ನವದೆಹಲಿ: ಕಾಶ್ಮೀರ ಭಾರತದ ಅವಿಭಾಜ್ಯ. ಈ ಅವಿಭಾಜ್ಯ ಅಂಗವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯನ್ನು ಅಡ್ಡಿಪಡಿಸಲು ಪಾಕಿಸ್ತಾನ ಭಯೋತ್ಪಾದನೆಯನ್ನು ಬಳಸಿಕೊಂಡಿದೆ ಎಂದು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ್ದಕ್ಕೆ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ.
ಭಾರತದ (India) ಪರವಾಗಿ ಮಾತನಾಡಿದ ಭಾರತೀಯ ರಾಜತಾಂತ್ರಿಕ ಭಾವಿಕಾ ಮಂಗಳಾನಂದನ್, ಜಗತ್ತಿಗೆ ತಿಳಿದಿರುವಂತೆ ಪಾಕಿಸ್ತಾನವು (Pakistan) ತನ್ನ ನೆರೆಹೊರೆಯವರ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ. ನಮ್ಮ ಸಂಸತ್ತು, ನಮ್ಮ ಆರ್ಥಿಕ ರಾಜಧಾನಿ ಮುಂಬೈ, ಮಾರುಕಟ್ಟೆ ಸ್ಥಳಗಳು ಮತ್ತು ತೀರ್ಥಯಾತ್ರೆಯ ಮಾರ್ಗಗಳ ಮೇಲೆ ದಾಳಿ ಮಾಡಿದೆ. ಇಂತಹ ದೇಶವು ಹಿಂಸೆಯ ಬಗ್ಗೆ ಮಾತನಾಡುವುದು ಬೂಟಾಟಿಕೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್ ಆದೇಶ
ಭಯೋತ್ಪಾದನೆ ಮತ್ತು ಮಾತುಕತೆಗಳು ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆಯೊಂದಿಗೆ ಯಾವುದೇ ಒಪ್ಪಂದ ಸಾಧ್ಯವಿಲ್ಲ. ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯು ಅನಿವಾರ್ಯವಾಗಿ ಪರಿಣಾಮಗಳನ್ನು ಆಹ್ವಾನಿಸುತ್ತದೆ ಎಂಬುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು. ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಜೊತೆಗಿನ ಪಾಕಿಸ್ತಾನದ ಹಿಂದಿನ ಒಡನಾಟ ಮತ್ತು ಪ್ರಪಂಚದಾದ್ಯಂತದ ಭಯೋತ್ಪಾದಕ ಘಟನೆಗಳಲ್ಲಿ ಪಾಕಿಸ್ತಾನ ನಿಜವಾಗಿಯೂ ಏನೆಂದು ಜಗತ್ತು ಸ್ವತಃ ನೋಡುತ್ತಿದೆ ಎಂದು ಭಾರತ ಹೇಳಿದೆ.
ಇದಕ್ಕೂ ಮೊದಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಪಾಕಿಸ್ತಾನ ಪ್ರಧಾನಿ ಷರೀಫ್, ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪರಿಸ್ಥಿತಿಯನ್ನು ಪ್ಯಾಲೆಸ್ತೀನ್‌ಗೆ (Palestine) ಹೋಲಿಸಿದರು. ಜನರು ತಮ್ಮ ಸ್ವಾತಂತ್ರ್ಯ ಮತ್ತು ಸ್ವಯಂ-ನಿರ್ಣಯದ ಹಕ್ಕಿಗಾಗಿ ಒಂದು ಶತಮಾನದಿಂದ ಹೋರಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಆರ್ಟಿಕಲ್ 370 ರ ರದ್ದತಿಯನ್ನು ಭಾರತಕ್ಕೆ ಹಿಮ್ಮೆಟ್ಟಿಸಲು ಅವರು ಕರೆ ನೀಡಿದರು. ಇದೇ ವೇಳೆ ಕಾಶ್ಮೀರಿ ಜನರ ಇಚ್ಛೆಗೆ ಅನುಗುಣವಾಗಿ ಮಾತುಕತೆಗೆ ಒತ್ತಾಯಿಸಿದರು. ಇದನ್ನೂ ಓದಿ: ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ವಾಯು ದಾಳಿ – ಉಗ್ರರ ಮುಖ್ಯಸ್ಥನೇ ಇಸ್ರೇಲ್ ಗುರಿ