ಮುಂಬೈ: ಡಿಸೆಂಬರ್ 15 ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯದ ಏಕದಿನ ಸರಣಿಗೆ ಭಾರತ ತಂಡಕ್ಕೆ ಕನ್ನಡಿಗ ಮಾಯಾಂಕ್ ಅಗರ್ವಾಲ್ ಅವರು ಆಯ್ಕೆಯಾಗಿದ್ದಾರೆ.
ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ, ಅವರ ಬದಲಿಗೆ ಬಿಸಿಸಿಐ ಮಾಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದೆ. ಈ ಹಿಂದೆ ವಿಡೀಸ್ ವಿರುದ್ಧದ ಟಿ-20 ಸರಣಿಗೂ ಶಿಖರ್ ಧವನ್ ಅವರ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿತ್ತು.
Advertisement
Advertisement
ಕರ್ನಾಟಕ ರಾಜ್ಯ ತಂಡದಲ್ಲಿ ಉತ್ತಮ ಓಪನರ್ ಆಗಿರುವ ಮಾಯಾಂಕ್ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದ ಭಾರತದ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಧವನ್ ಅವರ ಬದಲಿಗೆ ಏಕದಿನ ಸರಣಿಗೆ ಆಯ್ಕೆಯಲ್ಲಿ ಪೃಥ್ವಿ ಶಾ, ಶುಭಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್ ನಡುವೆ ಪೈಪೋಟಿ ಇತ್ತು. ಈ ಮೂವರಲ್ಲಿ ಬಿಸಿಸಿಐ ಕೊನೆಯದಾಗಿ ಮಾಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದೆ.
Advertisement
ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮಾಯಾಂಕ್ ಅಗರ್ವಾಲ್ ಏಕದಿನ ಮಾದರಿಯಲ್ಲಿ ಒಳ್ಳೆಯ ಲಯದಲ್ಲಿ ಇದ್ದಾರೆ. ಲಿಸ್ಟ್ ಎ ಪಂದ್ಯಗಳಲ್ಲಿ 101.57 ಸ್ಟ್ರೈಕ್ ರೇಟ್, 50 ಸರಾಸರಿಯಲ್ಲಿ 13 ಶತಕಗಳನ್ನು ಸಿಡಿಸಿದ್ದಾರೆ. ಈ ಕಾರಣದಿಂದ ಮಾಯಾಂಕ್ ಅಗರ್ವಾಲ್ ಅವರನ್ನು ಬಿಸಿಸಿಐ ಧವನ್ ಅವರ ಬದಲಿಗೆ ಆಯ್ಕೆ ಮಾಡಿದೆ.
Advertisement
ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಟಿ-20 ಸರಣಿಯನ್ನು ಆಡುತ್ತಿರವ ಇಂಡಿಯಾ ಮೂರು ಪಂದ್ಯದ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಇಂದು ಮುಂಬೈನ ವಾಖೆಂಡೆ ಮೈದಾನದಲ್ಲಿ ಮೂರನೇ ಪಂದ್ಯ ನಡೆಯಲಿದೆ. ಇದಾದ ನಂತರ ಡಿಸೆಂಬರ್ 15 ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಚೆನ್ನೈ (ಡಿಸೆಂಬರ್ 15), ವಿಶಾಖಪಟ್ಟಣಂ (ಡಿಸೆಂಬರ್ 18) ಮತ್ತು ಕಟಕ್ (ಡಿಸೆಂಬರ್ 22) ನಲ್ಲಿ ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ.
ಭಾರತದ ಏಕದಿನ ತಂಡ
ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಶ್ರೇಯಸ್ ಐಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್, ಶಿವಮ್ ದುಬೆ, ಕೇದರ್ ಜಾಧವ್, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಕಲದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್