ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಿದ ಭಾರತ- ಪಾಕಿಸ್ತಾನ

Public TV
2 Min Read
kartarpur corridor 1

ಗುರ್ದಾಸ್‍ಪುರ: ಭಾರತ ಹಾಗೂ ಪಾಕಿಸ್ತಾನ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಈ ನಡುವೆಯೂ ಕರ್ತಾರ್ ಪುರ ಕಾರಿಡಾರ್ ನ ಕಾರ್ಯಾಚರಣೆಯ ವಿಧಾನಗಳ ಕುರಿತಾದ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ಇಂದು ಸಹಿ ಹಾಕಿದೆ.

ಭಾರತದ ಪರವಾಗಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್.ಸಿ.ಎಲ್ ದಾಸ್ ಒಪ್ಪಂದಕ್ಕೆ ಸಹಿ ಹಾಕಿದರೆ. ಅತ್ತ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಅವರು ಪಾಕಿಸ್ತಾನದ ಕಡೆಯಿಂದ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ಭಾರತೀಯ ಯಾತ್ರಿಕರು ಹಾಗೂ ವ್ಯಕ್ತಿಗಳಿಗೆ ಕಾರಿಡಾರ್ ಬಳಕೆ ಮಾಡುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಈ ಮೂಲಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿರುವ ಅಂತರರಾಷ್ಟ್ರೀಯ ಗಡಿಯಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿರುವ ಕರ್ತಾರ್ ಪುರದ ದರ್ಬಾರ್ ಸಾಹಿಬ್ ಹಾಗೂ ಪಂಜಾಬ್‍ನ ಡೇರಾ ಬಾಬಾ ನಾನಕ್ ದೇಗುಲ ಯಾತ್ರೆ ವೀಸಾ ಮುಕ್ತವಾಗಿರಲಿದೆ.

kartarpur corridor

2018ರ ನವೆಂಬರ್ 22ರಂದು ಸಂಪುಟ ಸಭೆಯಲ್ಲಿ ಗುರು ನಾನಕ್ ದೇವ್ ಅವರ 550ನೇ ಜಯಂತೋತ್ಸವವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿತ್ತು. ಅಲ್ಲದೆ ಭಾರತೀಯ ಯಾತ್ರಿಕರಿಗೆ ಕರ್ತಾರ್ ಪುರದ ಗುರುದ್ವಾರ ದರ್ಬಾರ್ ಸಾಹಿಬ್‍ಗೆ ಭೇಟಿ ನೀಡಲು ಅನುಕೂಲವಾಗುವಂತೆ ದೇರಾ ಬಾಬಾ ನಾನಕ್ ದೇಗುಲದಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಕರ್ತಾರ್ ಪುರ ಸಾಹಿಬ್ ಕಾರಿಡಾರ್ ನಿರ್ಮಿಸಲು ನಿರ್ಧರಿಸಲಾಗಿತ್ತು.

dera baba nanak

ಆದರೆ, ಪಾಕಿಸ್ತಾನ ಪ್ರತಿ ಯಾತ್ರಿಕರಿಗೆ 20 ಡಾಲರ್ ಸೇವಾ ಶುಲ್ಕ ಹಾಕುವುದಾಗಿ ಹೇಳಿದ್ದು, ಪಾಕಿನ ಕ್ರಮಕ್ಕೆ ಭಾರತ ತೀವ್ರ ಅಸಮಾಧಾನ ಹೊರಹಾಕಿದೆ. ಪಾಕಿಸ್ತಾನ ಸೇವಾ ಶುಲ್ಕದ ಪ್ರಸ್ತಾವನೆಯನ್ನು ಮರುಪರಿಶೀಲಿಸಿ, ಅದನ್ನು ಕಡಿಮೆ ಮಾಡುವಂತೆ ಭಾರತ ಪಾಕ್ ಗೆ ಮನವಿ ಮಾಡಿದೆ.

ವೀಸಾ ಮುಕ್ತವಾಗಿರುವ ಕಾರಣಕ್ಕೆ ಈ ಯಾತ್ರೆಗೆ ಹೋಗುವ ಯಾತ್ರಿಕರು ಸೂಕ್ತ ಪಾಸ್ ಪೋರ್ಟ್ ಮಾತ್ರ ಕೊಂಡೊಯ್ಯಬೇಕು. ಭಾರತೀಯ ಮೂಲದ ಯಾತ್ರಿಕರು ಪಾಸ್‍ಪೋರ್ಟ್ ನೊಂದಿಗೆ ಒಇಸಿ ಅನ್ನು (ಸಾಗರೋತ್ತರ ಪೌರತ್ವ ಕಾರ್ಡ್) ಕೂಡ ಕೊಂಡೊಯ್ಯಬೇಕಾಗುತ್ತದೆ. ಈ ಕಾರಿಡಾರ್ ಮುಂಜಾನೆಯಿಂದ ರಾತ್ರಿಯವರೆಗೆ ತೆರೆದಿರುತ್ತದೆ. ಹೀಗಾಗಿ ಬೆಳಗ್ಗೆ ಯಾತ್ರೆಗೆ ತೆರಳಿದ ಯಾತ್ರಿಕರು ಅದೇ ದಿನ ರಾತ್ರಿಯೊಳಗೆ ಹಿಂದಿರುಗಬೇಕಿದೆ.

kartarpur corridor 2

ಪಾಕಿಸ್ತಾನ ಬಾಬಾ ನಾನಕ್ ಅವರ ದರ್ಶನ ಹಾಗೂ ಪ್ರಸಾದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಹಾಗೆಯೆ ಯಾತ್ರಿಕರು ಆನ್‍ಲೈನ್ ಮೂಲಕ ಯಾತ್ರೆಗೆ ನೋಂದಣಿ ಮಾಡಿಕೊಳ್ಳಬಹುದಾದ ವ್ಯವಸ್ಥೆಯನ್ನು ಕೂಡ ಕೇಂದ್ರ ಸರ್ಕಾರ ಮಾಡಿದ್ದು, https://mha.gov.in/ ಮೂಲಕ ನೊಂದಣಿ ಆಗಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *