Cricket

ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ

Published

on

Share this

ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇಯ ಟೆಸ್ಟ್ ಪಂದ್ಯವನ್ನು 8 ವಿಕೆಟ್‍ಗಳಿಂದ ಜಯಗಳಿಸುವ ಮೂಲಕ ಭಾರತ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದು, ಟೆಸ್ಟ್ ಗದೆಯನ್ನು ಸ್ವೀಕರಿಸಿದೆ. ಇದರ ಜೊತೆಗೆ ಐಸಿಸಿಯ 10 ಲಕ್ಷ ಡಾಲರ್(ಅಂದಾಜು 6.51 ಕೋಟಿ ರೂ) ಬಹುಮಾನವನ್ನು ಗೆದ್ದುಕೊಂಡಿದೆ.

ಪ್ರತಿ ವರ್ಷ ಏಪ್ರಿಲ್ 1ರ ಒಳಗಡೆ ಟಾಪ್ ಸ್ಥಾನಗಳಲ್ಲಿರುವ ತಂಡಗಳಿಗೆ ಐಸಿಸಿ ನಗದು ಬಹುಮಾನ ನೀಡುತ್ತಾ ಬಂದಿದೆ. ಟೀಂ ಇಂಡಿಯಾ 122 ರೇಟಿಂಗ್  ಪಡೆಯುವ ಮೂಲಕ ನಂಬರ್ ಒನ್ ಸ್ಥಾನದಲ್ಲಿದ್ದರೆ, 108 ರೇಟಿಂಗ್ ನೊಂದಿಗೆ ಆಸ್ಟ್ರೇಲಿಯಾ ನಂಬರ್ 2 ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ 107 ರೇಟಿಂಗ್ ಗಳಿಸಿರುವ ದಕ್ಷಿಣ ಆಫ್ರಿಕಾ ಇದ್ದರೆ, 101 ರೇಟಿಂಗ್ ನೊಂದಿಗೆ ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ.

ದ್ವಿತೀಯ ಸ್ಥಾನ ಪಡೆದಿರುವ ಆಸ್ಟ್ರೇಲಿಯಾಗೆ 5ಲಕ್ಷ ಡಾಲರ್(ಅಂದಾಜು 3.25 ಕೋಟಿ ರೂ.), ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಗೆ 2 ಲಕ್ಷ ಡಾಲರ್(ಅಂದಾಜು 1.3 ಕೋಟಿ ರೂ.) ಬಹುಮಾನ ಸಿಕ್ಕಿದೆ. 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್‍ಗೆ 1 ಲಕ್ಷ ಡಾಲರ್(65 ಲಕ್ಷ ರೂ.) ಬಹುಮಾನ ಸಿಕ್ಕಿದೆ.

ಟೀಂ ಇಂಡಿಯಾಗೆ ಬಹುಮಾನ ಸಿಕ್ಕಿದ ಹಿನ್ನೆಲೆಯಲ್ಲಿ ಭಾರತ 2016-17ರ ಅವಧಿಯಲ್ಲಿ ಗೆದ್ದಿರುವ ಟೆಸ್ಟ್ ಸರಣಿಯ ವಿವರವನ್ನು ಇಲ್ಲಿ ನೀಡಲಾಗಿದೆ

ನ್ಯೂಜಿಲೆಂಡ್ ವಿರುದ್ಧ 3-0 ಗೆಲುವು
ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ 197 ರನ್‍ಗಳಿಂದ ಗೆದ್ದುಕೊಂಡಿದ್ದರೆ, ಕೋಲ್ಕತ್ತಾದಲ್ಲಿ ನಡೆದ ಎರಡನೇ ಪಂದ್ಯವನ್ನು 178 ರನ್‍ಗಳಿಂದ ಗೆದ್ದುಕೊಂಡಿತ್ತು. ಇಂದೋರ್‍ನಲ್ಲಿ ನಡೆದ ಮೂರನೇ ಪಂದ್ಯವನ್ನು 321 ರನ್‍ಗಳಿಂದ ಗೆಲ್ಲುವ ಮೂಲಕ ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಅಶ್ವಿನ್‍ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು.

ಇಂಗ್ಲೆಂಡ್ ವಿರುದ್ಧ 4-0 ಗೆಲುವು
ರಾಜ್‍ಕೋಟ್‍ನಲ್ಲಿ ನಡೆದ ಮೊದಲ ಪಂದ್ಯ ಡ್ರಾ ಆಗಿದ್ದರೆ, ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 246 ರನ್‍ಗಳಿಂದ ಗೆದ್ದುಕೊಂಡಿತ್ತು. ಮೊಹಾಲಿಯಲ್ಲಿ ನಡೆದ ಮೂರನೇ ಪಂದ್ಯವನ್ನು 8ವಿಕೆಟ್‍ಗಳಿಂದ ಗೆದ್ದುಕೊಂಡಿದ್ದರೆ, ಮುಂಬೈ ನಲ್ಲಿ ನಡೆದ ನಾಲ್ಕನೇಯ ಪಂದ್ಯವನ್ನು ಇನ್ನಿಂಗ್ಸ್ ಮತ್ತು 36 ರನ್‍ಗಳಿಂದ ಗೆದ್ದುಕೊಂಡಿತ್ತು. ಚೆನ್ನೈನಲ್ಲಿ ನಡೆದ 5 ಪಂದ್ಯವನ್ನು ಭಾರತ 1 ಇನ್ನಿಂಗ್ಸ್ ಮತ್ತು 75 ರನ್‍ಗಳಿಂದ ಗೆದ್ದುಕೊಂಡಿತ್ತು. ಸರಣಿಯಲ್ಲಿನ ಅತ್ಯುತ್ತಮ ಆಟಕ್ಕಾಗಿ ವಿರಾಟ್ ಕೊಹ್ಲಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

ಬಾಂಗ್ಲಾ ವಿರುದ್ಧ ಏಕೈಕ ಸರಣಿ ಜಯ
ಹೈದರಾಬಾದ್‍ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ 208 ರನ್‍ಗಳಿಂದ ಗೆದ್ದುಕೊಂಡಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 204 ರನ್, ಎರಡನೇ ಇನ್ನಿಂಗ್ಸ್ ನಲ್ಲಿ 38 ರನ್ ಹೊಡೆದ ವಿರಾಟ್ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

ಆಸ್ಟ್ರೇಲಿಯಾ ವಿರುದ್ಧ 2-1 ಸರಣಿ ಜಯ
ಪುಣೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿದ್ದ ಗೆದ್ದುಕೊಂಡಿದ್ದರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಂಡಿತು. ರಾಂಚಿಯಲ್ಲಿ ನಡೆದ ಮೂರನೇ ಪಂದ್ಯ ಡ್ರಾ ಕಂಡಿತ್ತು. ಹಿಮಾಚಲ ಪ್ರದೇಶ ಧರ್ಮಶಾಲಾದಲ್ಲಿ ನಡೆದ ಕೊನೆಯ ಪಂದ್ಯವನ್ನು ಭಾರತ 8 ವಿಕೆಟ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಬಾರ್ಡರ್ ಗಾವಸ್ಕರ್ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ರವೀಂದ್ರ ಜಡೇಜಾ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿದೆ.

ಟೆಸ್ಟ್ ನಲ್ಲಿ ನಮ್ಮವರೇ ಮಿಂಚಿಂಗ್:
ಬ್ಯಾಟ್ಸ್ ಮನ್‍ಗಳ ಪೈಕಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ 941 ರೇಟಿಂಗ್ ಪಡೆಯುವ ಮೂಲಕ ಮೊದಲನೇಯ ಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ 861  ರೇಟಿಂಗ್  ನೊಂದಿಗೆ  ದ್ವಿತೀಯ ಶ್ರೇಯಾಂಕ ಪಡೆದಿದ್ದಾರೆ. ಬೌಲಿಂಗ್‍ನಲ್ಲಿ ರವೀಂದ್ರ ಜಡೇಜಾ 899 ರೇಟಿಂಗ್ ಪಡೆಯುವ  ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಆರ್ ಅಶ್ವಿನ್ 862 ರೇಟಿಂಗ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ಅಲ್‍ರೌಂಡರ್ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 431 ರೇಟಿಂಗ್ ಗಳಿಸಿ ಮೊದಲ ಸ್ಥಾನಗಳಿಸಿದ್ದರೆ, ಆರ್ ಅಶ್ವಿನ್ 407 ರೇಟಿಂಗ್ ಗಳಿಸಿ  ಎರಡನೇ ಶ್ರೇಯಾಂಕ, ಜಡೇಜಾ 387 ರೇಟಿಂಗ್ ಗಳಿಸಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ.

 

Click to comment

Leave a Reply

Your email address will not be published. Required fields are marked *

Advertisement
Advertisement