ಬರೆದು, ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಭಾರತ ವಿಧಿಸಿರುವ 30% ಆಮದು ಸುಂಕವನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಇದು ಅನ್ಯಾಯ ಎಂದು ಕರೆದಿದ್ದಾರೆ.
ಉತ್ತರ ಡಕೋಟಾದ ಕೆವಿನ್ ಕ್ರೇಮರ್ ಮತ್ತು ಮಾಂಟಾನಾದ ಸ್ಟೀವ್ ಡೈನ್ಸ್ ಅವರು ಜ.16 ರಂದು ಬರೆದ ಪತ್ರದಲ್ಲಿ, ಕಳೆದ ವರ್ಷ ಅಕ್ಟೋಬರ್ 30 ರಂದು ಭಾರತವು ಅಮೆರಿಕದ ಹಳದಿ ಬಟಾಣಿಗಳ ಮೇಲೆ 30% ಸುಂಕವನ್ನು ವಿಧಿಸಿದೆ. ಇದು ನವೆಂಬರ್ 1 ರಿಂದ ಜಾರಿಗೆ ಬಂದಿದೆ. ಸರ್ಕಾರ ಇದರ ಬಗ್ಗೆ ಯಾವುದೇ ಪ್ರಚಾರ ಮಾಡದ ಕಾರಣ ಇದು ಅಷ್ಟೊಂದು ಸುದ್ದಿಯಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಇರಾನ್ ಜೊತೆ ವ್ಯಾಪಾರ ಮಾಡಿದ್ರೆ 25% ಸುಂಕ – ಭಾರತದ ಮೇಲೆ ಪರಿಣಾಮ ಏನು?
ಭಾರತದ ಈ ನಿರ್ಧಾರದಿಂದ ಅಮೆರಿಕದ ದ್ವಿದಳ ಧಾನ್ಯ ಬೆಳೆ ಉತ್ಪಾದಕರಿಗೆ ಸಮಸ್ಯೆಯಾಗಿದೆ. ತಮ್ಮ ಉತ್ತಮ ಗುಣಮಟ್ಟದ ಉತ್ಪನ್ನವನ್ನು ಭಾರತಕ್ಕೆ ರಫ್ತು ಮಾಡುವಾಗ ಗಮನಾರ್ಹ ಸ್ಪರ್ಧಾತ್ಮಕ ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಕಡಲೆ, ಒಣಗಿದ ಬೀನ್ಸ್ ಮತ್ತು ಬಟಾಣಿಗಳನ್ನು ಭಾರತೀಯರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅಮೆರಿಕದ ದ್ವಿದಳ ಧಾನ್ಯಗಳ ಭಾರತ ಮೇಲೆ ಗಣನೀಯ ಸುಂಕವನ್ನು ವಿಧಿಸಿದೆ ಎಂದು ದೂರಿದ್ದಾರೆ.
ಅಮೆರಿಕದ ಉತ್ತರ ಡಕೋಟಾ ಮತ್ತು ಮೊಂಟಾನಾ ರಾಜ್ಯದಲ್ಲಿ ಬಟಾಣಿ ಮತ್ತು ದ್ವಿದಳ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಭಾರತವು ವಿಶ್ವದ ಅತಿದೊಡ್ಡ ದ್ವಿದಳ ಧಾನ್ಯಗಳ ಗ್ರಾಹಕವಾಗಿದ್ದು, ಜಾಗತಿಕವಾಗಿ ಬಳಕೆಯ ಪೈಕಿ ಸುಮಾರು 27% ರಷ್ಟು ಭಾರತದಲ್ಲೇ ಬಳಕೆಯಾಗುತ್ತದೆ.
ಭಾರತದ ಮೇಲೆ 50% ತೆರಿಗೆ
ಟ್ರಂಪ್ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡದ ರೂಪದಲ್ಲಿ ಸುಂಕ ಹೇರಿದ್ದಾರೆ. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ 50% ಸುಂಕ ಹೇರಲಾಗಿದೆ.


