– ನೆರವೇರುತ್ತಾ 140 ಕೋಟಿ ಭಾರತೀಯರ ಕನಸು
ಮುಂಬೈ: ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ. ಈ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 299 ರನ್‌ಗಳ ಗುರಿ ನೀಡಿದೆ. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ನೋವನ್ನು ವನಿತೆಯರ ತಂಡ ಮರೆಸುತ್ತಾ ಎಂಬುದನ್ನು ಕಾದುನೋಡಬೇಕಿದೆ. ವೀರವನಿತೆಯರು ವಿಶ್ವಕಪ್ ಎತ್ತಿಹಿಡಿಯೋದನ್ನ ಕಣ್ತುಂಬಿಕೊಳ್ಳಲು ಇಡೀ ದೇಶ ಕಾದುಕುಳಿತಿದೆ.
THE CLASS OF SMRITI MANDHANA…!!!
– She has the most runs for India in a World Cup Edition. 🙇 pic.twitter.com/vWoSj13rWP
— Johns. (@CricCrazyJohns) November 2, 2025
ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಜೋಡಿ ಮೊದಲ ವಿಕೆಟ್‌ಗೆ 106 ಎಸೆತಗಳಲ್ಲಿ 104 ಜೊತೆಯಾಟ ನೀಡಿತು. ಈ ವೇಳೆ 45 ರನ್ (58 ಎಸೆತ, 8 ಬೌಂಡರಿ) ಗಳಿಸಿದ್ದ ಮಂಧಾನ ಕೀಪರ್ ಕ್ಯಾಚ್ ಇತ್ತು ಪೆವಲಿಯನ್‌ಗೆ ಮರಳಿದ್ರು. ಈ ಬೆನ್ನಲ್ಲೇ ಸೆಮಿಫೈನಲ್‌ನಲ್ಲಿ ಆಸೀಸ್ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿ ಜೆಮಿಮಾ ರೊಡ್ರಿಗಸ್ 37 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು, ನಾಯಕಿ ಹರ್ಮನ್ ಪ್ರೀತ್ ಕೌರ್ ಸಗ 20 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿದ್ರು.
ಶಫಾಲಿ, ದೀಪ್ತಿ ಫಿಫ್ಟಿ ಆಟ 
ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದ ಭಾರತಕ್ಕೆ ಶಫಾಲಿ ವರ್ಮಾ, ದೀಪ್ತಿ ಶರ್ಮಾ ಆಸರೆಯಾದರು. ಆರಂಭಿಕಳಾಗಿ ಕಣಕ್ಕಿಳಿದ ಶಫಾಲಿ ವರ್ಮಾ 78 ಎಸೆತಗಳಲ್ಲಿ 87 ರನ್ (2 ಸಿಕ್ಸರ್, 7 ಬೌಂಡರಿ) ಚಚ್ಚಿದ್ರೆ, ಕೊನೆಯವರೆಗೂ ಹೋರಾಡಿದ ದೀಪ್ತಿ ಶರ್ಮಾ 58 ರನ್ (58 ಎಸೆತ, 1 ಸಿಕ್ಸರ್, 3 ಬೌಂಡರಿ) ಬಾರಿಸಿದ್ರು.
ಡೆತ್ ಓವರ್‌ನಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ರಿಚಾ ಘೋಷ್ 24 ಎಸೆತಗಳಲ್ಲಿ 34 ರನ್ (3 ಬೌಂಡರಿ, 2 ಸಿಕ್ಸರ್) ಸಿಡಿಸಿದ್ರು. ಅಮನ್‌ಜೋತ್ ಕೌರ್ 12 ರನ್ ಗಳಿಸಿದ್ರೆ, ರಾಧಾ ಯಾದವ್ 3 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ದಕ್ಷಿಣ ಆಫ್ರಿಕಾ ಪರ ಅಯಬೊಂಗಾ ಖಾಕಾ 3 ವಿಕೆಟ್ ಕಿತ್ತರೆ, ನಾನ್ಕುಲುಲೆಕೊ ಮ್ಲಾಬಾ, ನಾಡಿನ್ ಡಿ ಕ್ಲರ್ಕ್, ಕ್ಲೋಯ್ ಟ್ರೈಯಾನ್ ತಲಾ ಒಂದೊಂದು ವಿಕೆಟ್ ಪಡೆದರು.



