ನವದೆಹಲಿ: ಭಾನುವಾರದ ಈಸ್ಟರ್ ದಿನ ಚರ್ಚ್ ಹಾಗೂ ಹೋಟೆಲ್ ಗಳ ಮೇಲೆ ಆತ್ಮಾಹುತಿ ದಾಳಿ ನಡೆಯುವ ಮುನ್ನ ಭಾರತ ಮೂರು ಎಚ್ಚರಿಕೆಯ ಸಂದೇಶಗಳನ್ನು ಶ್ರೀಲಂಕಾಗೆ ನೀಡಿತ್ತು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.
ಈಸ್ಟರ್ ಸ್ಫೋಟ ದುರಂತದಲ್ಲಿ ಇದುವರೆಗೂ 321 ಮಂದಿ ಬಲಿಯಾಗಿದ್ದು, 500 ಮಂದಿ ಗಾಯಗೊಂಡಿದ್ದಾರೆ. ಈ ದಾಳಿ ನಡೆಯುವ ಬಗ್ಗೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮೊದಲಿಗೆ ಏಪ್ರಿಲ್ 4 ರಂದು ಸಂದೇಶ ನೀಡಿತ್ತು. ಕೊಯಂಬತ್ತೂರಿನ ಐಸಿಸ್ ಉಗ್ರರ ಮೇಲಿನ ತನಿಖೆಯ ವೇಳೆ ಶ್ರೀಲಂಕಾದ ನ್ಯಾಷನಲ್ ತೌಹೀದ್ ಜಮಾತ್ (ಎನ್‍ಟಿಜೆ) ಸಂಘಟನೆಯ ಮುಖ್ಯಸ್ಥ ಮೌಲ್ವಿ ಜಹ್ರಾನ್ ಬಿನ್ ಹಶೀಮ್ ವಿಡಿಯೋ ಸಿಕ್ಕಿತ್ತು. ಈ ವಿಚಾರವನ್ನು ಭಾರತ ಶ್ರೀಲಂಕಾದ ಜೊತೆ ಹಂಚಿಕೊಂಡಿತ್ತು.
Advertisement
Advertisement
ಮೊದಲ ಎಚ್ಚರಿಕೆಯ ಸಂದೇಶದಲ್ಲಿ ಶ್ರೀಲಂಕಾದ ಚರ್ಚ್ ಹಾಗೂ ಕೊಲಂಬೋದಲ್ಲಿರುವ ಭಾರತದ ಹೈಕಮಿಷನರ್ ಕಚೇರಿಯನ್ನು ಐಸಿಸ್ ಉಗ್ರರು ಟಾರ್ಗೆಟ್ ಮಾಡಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನು ಭಾರತ ನೀಡಿತ್ತು.
Advertisement
ದಾಳಿ ನಡೆಯುವ ಮುನ್ನ ದಿನವಾದ ಏ.20 ಶನಿವಾರದಂದು, ಮೊದಲ ಎಚ್ಚರಿಕೆ ಸಂದೇಶಕ್ಕಿಂತಲೂ ದಾಳಿ ನಡೆಯಲಿದೆ ಎನ್ನಲಾದ ನಿಖರ ಸ್ಥಳಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತ್ತು. ಮೂರನೇ ಎಚ್ಚರಿಕೆ ಸಂದೇಶ ಆತ್ಮಾಹುತಿ ದಾಳಿ ನಡೆಯುವ ಕೆಲವೇ ಗಂಟೆಗಳ ಮುನ್ನ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ತಂತ್ರಜ್ಞಾನ ಮತ್ತು ವ್ಯಕ್ತಿಗಳ ಮೂಲಗಳಿಂದ ಭಾರತ ದಾಳಿಗೆ ಸಂಬಂಧಿಸಿದ ಖಚಿತ ಮಾಹಿತಿಯನ್ನು ಶ್ರೀಲಂಕಾಗೆ ರವಾನಿಸಿತ್ತು ಎನ್ನುವ ವಿಚಾರವನ್ನು ಮಾಧ್ಯಮಕ್ಕೆ ಸರ್ಕಾರದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಶ್ರೀಲಂಕಾ ಪ್ರಧಾನ ಮಂತ್ರಿ ರಣಲ್ ವಿಕ್ರಮ್‍ಸಿಂಗೆ ಅವರು, ಭಾರತ ಉಗ್ರರ ದಾಳಿ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಿತ್ತು. ಎಚ್ಚರಿಕೆ ಸಿಕ್ಕಿದ್ದರೂ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡು ದಾಳಿಯನ್ನು ತಪ್ಪಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದ್ದಾರೆ.
ಮಾಹಿತಿ ಸಿಕ್ಕಿದ್ದು ಹೇಗೆ?
ಭಾರತದ ತಮಿಳುನಾಡು, ಕೇರಳ ಹಾಗೂ ಶ್ರೀಲಂಕಾದಲ್ಲಿ ಇಸ್ಲಾಮಿಕ್ ಆಡಳಿತ ಜಾರಿ ಮಾಡಲು ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ಮುಖ್ಯಸ್ಥ ವಿಡಿಯೋದಲ್ಲಿ ಕರೆ ನೀಡಿದ್ದ. ಈ ಬಗ್ಗೆ ಭಾರತದ ಗುಪ್ತಚರ ಇಲಾಖೆ ತನಿಖೆ ನಡೆಸಿತ್ತು.
ಈ ವಿಡಿಯೋವನ್ನು ಸಿಡಿ, ಡಿವಿಡಿ, ಪೆನ್ ಡ್ರೈವ್ ಸೇರಿಂತೆ ವಿವಿಧ ಮಾದರಿಗಳಲ್ಲಿ ಸಂಗ್ರಹಿಸಿಡಲಾಗಿತ್ತು. 2018 ಡಿ.19 ರಂದು ಕುಣಿಯಾಮುತ್ತೂರ್, ಉಕ್ಕಡಮ್, ಚೆನ್ನೈನ ಓಟೇರಿ, ವಿಲ್ಲಿಪುರಾಂ ಬಳಿಯ ತಿಂಡಿವಣಂ ಹಾಗು ಕೊಯಮತ್ತೂರಿನ ವೆರೈಟಿ ಹಾಲ್ ರಸ್ತೆಯಲ್ಲಿ ಶಂಕಿತ ಐಸಿಸ್ ಉಗ್ರರನ್ನು ವಶಕ್ಕೆ ಪಡೆಯುವ ವೇಳೆ ಈ ವಿಡಿಯೋ ಸಿಕ್ಕಿತ್ತು. ಬಂಧನಕ್ಕೆ ಒಳಗಾದ 6 ಮಂದಿಯ ವಿಚಾರಣೆ ವೇಳೆ ಹಿಂದೂ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು.
ಹಶೀಮ್ ವಿಡಿಯೋ ತನಿಖೆ ನಡೆಸಿದ ವೇಳೆ ಶ್ರೀಲಂಕಾದಲ್ಲಿರುವ ಕೆಲ ಉಗ್ರರ ಜೊತೆ ಈತನಿಗೆ ಸಂಪರ್ಕ ಇರುವುದು ಸ್ಪಷ್ಟವಾಗಿತ್ತು. ಧರ್ಮದ ಹೆಸರಿನಲ್ಲಿ ಯುವಕರ ತಲೆಕೆಡಿಸಿ ಇಸ್ಲಾಮಿಕ್ ಉಗ್ರ ಸಂಘಟನೆಯತ್ತ ಯುವಕರನ್ನು ಈತ ಸೆಳೆಯುತ್ತಿದ್ದಾನೆ ಎನ್ನುವುದು ದೃಢಪಟ್ಟಿತ್ತು. ಶ್ರೀಲಂಕಾ, ಭಾರತ ಅಲ್ಲದೇ ಬಾಂಗ್ಲಾದೇಶದೊಂದಿಗೂ ಸಂಪರ್ಕ ಹೊಂದಿದ್ದ ವಿಚಾರ ಆತನ ಮೊಬೈಲ್ ಕರೆ ವಿವರಗಳಿಂದ ಮಾಹಿತಿ ಲಭ್ಯವಾಗಿತ್ತು. ಪರಿಣಾಮ ಬಾಂಗ್ಲಾದೇಶ ಕೂಡ ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ ಎನ್ನುವ ಸಲಹೆಯನ್ನು ಭಾರತ ನೀಡಿತ್ತು.
ಶಾಂಗ್ರಿಲಾ ಹೋಟೆಲ್ ನಲ್ಲಿ ಜಹ್ರಾನ್ ಬಿನ್ ಹಶೀಮ್ ಬಾಂಬ್ ಸ್ಫೋಟಿಸಿ ಕೃತ್ಯ ಎಸಗಿದ್ದಾನೆ ಎನ್ನುವ ವಿಚಾರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ.