ರಿಜ್ವಾನ್‌ಗೆ ಸ್ಲೆಡ್ಜಿಂಗ್ – ನಮಾಜ್‌, ಜೈ ಶ್ರೀರಾಮ್‌ ಫುಲ್‌ ಟ್ರೆಂಡ್!‌

Public TV
2 Min Read
Mohammad Rizwan

ಅಹಮದಾಬಾದ್‌: ಕ್ರಿಕೆಟ್‌ನಲ್ಲಿ ಆಟಗಾರರ ಮಧ್ಯೆ ಸ್ಲೆಡ್ಜಿಂಗ್‌, ಗುರಾಯಿಸುವುದು, ಉದ್ದೇಶಪೂರ್ವಕವಾಗಿ ಕಿರಿಕ್‌ ಮಾಡುವುದು ಸಾಮಾನ್ಯ. ಆದರೆ ಭಾರತ (India) ಮತ್ತು ಪಾಕಿಸ್ತಾನದ (Pakistan) ವಿರುದ್ಧ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಟೀಂ ಇಂಡಿಯಾದ ಅಭಿಮಾನಿಗಳು ಪಾಕ್‌ ಆಟಗಾರ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಅವರಿಗೆ ಸ್ಲೆಡ್ಜಿಂಗ್‌ ಮಾಡಿ ಸುದ್ದಿಯಾಗಿದ್ದಾರೆ.

ರಿಜ್ವಾನ್‌ ಅವರ ವಿರುದ್ಧ ಟೀಂ ಇಂಡಿಯಾ (Team India) ಅಭಿಮಾನಿಗಳು ಮುಗಿಬೀಳಲು ಕಾರಣವಿದೆ. ದುಬೈನಲ್ಲಿ ನಡೆದ 2021ರ ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಭರ್ಜರಿ ಜಯಗಳಿಸಿತ್ತು. ಭಾರತದ ಡ್ರಿಂಕ್ಸ್‌ ಬ್ರೇಕ್‌ ಸಮಯದಲ್ಲಿ ರಿಜ್ವಾನ್‌ ಮೈದಾನದಲ್ಲೇ ನಮಾಜ್‌ ಮಾಡಿದ್ದರು.

ಮೈದಾನದಲ್ಲಿ ನಮಾಜ್‌ ಮಾಡಿದ್ದಕ್ಕೆ ಅಂದೇ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಈ ಪಂದ್ಯದ ನಂತರ ಪಾಕ್‌ ಮಾಜಿ ಆಟಗಾರ ವಾಕರ್ ಯೂನಿಸ್‌ (Waqar Younis) ನೀಡಿದ ಹೇಳಿಕೆ ಸುಂಟರಗಾಳಿ ಎಬ್ಬಿಸಿತ್ತು. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕ್‌ ಗೆಲ್ಲುವುದರ ಜೊತೆಗೆ ಹಿಂದೂಗಳ ಮುಂದೆ ನಮಾಜ್‌ ಮಾಡಿದ್ದು ವಿಶೇಷವಾಗಿತ್ತು ಎಂದು ಹೇಳಿದ್ದರು.  ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ

ಇಂಡೋ ಪಾಕ್‌ ಕ್ರಿಕೆಟ್‌ ಕದನ ನಡೆಯುವ ಮೊದಲು ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿತ್ತು. ಈ ಹೇಳಿಕೆಗೆ ಪೂರಕವಾಗಿ ಪಾಕ್‌ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದರು. ಮೋದಿ ಸ್ಟೇಡಿಯಂನಲ್ಲಿ ಭಾರತ ಸೋಲಬೇಕು ಮತ್ತು ಹಿಂದೂಗಳ ಮುಂದೆ ರಿಜ್ವಾನ್‌ ನಮಾಜ್‌ ಮಾಡುವುದನ್ನು ನೋಡಬೇಕು ಎಂದು ಕಮೆಂಟ್‌ ಮಾಡುತ್ತಿದ್ದರು. ಪಾಕ್‌ ಅಭಿಮಾನಿಗಳ ಆಸೆಯಂತೆ ರಿಜ್ವಾನ್‌ ಅವರು ವಿಶ್ವಕಪ್‌ ಕ್ರಿಕೆಟ್‌ನಲ್ಲಿ ನೆದರ್‌ಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಮೈದಾನದಲ್ಲೇ ನಮಾಜ್‌ ಮಾಡಿದ್ದರು.

 

ಈಗಾಗಲೇ ನಮಾಜ್‌ ಮಾಡಿದ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಮೈದಾನದಲ್ಲಿ ರಿಜ್ವಾನ್‌ ನಮಾಜ್‌ ಮಾಡುತ್ತಾರಾ ಎಂಬ ಕುತೂಹಲ ಇತ್ತು. ಆದರೆ ರಿಜ್ವಾನ್‌ ಅಂಗಳಕ್ಕೆ ಬರುತ್ತಿದ್ದಂತೆ ಮೋದಿ ಸ್ಟೇಡಿಯಂನಲ್ಲಿ ಜೈಶ್ರೀರಾಮ್‌ ಎಂಬ ಘೋಷಣೆ ಮೊಳಗಲು ಆರಂಭವಾಗಿತ್ತು. ರಿಜ್ವಾನ್‌ 49 ರನ್‌ಗಳಿಸಿ ಔಟಾಗಿ ಡ್ರೆಸ್ಸಿಂಗ್‌ ರೂಮ್‌ಗೆ ತೆರಳುತ್ತಿದ್ದಾಗ ಅಭಿಮಾನಿಗಳು ಜೈಶ್ರೀರಾಮ್‌ ಎಂದು ಘೋಷಣೆ ಕೂಗಿದ್ದರು.

ಈ ರೀತಿ ಸ್ಲೆಡ್ಜ್‌ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ, ಕ್ರಿಕೆಟ್‌ನಲ್ಲಿ ಧರ್ಮ ತಂದಿದ್ದು ಮೊದಲು ಅವರು. ಹಿಂದೂಗಳ ಮುಂದೆ ನಮಾಜ್‌ ಮಾಡಿದ್ದು ಎಂಬ ಹೇಳಿಕೆ ಸರಿಯೇ ಎಂದು ಅಭಿಮಾನಿಗಳು ಮರು ಪ್ರಶ್ನೆ ಹಾಕುತ್ತಾರೆ. ಅಷ್ಟೇ ಅಲ್ಲದೇ 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಟೀಂ ಇಂಡಿಯಾದ ಕೊಹ್ಲಿ, ಶಮಿ ಸೇರಿದಂತೆ ಇತರೇ ಆಟಗಾರರನ್ನು ಪಾಕ್‌ ಅಭಿಮಾನಿಗಳು ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದರು. 2019ರ ವಿಶ್ವಕಪ್‌ ವೇಳೆ ಹೋಟೆಲಿನಲ್ಲಿ ಪಾಕ್‌ ಅಭಿಮಾನಿಗಳು ವಿಜಯ್‌ ಶಂಕರ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರನ್ನು ಅವಾಚ್ಯ ಪದ ಬಳಸಿ ನಿಂದನೆ ಮಾಡಿದ್ದು ಸರಿಯೇ ಎಂದು ಕೇಳುತ್ತಾರೆ.

ಸದ್ಯ ಈಗ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ರಿಜ್ವಾನ್‌ ಅವರು ಔಟಾಗಿ ಡ್ರೆಸ್ಸಿಂಗ್‌ ರೂಮಿಗೆ ತೆರಳುವಾಗ ಜೈಶ್ರೀರಾಮ್‌ ಎಂದು ಘೋಷಣೆ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದೆ.

 

Web Stories

Share This Article