– 1,900 ಕಿಮೀ ಕ್ರಮಿಸಿ ಮೂರ್ತಿಯನ್ನು ಯಶಸ್ವಿಯಾಗಿ ತಲುಪಿಸಿದ ಅಂಚೆ ಇಲಾಖೆ
ಅಯೋಧ್ಯೆ: ಬೆಂಗಳೂರಿನಿಂದ (Bengaluru) ಅಯೋಧ್ಯೆಗೆ (Ayodhya) ಪೋಸ್ಟಲ್ ಮೂಲಕ ಚಿನ್ನದ ರಾಮನ ಮೂರ್ತಿಯನ್ನು ರವಾನಿಸಲಾಗಿದೆ. ಅಂಚೆ ಇಲಾಖೆಯು ತನ್ನ ಲಾಜಿಸ್ಟಿಕ್ ಪೋಸ್ಟ್ ಸೇವೆಯನ್ನು ಬಳಸಿಕೊಂಡು ತಂಜಾವೂರಿನ ಚಿನ್ನದ ವಿಗ್ರಹವನ್ನು ಯಶಸ್ವಿಯಾಗಿ ರವಾನಿಸಿದೆ.
ಶ್ರೀರಾಮನ ಮೂರ್ತಿಯನ್ನು (Shri Ram) ಸಾಂಪ್ರದಾಯಿಕ ತಂಜಾವೂರು ಕಲಾ ಶೈಲಿಯಲ್ಲಿ (Thanjavur Art) ರೂಪಿಸಲಾಗಿದೆ. ಚಿನ್ನದ ಮೂರ್ತಿಯು ಕಲಾತ್ಮಕ ಮತ್ತು ಪಾರಂಪರಿಕ ಮೌಲ್ಯದ ಸಾಂಸ್ಕೃತಿಕ ಕಲಾಕೃತಿಯಾಗಿದೆ. ಈ ಪವಿತ್ರ ಕಲಾಕೃತಿಯನ್ನು ಬೆಂಗಳೂರಿನ ಜಯಶ್ರೀ ಫಣೀಶ್ ಅವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ದಾನ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ 2.5 ಕೋಟಿ ಮೌಲ್ಯದ ಚಿನ್ನದ ರಾಮನ ಮೂರ್ತಿ – ಕರ್ನಾಟಕದ ದಾನಿಯಿಂದ ಕೊಡುಗೆ
12 ಅಡಿ x 8 ಅಡಿ ಅಳತೆ ಮತ್ತು ಸುಮಾರು 800 ಕೆಜಿ ತೂಕದ ಈ ಮೂರ್ತಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಮರದ ಕ್ರೇಟ್‌ನಲ್ಲಿ ಪ್ಯಾಕ್ ಮಾಡಲಾಗಿತ್ತು. ಈ ಪ್ರತಿಮೆಯ ಬೆಲೆ 2.5 ಕೋಟಿ ರೂ. ಇದನ್ನು ನಿರಂತರ ಮೇಲ್ವಿಚಾರಣೆ ಮೂಲಕ ಅಯೋಧ್ಯೆಗೆ ಸಾಗಿಸಲಾಯಿತು. ಇಲಾಖಾ ಅಧಿಕಾರಿಗಳು ಪ್ರಯಾಣದುದ್ದಕ್ಕೂ ವಾಹನವನ್ನು ಬೆಂಗಾವಲು ಮಾಡಿದರು.
ಕಲಾಕೃತಿಯನ್ನು ಹೊತ್ತ ವಾಹನವು ಡಿಸೆಂಬರ್ 17 ರಂದು ಬೆಂಗಳೂರಿನಿಂದ ಹೊರಟು ಸರಿಸುಮಾರು 1,900 ಕಿಲೋಮೀಟರ್ ಕ್ರಮಿಸಿ ಡಿಸೆಂಬರ್ 22 ರಂದು ಸುರಕ್ಷಿತವಾಗಿ ಅಯೋಧ್ಯೆ ತಲುಪಿತು.
ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಬಹು ಅಂಚೆ ವಲಯಗಳ ನಡುವಿನ ನಿಕಟ ಸಮನ್ವಯದ ಮೂಲಕ ಲಾಜಿಸ್ಟಿಕ್ಸ್ ಪೋಸ್ಟ್ ರವಾನೆಯಾಗಿದೆ. ವಿಭಾಗೀಯ ಮುಖ್ಯಸ್ಥರು ಮತ್ತು ಹಿರಿಯ ಅಂಚೆ ಅಧಿಕಾರಿಗಳು ಬೆಂಗಳೂರು-ಹೈದರಾಬಾದ್-ನಾಗ್ಪುರ-ಜಬಲ್ಪುರ-ರೇವಾ-ಪ್ರಯಾಗರಾಜ್-ಅಯೋಧ್ಯಾ ಮಾರ್ಗದಲ್ಲಿ ಸೂಕ್ಷ್ಮವಾಗಿ ಗಮನಿಸಿದರು. ಪ್ರಯಾಣದ ಕೊನೆಯ ಹಂತದಲ್ಲಿ ದಟ್ಟವಾದ ಮಂಜಿನ ಪರಿಸ್ಥಿತಿಯ ಹೊರತಾಗಿಯೂ, ರವಾನೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಯಿತು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಲ್ಲಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸಮ್ಮುಖದಲ್ಲಿ ವಿಗ್ರಹವನ್ನು ಸ್ಥಾಪಿಸಲಾಯಿತು. ಇದನ್ನೂ ಓದಿ: ಅಮೆರಿಕದ ಭಾರೀ ತೂಕದ ಇಂಟರ್‌ನೆಟ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಬಾಹುಬಲಿ
ಅಂಚೆ ಇಲಾಖೆಯ ಕಾರ್ಯವನ್ನು ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ ಶ್ಲಾಘಿಸಿದ್ದಾರೆ. 2.5 ಕೋಟಿ ಮೌಲ್ಯದ ಭಗವಾನ್ ಶ್ರೀರಾಮನ ಬಾಲ್ಯ ರೂಪದ ಅಪರೂಪದ ವರ್ಣಚಿತ್ರವನ್ನು ಅಯೋಧ್ಯೆಗೆ ಸುರಕ್ಷಿತವಾಗಿ ತಲುಪಿಸಿತು ಎಂದು ಬಣ್ಣಿಸಿದ್ದಾರೆ.
ಶ್ರೀರಾಮನ ಮೂರ್ತಿ ಮೌಲ್ಯ 25ರಿಂದ 30 ಕೋಟಿ ರೂ. ಎಂದು ಸುದ್ದಿ ಹರಿದಾಡಿದ್ದವು. ಆದರೆ, ಇದರ ಬೆಲೆ 2.5 ಕೋಟಿ ರೂ. ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.


