ಮುಂಬೈ: ಆಸ್ಪ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು 2-1ರ ಅಂತರದಲ್ಲಿ ಗೆದ್ದು ಇತಿಹಾಸ ಬರೆದಿದ್ದ ಟೀಂ ಇಂಡಿಯಾ ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಣೆ ಮಾಡಿದೆ.
ಟೆಸ್ಟ್ ಸರಣಿಯ ಗೆದ್ದ ಸಂತಸದಲ್ಲಿದ್ದ ತಂಡದ ಆಟಗಾರರು ಹಾಗೂ ಟೀಂ ಮ್ಯಾನೇಜ್‍ಮೆಂಟ್ ಸಿಬ್ಬಂದಿ ಕೂಡ ನಗದು ಬಹುಮಾನ ಪಡೆಯಲಿದ್ದಾರೆ. ಪ್ರಮುಖವಾಗಿ ಆಡುವ 11ರ ಬಳಗದಲ್ಲಿ ಇದ್ದ ಪ್ರತಿ ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷ ರೂ. ಹಾಗೂ ಮೀಸಲು ಆಟಗಾರರು ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. ಮತ್ತು ಕೋಚ್ ಗಳಿಗೆ 25 ಲಕ್ಷ ರೂ. ಪಡೆಯಲಿದ್ದಾರೆ. ಉಳಿದಂತೆ ತಂಡದ ಸಹಾಯಕ ಸಿಬ್ಬಂದಿ ಅವರ ವೇತನಕ್ಕೆ ಸಮಾನವಾಗಿ ಬಹುಮಾನ ಪಡೆಯಲಿದ್ದಾರೆ.
ಇದರಂತೆ ಸರಣಿಯಲ್ಲಿ ಎಲ್ಲಾ 4 ಪಂದ್ಯಗಳನ್ನಾಡಿದ ಆಟಗಾರರು ತಲಾ 60 ಲಕ್ಷ ರೂ. ಬಹುಮಾನವಾಗಿ ಪಡೆಯಲಿದ್ದಾರೆ. ಅಲ್ಲದೇ ಟೆಸ್ಟ್ ಸರಣಿಯ ಗೆಲುವಿನಲ್ಲಿ ಟೀಂ ಇಂಡಿಯಾ ಪರ ಪ್ರಮುಖ ಪಾತ್ರವಹಿಸಿದ್ದ ಚೇತೇಶ್ವರ ಪೂಜಾರ ಅವರಿಗೂ ಭರ್ಜರಿ ಗಿಫ್ಟ್ ನೀಡುವ ಸಾಧ್ಯತೆ ಇದ್ದು, ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ‘ಎ’ ಗ್ರೇಡ್ ಪಟ್ಟಿಯಲ್ಲಿರುವ ಪೂಜಾರನ್ನು ‘ಎ ಪ್ಲಸ್’ ಪಟ್ಟಿಗೆ ಉನ್ನತಿ ನೀಡಲು ಪ್ರಸ್ತಾಪ ಇದೆ ಎನ್ನಲಾಗಿದೆ. ಪ್ರತಿ ವರ್ಷ ಎ ಗ್ರೇಡ್ ಆಟಗಾರರು 5 ಕೋಟಿ ರೂ. ಪಡೆದರೆ, ಎ ಪ್ಲಸ್ ಆಟಗಾರರು ವಾರ್ಷಿಕ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. 2018ರಲ್ಲಿ ಮೊದಲ ಬಾರಿಗೆ ಬಿಸಿಸಿಐ ತನ್ನ ಒಪ್ಪಂದ ಪಟ್ಟಿಯಲ್ಲಿ ಎ ಪ್ಲಸ್ ಶ್ರೇಣಿಯನ್ನು ನೀಡಿತ್ತು.
1947-78ರಲ್ಲಿ ಮೊದಲ ಬಾರಿಗೆ ಆಸೀಸ್ ವಿರುದ್ಧ ಟೆಸ್ಟ್ ಸರಣಿ ಆಡಿದ್ದಟೀಂ ಇಂಡಿಯಾ ಇದೂವರೆಗೂ 12 ಸರಣಿಗಳನ್ನು ಆಡಿತ್ತು. ಆದರೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv